ಉಡುಪಿ: ಐಟಿ ದಾಳಿ (IT Raid) ಮಾದರಿಯಲ್ಲಿ ತಂಡ ಕಟ್ಟಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು (Miscreants) ಮನೆ ಲೂಟಿಗೆ (Robbery Case) ಪ್ರಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಆದರೆ ಸೈನ್ ಇನ್ ಸೆಕ್ಯುರಿಟಿ (Sign In Security) ಸಂಸ್ಥೆಯ ಲೈವ್ ಸರ್ವೈಲೆನ್ಸ್ (Live Surveillance) ಹಾಗೂ ತಕ್ಷಣ ಅಲರ್ಟ್ ನೀಡಿದ ಪರಿಣಾಮ ಮನೆಯವರು ಬಾಗಿಲು ತೆಗೆಯದೇ ಇದ್ದುದರಿಂದ, ಸಂಭಾವ್ಯ ದರೋಡೆಯಿಂದ ಪಾರಾಗಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರಿನಲ್ಲಿ ಘಟನೆ ನಡೆದಿದೆ. ಕವಿತಾ ಎಂಬವರ ಮನೆಗೆ ಅಪರಿಚಿತ ದುಷ್ಕರ್ಮಿಗಳು ಎರಡು ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳಲ್ಲಿ ಸರ್ಕಾರಿ ಅಧಿಕಾರಿಗಳಂತೆ ಆಗಮಿಸಿದ್ದಾರೆ. ಜುಲೈ 25ರ ಬೆಳಗ್ಗೆ 8.30ರ ವೇಳೆಗೆ, ಮಳೆ ಸುರಿಯುತ್ತಿದ್ದಾಗ ಹಾಗೂ ಯಾರೂ ಇಲ್ಲದ ಸಮಯ ನೋಡಿ ತಂಡ ಆಗಮಿಸಿತ್ತು. ಗೇಟ್ ತಳ್ಳಿ ತೆರೆಯಲು ಯತ್ನಿಸಿ, ಅದು ತೆರೆದುಕೊಳ್ಳದೆ ಇದ್ದಾಗ ಮುರಿಯಲು ನೋಡಿದ್ದಾರೆ.
ಗೇಟ್ ತೆರೆಯದೆ ಇದ್ದಾಗ ಇನ್ನೊಂದು ಕಡೆಯಿಂದ ಕಂಪೌಂಡ್ ಜಿಗಿದು ಆವರಣ ಪ್ರವೇಶಿಸಿ ಬಾಗಿಲು ಬಡಿದು ಮನೆಯವರನ್ನು ಕರೆದಿದ್ದಾರೆ. ಆದರೆ ಈ ಮನೆಗೆ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಲೈವ್ ಸರ್ವೈಲೆನ್ಸ್ ಅಳವಡಿಸಿದ್ದ ಕಾರಣ, ಸಂಸ್ಥೆಯವರು ಕೂಡಲೇ ಮನೆ ಮಾಲಕಿಗೆ ಅಲರ್ಟ್ ನೀಡಿದ್ದಾರೆ. ಯಾರೋ ಅಕ್ರಮವಾಗಿ ಕೌಂಪೌಂಡ್ ಪ್ರವೇಶಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತುಕೊಂಡ ಮಾಲಕಿ ಬಾಗಿಲು ತೆರೆದಿಲ್ಲ. ಸ್ವಲ್ಪ ಹೊತ್ತು ಕಾದು ಈ ಪುಂಡರ ತಂಡ ಮರಳಿ ಹೋಗಿದೆ.
ಸಿಸಿಟಿವಿಯಲ್ಲಿ ಅಪರಿಚಿತ ತಂಡದ ಕೃತ್ಯದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕುಂದಾಪುರ ವ್ಯಾಪ್ತಿಯಲ್ಲಿ ಹಲವು ಕಳ್ಳತನಗಳನ್ನು ಸೈನ್ ಇನ್ ಸೆಕ್ಯೂರಿಟಿ ವಿಫಲಗೊಳಿಸಿದೆ. ಇದು ಸಿಸಿಟಿವಿ ಅಳವಡಿಸಿರುವ ಮನೆಗೆ 24 ಗಂಟೆಯೂ ಭದ್ರತೆ ನೀಡುತ್ತದೆ. ಯಾವುದಾದ್ರೂ ಅನಪೇಕ್ಷಿತ ಬೆಳವಣಿಗೆ ಕಂಡರೆ ಅಲರ್ಟ್ ಮಾಡುತ್ತದೆ.
ಸುಮಾರು 6-8 ಜನರು ಇದ್ದ ಈ ದುಷ್ಕರ್ಮಿಗಳ ಟೀಮ್‌ನಲ್ಲಿ ಎಲ್ಲರೂ ಟಿಪ್‌ಟಾಪಾಗಿ ದಿರಿಸು ತೊಟ್ಟಿದ್ದರು. ಅವರಲ್ಲಿ ಒಬ್ಬಾತ ಪೊಲೀಸ್ ಪೇದೆಯಂತೆ ಡ್ರೆಸ್ ಧರಿಸಿದ್ದ. ಸಿಸಿಟಿವಿಯಲ್ಲಿ ಮುಖ ಕಾಣದಂತೆ ನೋಡಿಕೊಳ್ಳಲು ಇವರು ಯತ್ನಿಸಿದ್ದಾರೆ. ಮನೆ ಮಾಲಕಿ ಕವಿತಾ ಅವರು ಈ ಬಗ್ಗೆ ದೂರು ನೀಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ
ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಕಸದ ಲಾರಿ (BBMP Lorry) ಮತ್ತೆರಡು ಬಲಿ (Road Accident) ಪಡೆದುಕೊಂಡಿದೆ. ನಗರದ ಹೃದಯ ಭಾಗದ ಕೆಆರ್ ಸರ್ಕಲ್ (KR Circle) ಬಳಿ ಈ ದುರ್ಘಟನೆ ನಡೆದಿದೆ. ಮೃತರಿಬ್ಬರೂ ಟೆಕ್ಕಿಗಳಾಗಿದ್ದು, ಟಿಸಿಎಸ್‌ನಲ್ಲಿ (TCS) ಕೆಲಸ ಮಾಡುತ್ತಿದ್ದರು.
ರಾತ್ರಿ 8.45ರ ಸುಮಾರಿಗೆ ಈ ಭೀಕರ ಅಪಘಾತ ನಡೆದಿದೆ. ಪ್ರಶಾಂತ್ (25), ಬಯನ್ನಗಾರಿ ಶಿಲ್ಪ (27) ಮೃತ ದುರ್ದೈವಿಗಳು. ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿಯ ಯುವಕ. ಶಿಲ್ಪ ಆಂಧ್ರ ಮೂಲದವಳು. ಪ್ರಶಾಂತ್ ಮತ್ತು ಯುವತಿ ಇಬ್ಬರು ಸಹೋದ್ಯೋಗಿಗಳಾಗಿದ್ದು, ಐಟಿಪಿಎಲ್ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿಯಲ್ಲಿ ವಾಸ ಮಾಡುತ್ತಿದ್ದ ಯುವತಿ ಶಿಲ್ಪ, ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತವಾಗಿದೆ.
ಮೆಜೆಸ್ಟಿಕ್‌ದ ಕೆಆರ್ ಸರ್ಕಲ್ ಮಾರ್ಗವಾಗಿ ಇವರಿಬ್ಬರೂ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆಆರ್ ಸರ್ಕಲ್ ಕಡೆ ಕಸದ ಲಾರಿ ತೀವ್ರ ವೇಗದಿಂದ ಬಂದಿದೆ. ತಿರುವು ಇದ್ದ ಮಾರ್ಗದಲ್ಲಿ ಲಾರಿ ವೇಗವಾಗಿ ಬಂದ ಕಾರಣ ಕಸದ ಲಾರಿಯ ವೇಗದಿಂದ ತಪ್ಪಿಸಿಕೊಳ್ಳಲಾಗದೇ ಬೈಕ್ ಲಾರಿ ಕೆಳಗೆ ಸಿಲುಕಿಕೊಂಡಿದೆ.
ಮೃತರ ಮೇಲೆ ಹರಿದ ಕಸದ ಲಾರಿ ಸುಮಾರು 10 ಮೀಟರ್‌ನಷ್ಟು ದೂರ ದೇಹಗಳನ್ನು ಎಳೆದೊಯ್ದಿದೆ. ರಸ್ತೆ ಮೇಲೆ ರಕ್ತ ಚೆಲ್ಲಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಪಘಾತದ ಬಳಿಕ ಕಸದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗದಲ್ಲಿಯೇ ಇಬ್ಬರೂ ಮೃತ ಪಟ್ಟರು. ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಒಯ್ಯಲಾಗಿದೆ.
ಇದನ್ನೂ ಓದಿ: Police Firing: ದರೋಡೆ, ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ