ಮಂಗಳೂರು: ಮಂಗಳೂರಿನಲ್ಲಿ (Mangalore news) ಕಮಿಷನರೆಟ್ ವ್ಯಾಪ್ತಿಯಲ್ಲಿ ಖತರ್ನಾಕ್ ಚಡ್ಡಿ ಗ್ಯಾಂಗ್ (Chaddi gang) ತನ್ನ ಬಾಲ ಬಿಚ್ಚಿದೆ. ಮಂಗಳೂರು ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮತ್ತೊಂದು ದರೋಡೆ (Robbery Case) ನಡೆದಿದ್ದು, ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಲಾಗಿದೆ.
ವಿಕ್ಟರ್ ಮತ್ತು ಪೆಟ್ರೀಷಾ ದಂಪತಿ ಹಲ್ಲೆಗೊಳಗಾದವರು. ರಾತ್ರಿ 2 ಗಂಟೆ ಹೊತ್ತಿಗೆ ಕಿಟಕಿಯ ಸರಳು ಕತ್ತರಿಸಿ ಈ ಚಡ್ಡಿ ಗ್ಯಾಂಗ್ ದಂಪತಿಯ ಮನೆಗೆ ನುಗ್ಗಿದೆ. ಪ್ರತಿರೋಧಿಸಿದ ವೃದ್ಧ ದಂಪತಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ, ನಗದು ಲೂಟಿ ಮಾಡಿದೆ. 4 ಜನ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿತ್ತು.
ಘಟನೆಯಲ್ಲಿ ವಿಕ್ಟರ್ ಅವರಿಗೆ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿದ್ದ ಕಾರನ್ನು ಕೂಡ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಡ್ಡಿ ಟಿಶರ್ಟ್ ಧರಿಸಿ ಬರುವ ಈ ಗ್ಯಾಂಗ್‌ನಲ್ಲಿ 4-5 ಜನರಿದ್ದಾರೆ. ಒಬ್ಬಾತ ರಸ್ತೆಯ ಬದಿಯಲ್ಲಿ ಅವಿತು ಕೂತು ಒಳಗಿದ್ದವರಿಗೆ ಸಿಗ್ನಲ್ ಕೊಟ್ಟರೆ, ಇನ್ನ ಮೂವರು ಒಳಗೆ ನುಗ್ಗಿ ಕಳವು, ದರೋಡೆ ಮಾಡುತ್ತಾರೆ ಎಂದು ಗೊತ್ತಾಗಿದೆ.
ಉಡುಪಿಯಲ್ಲಿ ಕೆಲ ತಿಂಗಳ ಹಿಂದೆ ʼಬನಿಯನ್ ಗ್ಯಾಂಗ್ʼ ಸಕ್ರಿಯವಾಗಿತ್ತು. ಬನಿಯನ್ ಹಾಗೂ ಚಡ್ಡಿ ಧರಿಸಿ ಬರುವ ಈ ಕಳ್ಳರು ಮೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಗಿಳಿಯುತ್ತಾರೆ. ಎಲ್ಲರೂ ಗಾಢ ನಿದ್ರೆ ಜಾರುವ ಸಮಯಕ್ಕೆ ಕಾದುಕುಳಿತು ನಂತರ ಕಳ್ಳತನಕ್ಕೆ ಮುಂದಾಗುತ್ತಾರೆ. ರಾತ್ರೋ ರಾತ್ರಿ ಕಳ್ಳ ಬೆಕ್ಕಿನಂತೆ ನುಗ್ಗುವ ಇವರು ಕ್ಷಣಾರ್ಧದಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿ ಆಗುತ್ತಾರೆ.
ಹೀಗೆ ಚಿತ್ರ-ವಿಚಿತ್ರವಾಗಿ ವೇಷ ಧರಿಸಿ ಬರುವ ಕಳ್ಳರ ಹೆಜ್ಜೆ ಗುರುತು ಪತ್ತೆ ಮಾಡುವುದೇ ಪೊಲೀಸರಿಗೆ ತಲೆನೋವಾಗಿದೆ. ಈ ಕಚ್ಚಾ ಬನಿಯನ್ ಗ್ಯಾಂಗ್ ಪತ್ತೆ ಮಾಡುವುದೇ ಉಡುಪಿ ಪೊಲೀಸರಿಗೆ ಸವಾಲಾಗಿತ್ತು. ಸಂತೆಕಟ್ಟೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಈ ತಂಡದ ಕೃತ್ಯ ಬಯಲಾಗಿತ್ತು. ಕೃತ್ಯದ ಬಳಿಕ ಈ ಗ್ಯಾಂಗ್ ಸಿಂಗಲ್ ಚಪ್ಪಲಿಯನ್ನು ಬಿಟ್ಟು ಹೋಗುತ್ತಿತ್ತು. ಸೊಂಟಕ್ಕೆ ಚಪ್ಪಲಿ ಕಟ್ಟಿಕೊಂಡು ಬರುವ ಈ ಗ್ಯಾಂಗ್ ಡೆಲ್ಲಿ ಕ್ರೈಮ್-2 ವೆಬ್ ಸೀರೀಸ್ ಕಚ್ಚಾ ಬನಿಯನ್ ಗ್ಯಾಂಗ್ ನೆನಪಿಸುವಂತಿತ್ತು.
ಬೆಂಗಳೂರು ಹಾಗೂ ರಾಯಚೂರಿನಲ್ಲೂ ಇಂಥ ಪ್ರಕರಣಗಳು ನಡೆದಿವೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಗ್ಯಾಂಗ್‌ನವರು ಸ್ಥಳೀಯರು ಇರಲಿಕ್ಕಿಲ್ಲ, ಅಂತಾರಾಜ್ಯ ಖದೀಮರಾಗಿರಬಹುದು ಎಂಬುದು ಪೊಲೀಸರ ಅಭಿಪ್ರಾಯವಾಗಿದೆ. ಇವರು ಒಂದು ನಗರದಲ್ಲಿ ದರೋಡೆ ನಡೆಸಿದ ಬಳಿಕ ಸ್ವಲ್ಪ ಕಾಲ ಆ ರಾಜ್ಯವನ್ನೇ ಬಿಟ್ಟು ಇನ್ನೊಂದು ಕಡೆ ಹೋಗಿ ದರೋಡೆ ನಡೆಸುತ್ತಿರುತ್ತಾರೆ. ಇದು ಪೊಲೀಸರ ಹದ್ದಿನಗಣ್ಣಿನಿಂದ ತಪ್ಪಿಸಿಕೊಳ್ಳಲು ಇವರಿಗೆ ನೆರವಾಗುತ್ತಿದೆ ಎನ್ನಲಾಗಿದೆ.
ರೌಡಿಶೀಟರ್ ಕಾಲಿಗೆ ಗುಂಡೇಟು
ಶಿವಮೊಗ್ಗ: ಬೆಳ್ಳಂ ಬೆಳಗ್ಗೆ ಶಿವಮೊಗ್ಗದಲ್ಲಿ (Shivamogga news) ರೌಡಿ ಶೀಟರ್ (rowdy sheeter) ಕಾಲಿಗೆ ಗುಂಡೇಟು ಹಾರಿಸಿ (shoot out) ಗಾಯಗೊಳಿಸಿ ಬಂಧಿಸಲಾಗಿದೆ. ಬಂಧಿಸಲು ಹೋದಾಗ ಈತ ಪೊಲೀಸ್ (Police) ಸಿಬ್ಬಂದಿ ಕಾಲಿಗೆ ಚಾಕುವಿನಿಂದ ಚುಚ್ಚಿ (Stabbing) ಗಾಯಗೊಳಿಸಿದ್ದ.
ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತ್ಯಾಜ್ಯವಳ್ಳಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ರಜಾಕ್ ಎಂಬಾತ ಬಂಧಿತ ರೌಡಿ. ರಜಾಕ್ ಮೇಲೆ ಕೊಲೆ ಯತ್ನ ಸೇರಿ ಐದಾರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಈತನ ಬಂಧನಕ್ಕೆ ತೆರಳಲಾಗಿತ್ತು.
ಈ ಸಂದರ್ಭದಲ್ಲಿ ಆರೋಪಿ ರಜಾಕ್ ಪೊಲೀಸ್ ಸಿಬ್ಬಂದಿ ಅರ್ಜುನ್ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಸಿಬ್ಬಂದಿಯನ್ನು ಪಾರು ಮಾಡಲು ಹಾಗೂ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಲಕ್ಷ್ಮಿಪತಿ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಆರೋಪಿ ರಜಾಕ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Viral Video: ಹಾವನ್ನು ಹಿಡಿದು ಕಚ್ಚಿ ಕಚ್ಚಿ ತಿಂದ! ಜೈಲಿನಿಂದ ರಿಲೀಸ್ ಆಗ್ತಿದ್ದಂತೆ ದರೋಡೆಕೋರನ ವಿಕೃತಿ