ವಾಷಿಂಗ್ಟನ್: ಆ ಶಾಲೆಯಲ್ಲಿ ಎಂದಿನಂತೆ ದಿನ ಆರಂಭವಾಗಿ ಶಿಕ್ಷಕರು ತರಗತಿಗೆ ತೆರಳಿ ಪಾಠ ಹೇಳಿಕೊಡಲಾರಂಭಿಸಿದ್ದರು. ಆದರೆ ಅಷ್ಟರಲ್ಲಾಗಲೇ ವಿದ್ಯಾರ್ಥಿಗಳ ಮಧ್ಯದಿಂದ ಬಂದ ಗುಂಡೊಂದು(School Firing) ಶಿಕ್ಷಕಿಯ ದೇಹಕ್ಕೆ ತಾಕಿದೆ. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ಕಕ್ಕಾಬಿಕ್ಕಿಯಾಗಿ ಓಡಿದರೆ, ಶಿಕ್ಷಕಿ ಆಸ್ಪತ್ರೆ ಸೇರುವಂತಾಗಿದೆ.
ಇದನ್ನೂ ಓದಿ: Belagavi Shootout | ಬೆಳಗಾವಿ ಶೂಟೌಟ್ ಪ್ರಕರಣದ ತನಿಖೆಗೆ 4 ತಂಡ ರಚನೆ: ಪೊಲೀಸ್ ಆಯುಕ್ತ ಬೋರಲಿಂಗಯ್ಯ
ಹೌದು, ಇಂಥದ್ದೊಂದು ಭೀಕರ ಘಟನೆ ಅಮೆರಿಕದ ವರ್ಜೀನಿಯಾದ ನ್ಯೂಪೋರ್ಟ್ ನ್ಯೂಸ್ ನಗರದಲ್ಲಿ ನಡೆದಿದೆ. ಅಲ್ಲಿನ ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ಶಿಕ್ಷಕಿ ಅಬ್ಬಿ ಜ್ವೆರ್ನರ್ ಮೇಲೆ ಗುಂಡಿನ ದಾಳಿ ನಡೆದಿದೆ. ಅದನ್ನು ನಡೆಸಿರುವುದು ಬೇರೆ ಯಾರೋ ಅಲ್ಲ, ಅದೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕ!
ಶುಕ್ರವಾರದಂದು ತರಗತಿ ಆರಂಭವಾದ ತಕ್ಷಣ ಜ್ವೆರ್ನರ್ ಮಕ್ಕಳಿಗೆ ಪಾಠ ಹೇಳಿಕೊಡಲಾರಂಭಿಸಿದ್ದಾರೆ. ಆ ವೇಳೆ ಅದೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಬ್ಯಾಗಿನಿಂದ ಬಂದೂಕು ತೆಗೆದಿದ್ದು, ಶಿಕ್ಷಕಿ ಮೇಲೆ ಗುಂಡು ಹಾರಿಸಿದ್ದಾನೆ. ಭಯಭೀತರಾದ ಶಿಕ್ಷಕಿ ತರಗತಿಯಲ್ಲಿದ್ದ ಮಕ್ಕಳನ್ನೆಲ್ಲ ಹೊರಗೆ ಕರೆದುಕೊಂಡು ಹೋಗಿ ರಕ್ಷಿಸಿದ್ದಾರೆ. ತರಗತಿಯಿಂದ ಹೊರಗೆ ಬಂದು ಶಾಲೆಯ ಕಚೇರಿಗೆ ತಲುಪುವಷ್ಟರಲ್ಲಿ ತನಗೆ ಬಿದ್ದಿದ್ದ ಗುಂಡೇಟಿನಿಂದಾಗಿ ಮೂರ್ಛೆ ಹೋಗಿದ್ದಾರೆ. ಅದನ್ನು ಕಂಡ ಶಾಲೆಯ ಬೇರೆ ಶಿಕ್ಷಕರು ಹಾಗೂ ಸಿಬ್ಬಂದಿ ಬಾಲಕನನ್ನು ವಶಕ್ಕೆ ಪಡೆದು, ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Taliban | ಅಫಘಾನಿಸ್ತಾನದಲ್ಲಿ 1ರಿಂದ 6ನೇ ತರಗತಿಯವರೆಗೆ ಮಾತ್ರವೇ ಹೆಣ್ಣುಮಕ್ಕಳಿಗೆ ಶಾಲೆ: ತಾಲಿಬಾನ್ ಕಟ್ಟಪ್ಪಣೆ
ಆ ವಿದ್ಯಾರ್ಥಿಯು ಯಾವುದೋ ದ್ವೇಷವನ್ನಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಶಿಕ್ಷಕಿ ಮೇಲೆ ಈ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ಆತನ ತಾಯಿ ಪರವಾನಗಿ ಪಡೆದಿರುವ ಬಂದೂಕನ್ನು ಹೊಂದಿದ್ದು, ಬಾಲಕ ಅದನ್ನೇ ಶಾಲೆಗೆ ಹೊತ್ತು ತಂದಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. ಈ ಶಾಲೆಯಲ್ಲಿ 550 ವಿದ್ಯಾರ್ಥಿಗಳಿದ್ದಾರೆ.