ಬೆಂಗಳೂರು: ರಾಜ್ಯ ಪೊಲೀಸರಿಗೆ ಬೇಕಾಗಿದ್ದ ಸ್ಯಾಂಟ್ರೋ ರವಿ ಹಲವು ದಿನಗಳಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಮೊಬೈಲ್ ಕೂಡ ಸ್ವಿಚಾಫ್ ಮಾಡಿದ್ದ. ಆದರೂ ಈತ ಸಿಕ್ಕಿ ಬಿದ್ದದ್ದು ಹೇಗೆ?
ಪೊಲೀಸರಿಗೆ ಮೊದಲ ಲೀಡ್ ಕೊಟ್ಟದ್ದು ಸ್ಯಾಂಟ್ರೋ ರವಿಯ ಮೊದಲ ಪತ್ನಿ. ಪೊಲೀಸರು ಮೊದಲಿಗೆ ರವಿಯ ಮನೆ ಜಪ್ತಿ ಮಾಡಿ ವಿಚಾರಣೆ ಹೆಸರಿನಲ್ಲಿ ಮೊದಲ ಪತ್ನಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಆರಂಭದಲ್ಲಿ ಯಾವ ವಿಚಾರವನ್ನೂ ಆಕೆ ಬಾಯಿ ಬಿಟ್ಟಿರಲಿಲ್ಲ. ನಿನ್ನ ಹೆಸರಿನ ಆಸ್ತಿ ಕೈ ತಪ್ಪದಂತೆ ನೋಡಿಕೊಳ್ಳುತ್ತೇವೆಂದು ಪೊಲೀಸರು ಭರವಸೆ ನೀಡಿದ ಬಳಿಕ ರವಿಯ ಸ್ನೇಹಿತರ ಬಗ್ಗೆ ಒಂದೊಂದೇ ಮಾಹಿತಿ ನೀಡಿದ್ದಳು.
ರವಿಯ ಹೊರ ರಾಜ್ಯದ ನಾಲ್ಕು ಸ್ನೇಹಿತರ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಅವರನ್ನು ಟ್ರ್ಯಾಕ್ ಮಾಡಿದ್ದರು. ಅವರಲ್ಲಿ ಮೂವರು ಸ್ನೇಹಿತರು ಅವರ ಊರಲ್ಲೇ ಇದ್ದರು. ಕೊಚ್ಚಿಯ ರಾಮ್‌ಜೀ ಮಾತ್ರ ನಾಲ್ಕು ದಿನದಿಂದ ಊರು ಬಿಟ್ಟಿದ್ದ. ಈ ಅನುಮಾನದ ಮೇಲೆ ರಾಮ್‌ಜಿಯ ಮೊಬೈಲ್ ಟ್ರ್ಯಾಕ್ ಮಾಡಿದಾಗ, ಎರಡು ದಿನ ರಾಮ್‌ಜೀ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿತ್ತು. ನಿನ್ನೆ ಬೆಳಗ್ಗೆ ರಾಮ್‌ಜೀ ಫೋನ್ ಆನ್ ಆಗಿದ್ದು, ಅಹಮದಾಬಾದಿನಲ್ಲಿ ನೆಟ್‌ವರ್ಕ್ ಇರುವುದನ್ನು ತೋರಿಸಿತ್ತು. ತಕ್ಷಣ ಅಹಮದಾಬಾದ್ ಪೊಲೀಸರಿಗೆ ಮೈಸೂರು ಪೊಲೀಸರು ಮಾಹಿತಿ ಕೊಟ್ಟಿದ್ದರು. ಮುಂಬಯಿಯಲ್ಲಿದ್ದ ಒಂದು ಪೊಲೀಸ್ ತಂಡ ಅಹಮದಾಬಾದಿಗೆ ಪಯಣಿಸಿತ್ತು. ಮಧ್ಯಾಹ್ನದ ಒಳಗೆ ರಾಮ್‌ಜೀ ಜತೆಯಲ್ಲಿದ್ದ ಸ್ಯಾಂಟ್ರೋ ರವಿಯ ಬಂಧನವಾಗಿತ್ತು.
ಇದನ್ನೂ ಓದಿ | Santro Ravi case | ವಿಗ್ ತೆಗೆದು, ಮೀಸೆ ಬೋಳಿಸಿ ತಲೆಮರೆಸಿಕೊಂಡರೂ ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲಾಗಲಿಲ್ಲ ಸ್ಯಾಂಟ್ರೋಗೆ!
ಇನ್ನು ಎಫ್‌ಐಆರ್ ದಾಖಲಾಗುತ್ತಿದ್ದಂತೆ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ. ಟೂರ್ ಹೊರಡುವ ಮೊದಲು ತನ್ನ ವಿಗ್ ಹಾಗು ಮೀಸೆ ತೆಗೆಸಿದ್ದ. ಮೊದಲಿಗೆ ಉಡುಪಿಯ ಹೆಬ್ರಿ ಸೇರಿದ್ದ. ಪೊಲೀಸರ ಹುಡುಕಾಟ ಹೆಚ್ಚಾದಾಗ ಹೆಬ್ರಿ ಬಿಟ್ಟು ಕೇರಳ ಕಡೆ ಮುಖ ಮಾಡಿದ್ದ. ಅಕ್ಕಪಕ್ಕದ ರಾಜ್ಯಗಳಲ್ಲಿ ಪೊಲೀಸರ ಟೀಂ ಬಂದಿದೆ ಎಂದು ಗೊತ್ತಾಗಿ ಕೇರಳಕ್ಕೂ ಗುಡ್‌ಬೈ ಹೇಳಿದ್ದ. ಐ20 ಕಾರಿನಲ್ಲಿ ಕೇರಳ ಬಿಟ್ಟು ಮಹಾರಾಷ್ಟ್ರದ ಕಡೆ ಮುಖ ಮಾಡಿದ್ದ. ಪುಣೆಯಲ್ಲಿ ಒಂದೆರಡು ದಿನ ವಾಸ್ತವ್ಯ ಹೂಡಿದ್ದ. ಮೊನ್ನೆ ಐ20 ಕಾರು ಬದಲಾಯಿಸಿ ಹುಂಡೈ ವಿನ್ಯೂ ಕಾರಿನಲ್ಲಿ ಪುಣೆಯಿಂದ ಅಹಮದಾಬಾದ್ ಕಡೆ ಪ್ರಯಾಣ ಬೆಳೆಸಿದ್ದ. ನಿನ್ನೆ ಬೆಳಗ್ಗೆ ಗೆಳೆಯ ರಾಮ್‌ಜಿ ಜತೆಗೆ ಅಹಮದಾಬಾದಿಗೆ ತಲುಪಿದ್ದ. ಅಲ್ಲಿಯೇ ಗುಜರಾತ್ ಪೊಲೀಸರು ಆತನನ್ನು ಬಂಧಿಸಿದ್ದರು.
ಇದನ್ನೂ ಓದಿ | Santro Ravi Case | ಸ್ಯಾಂಟ್ರೊ ರವಿ ಕೈಯಲ್ಲಿದೆ ಹಲವು ಸಚಿವರು, ಅಧಿಕಾರಿಗಳು, ರಾಜಕೀಯ ಮುಖಂಡರ ಭವಿಷ್ಯ!