Site icon Vistara News

Sajjan Jindal: ಕೋಟ್ಯಧಿಪತಿ ಉದ್ಯಮಿಯ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ

sajjan jindhal

sajjan jindhal

ಮುಂಬೈ: ಜೆಎಸ್‌ಡಬ್ಲ್ಯು ಗ್ರೂಪ್‌ನ (JSW Group) ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ (Sajjan Jindal) ವಿರುದ್ಧ ಬಿಕೆಸಿ ಪೊಲೀಸ್ ಠಾಣೆಯಲ್ಲಿ (BKC police station) ಅತ್ಯಾಚಾರದ ದೂರು ದಾಖಲಾಗಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಕಂಪನಿಯ ಮುಖ್ಯ ಕಚೇರಿಯ ಮೇಲಿನ ಪೆಂಟ್‌ಹೌಸ್‌ನಲ್ಲಿ 2022ರ ಜನವರಿಯಲ್ಲಿ ಈ ಕೃತ್ಯ ನಡೆದಿದೆ ಎಂದು ನಟಿಯೊಬ್ಬರು ದೂರು ನೀಡಿದ್ದಾರೆ. ”ಆರಂಭದಲ್ಲಿ ಬಿಕೆಸಿ ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಇದರ ಬಗ್ಗೆ ಅವರು ಹೆಚ್ಚಿನ ಗಮನ ಹರಿಸಲಿಲ್ಲ. ನ್ಯಾಯಾಲಯವನ್ನು ಸಂಪರ್ಕಿಸಲು ಸೂಚಿಸಿದರು. ಬಳಿಕ ಕೋರ್ಟ್‌ ದೂರನ್ನು ದಾಖಲಿಸಲು ಪೊಲೀಸರಿಗೆ ಆದೇಶಿಸಿತುʼʼ ಎಂದು ನಟಿ ಹೇಳಿದ್ದಾರೆ.

ದೂರಿನಲ್ಲಿ ಏನಿದೆ?

ʼʼ2021ರ ಅಕ್ಟೋಬರ್‌ನಲ್ಲಿ ಸಜ್ಜನ್ ಜಿಂದಾಲ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ನಂತರ ಜೈಪುರದಲ್ಲಿ ಸಂಸದ ಪ್ರಫುಲ್ ಪಟೇಲ್ ಅವರ ಪುತ್ರನ ಮದುವೆಯಲ್ಲಿ ಭೇಟಿಯಾಗಿದ್ದೆವು. ಮುಂಬೈನಲ್ಲಿ ನಡೆದ ಭೇಟಿಯ ನಂತರ ಜಿಂದಾಲ್ ವೈಯಕ್ತಿಕವಾಗಿ ಸಂಪರ್ಕಿಸಲು ಆರಂಭಿಸಿದರುʼʼ ಎಂದು ದೂರಿನಲ್ಲಿ ನಟಿ ತಿಳಿಸಿದ್ದಾರೆ.

“ದುಬೈನಲ್ಲಿ ರಿಯಲ್ ಎಸ್ಟೇಟ್ ಸಲಹೆಗಾರರಾಗಿರುವ ನನ್ನ ಸಹೋದರನಿಂದ ಆಸ್ತಿ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ ನಾವು ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡು ಮುಂಬೈನಲ್ಲಿ ಭೇಟಿಯಾಗಿದ್ದೆವು” ಎಂದು ನಟಿ ಹೇಳಿದ್ದಾರೆ. “ಬಳಿಕ ಸಜ್ಜನ್ ಜಿಂದಾಲ್ ನನ್ನನ್ನು ‘ಬೇಬ್’ ಮತ್ತು ‘ಬೇಬಿ’ ಎಂದು ಸಂಬೋಧಿಸಲು ಪ್ರಾರಂಭಿಸಿದರು. ನಂತರ ಒಮ್ಮೆ ಅವರು, ತಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ವಿವರಿಸಿದರು. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡಿತುʼʼ ಎಂದು ನಟಿ ತಿಳಿಸಿದ್ದಾರೆ.

ಬಳಿಕ ಮೆಸೇಜ್‌ ಮೂಲಕ ಚಾಟಿಂಗ್‌ ಮಾಡುತ್ತಿದ್ದ ಸಜ್ಜನ್ ಜಿಂದಾಲ್, ಮದುವೆಯಾಗಿದ್ದರೂ ತನ್ನ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದರು ಎಂದು ನಟಿ ದೂರಿದ್ದಾರೆ. 2022ರ ಜನವರಿಯಲ್ಲಿ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಟಿ ಪಾಲ್ಗೊಂಡಿದ್ದರು. ʼʼಆ ಸಮಯದಲ್ಲಿ ಜಿಂದಾಲ್ ಪೆಂಟ್‌ಹೌಸ್ ಕರೆದೊಯ್ದರು. ನಿರಂತರ ಪ್ರತಿಭಟನೆ ಮತ್ತು ನಿರಾಕರಣೆಗಳ ಹೊರತಾಗಿಯೂ ಜಿಂದಾಲ್ ಅತ್ಯಾಚಾರ ಎಸಗಿದರುʼʼ ಅವರು ಆರೋಪಿಸಿದ್ದಾರೆ.

“2022ರ ಜೂನ್‌ನಲ್ಲಿ ನನ್ನ ಫೋನ್‌ ನಂಬರ್‌ ಅನ್ನು ಜಿಂದಾಲ್‌ ಬ್ಲಾಕ್‌ ಮಾಡಿದ್ದರು. ಅದಕ್ಕೂ ಮೊದಲು ಬೆದರಿಕೆ ಹಾಕಿ, ಪೊಲೀಸರನ್ನು ಸಂಪರ್ಕಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರುʼʼ ಎಂದು ನಟಿ ವಿವರಿಸಿದ್ದಾರೆ.

2023ರ ಫೆಬ್ರವರಿಯಲ್ಲಿ ನಟಿ ಬಿಕೆಸಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು. ಆದರೆ ಪೊಲೀಸರು ತನಿಖೆಗೆ ಮುಂದಾಗಿರಲಿಲ್ಲ. ಕೊನೆಗೆ ನಟಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಕೋರ್ಟ್‌ ದೂರನ್ನು ದಾಖಲಿಸಲು ಬಿಕೆಸಿ ಪೊಲೀಸರಿಗೆ ಆದೇಶ ನೀಡಿತ್ತು.

ಪ್ರಕರಣ ದಾಖಲು

ʼʼಇದೀಗ ನಟಿಯ ಹೇಳಿಕೆಗಳ ಆಧಾರದ ಮೇಲೆ, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಅಪರಾಧ ಎಸಗುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆʼʼ ಎಂದು ಬಿಕೆಸಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ. ಪ್ರಕರಣದ ಬಗ್ಗೆ ಜೆಎಸ್‌ಡಬ್ಲ್ಯು ಗ್ರೂಪ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Naked parade : ಮಹಿಳೆ ವಿವಸ್ತ್ರ ಪ್ರಕರಣದ ಹಿಂದೆ ಜಾರಕಿಹೊಳಿ; ಬಿಜೆಪಿ ಸಮಿತಿ ಸಂಶಯ

Exit mobile version