Site icon Vistara News

Roopa Iyer: ನಿರ್ದೇಶಕಿ ರೂಪಾ ಅಯ್ಯರ್‌ಗೂ ಆನ್‌ಲೈನ್‌ ಕಳ್ಳರ ಕಾಟ; ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ 30 ಲಕ್ಷ ರೂ.ಗೆ ಬೇಡಿಕೆ

Roopa Iyer

Roopa Iyer

ಬೆಂಗಳೂರು: ಸೈಬರ್‌ ಕ್ರೈಮ್‌ (Cyber Crime)ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬ್ಲ್ಯಾಕ್‌ ಮೇಲ್‌, ವಿಶೇಷ ಕೊಡುಗೆ, ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವ ಅಪರಾಧಿಗಳು ಹಣ ದೋಚುವ ಅದೆಷ್ಟೋ ಪ್ರಸಂಗಗಳು ವರದಿಯಾಗುತ್ತಿವೆ. ಪೊಲೀಸರು ಎಷ್ಟು ಕ್ರಮ ಕೈಗೊಂಡರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದೀಗ ಸ್ಯಾಂಡಲ್‌ವುಡ್‌ ನಿರ್ದೇಶಕಿ, ನಟಿ ರೂಪಾ ಅಯ್ಯರ್ (Roopa Iyer) ಅವರಿಗೂ ಇಂತಹದ್ದೇ ಅನುಭವವಾಗಿದೆ. ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಅಪರಾಧಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಎಚ್ಚೆತ್ತ ರೂಪಾ ಅಯ್ಯರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ (ಮೇ 8) ಮಧ್ಯಾಹ್ನದಿಂದ ಗುರುವಾರ ಬೆಳಗ್ಗೆ ತನಕವೂ ತಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ವಿವರ

ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯರ್ ಮನಿ ಲ್ಯಾಂಡ್ರಿಂಗ್ ಪ್ರಕರಣದ ವಿಚಾರಣೆ ನೆಪದಲ್ಲಿ ಕರೆ ಮಾಡಿದ್ದ ವಂಚಕರು 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ರೂಪಾ ಅಯ್ಯರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ʼʼಬುಧವಾರ ಮಧ್ಯಾಹ್ನ ಅಪರಿಚಿತ ನಂಬರ್‌ನಿಂದ ಕರೆ ಬಂತು. ತಾವು ಸಿಸಿಬಿ ಅಧಿಕಾರಿಗಳೆಂದು ಕರೆ ಮಾಡಿದ್ದವರು ತಿಳಿಸಿದರು. ಗಾಬರಿಯಿಂದ ಯಾಕೆಂದು ಪ್ರಶ್ನಿಸಿದೆ. ನರೇಶ್ ಗೋಯಲ್ ಮನಿ ಲ್ಯಾಂಡ್ರಿಂಗ್ ಕೇಸ್‌ನಲ್ಲಿ ನಿಮ್ಮ ಹೆಸರಿದೆ. ಹೀಗಾಗಿ ವಿಚಾರಣೆ ನಡೆಸಬೇಕಿದೆ ಎಂದು ಹೇಳಿದ್ದರುʼʼ ಎಂದು ರೂಪಾ ತಿಳಿಸಿದ್ದಾರೆ.

ʼʼಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇಶದಲ್ಲಿ 247 ಮಂದಿಯನ್ನು ಗುರುತಿಸಲಾಗಿದೆ. ಈ ಪೈಕಿ ನೀವು ಕೂಡ ಒಬ್ಬರು. ನಿಮ್ಮ ಆಧಾರ್‌ ಕಾರ್ಡ್ ಬಳಸಿಕೊಂಡು ಸಿಮ್ ಖರೀದಿಸಲಾಗಿದೆ. ಅದರ ಮೂಲಕ ದೇಶದ್ರೋಹದ ಚಟುವಟಿಕೆ ನಡೆಸಲಾಗಿದೆ. ಈಗಾಗಲೇ ಈ ಕುರಿತು ಮುಂಬೈಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕರೆ ಮಾಡಿದ್ದವರು ಹೆದರಿಸಿದ್ದರು. ಇದರಿಂದ ಗಾಬರಿಯಾಯಿತುʼʼ ಎಂದು ರೂಪಾ ಘಟನೆಯ ವಿವರ ನೀಡಿದ್ದಾರೆ.

ʼʼನೀವು ಸೆಲೆಬ್ರಿಟಿ ಆಗಿರುವುದರಿಂದ ನಾವು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ಒಂದು ವೇಳೆ ಈ ಪ್ರಕರಣದಿಂದ ನೀವು ತಪ್ಪಿಸಿಕೊಳ್ಳಬೇಕು ಎಂದಾದರೆ 30 ಲಕ್ಷ ರೂ. ನೀಡಿ ಎಂದು ಕರೆ ಮಾಡಿದ್ದವರು ಹೇಳಿದರು. ಯಾವಾಗ ಅವರು ಹಣದ ಬೇಡಿಕೆ ಇಟ್ಟರೋ ಆಗ ಅನುಮಾನ ಶುರುವಾಯ್ತು. ಕೂಡಲೇ ಎಚ್ಚೆತ್ತು ಸೈಬರ್ ಕ್ರೈಂಗೆ ದೂರು ನೀಡಿದೆʼʼ ಎಂದು ಅವರು ಹೇಳಿದ್ದಾರೆ.

ʼʼಆನ್‌ಲೈನ್ ವಂಚಕರು ಪ್ರಭಾವಿಗಳನ್ನು ಯಾಮಾರಿಸಿ ಹಣ ದೋಚಲು ಮುಂದಾಗಿದ್ದಾರೆ. ವಂಚಕರು ನನ್ನನ್ನು ನಂಬಿಸಲು ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಕೂಡ ಕಳುಹಿಸಿದ್ದಾರೆ. ಒಂದು ವೇಳೆ ಅವರ ಮಾತನ್ನು ನಂಬಿದ್ದರೆ ಲಕ್ಷಾಂತರ ರೂ. ಕಳೆದುಕೊಳ್ಳಬೇಕಾಗಿತ್ತುʼʼ ಎಂದು ರೂಪಾ ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಿಮಗೂ ಇಂತಹ ಕರೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳು ಸಾವರ್ಜನಿಕರು, ಸೆಲೆಬ್ರಿಟಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Cyber Crime : ಸೈಬರ್‌ ಕ್ರೈಂನಡಿ ಬಂಧನದಿಂದ ಮಾಳವಿಕಾ ಅವಿನಾಶ್ ಪಾರು; ಕೆಜಿಎಫ್‌ನಲ್ಲಿ ನಟಿಸಿದ್ದೇ ವರವಾಯ್ತು!

Exit mobile version