Site icon Vistara News

142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್‌ ವಜಾ, ಮಕ್ಕಳ ಹೋರಾಟ ಯಶಸ್ವಿ

Sexual assault of an 8 year old child Accused arrested

ಜಿಂದ್: ಪಾಪಿ ಪ್ರಿನ್ಸಿಪಾಲ್‌ (principal) ವಿರುದ್ಧ ವಿದ್ಯಾರ್ಥಿನಿಯರ ಹೋರಾಟ ಯಶಸ್ವಿಯಾಗಿದೆ. 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ (physical abuse, sexual harassment) ನೀಡಿದ ಕಿರಾತಕ ಪ್ರಾಂಶುಪಾಲನಿಗೆ ಕೆಲಸದಿಂದ ಗೇಟ್‌ಪಾಸ್‌ ನೀಡಲಾಗಿದೆ. ಈತನನ್ನು ಬಂಧಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ.

ಹರಿಯಾಣದ ಜಿಂದ್ ಜಿಲ್ಲೆಯ ಬಾಲಕಿಯರ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲ ಕರ್ತಾರ್ ಸಿಂಗ್ ಈ ಕೃತ್ಯ ಎಸಗಿದವನು. ಈತನನ್ನು ಸರ್ಕಾರ ಮಂಗಳವಾರ ಸೇವೆಯಿಂದ ವಜಾಗೊಳಿಸಿದೆ. ನವೆಂಬರ್ 4ರಂದು ಪೊಲೀಸರು ಆರೋಪಿ ಕರ್ತಾರ್ ಸಿಂಗ್‌ನನ್ನು ಬಂಧಿಸಿದ್ದು, ಅವನೀಗ ಜಿಂದ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನ ಕೃತ್ಯಗಳ ಬಗ್ಗೆ ವಿದ್ಯಾರ್ಥಿನಿಯರೇ ಮೊದಲು ಸಂಘಟಿತರಾಗಿ ಹೋರಾಟಕ್ಕಿಳಿದು ಪೊಲೀಸರ, ರಾಷ್ಟ್ರಪತಿಗಳ ಗಮನಕ್ಕೆ ತಂದಿದ್ದರು.

ಉಚ್ಚಾನಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗುಲ್ಜಾರ್ ಮಲಿಕ್ ನೇತೃತ್ವದ ಸಮಿತಿಯ ತನಿಖಾ ವರದಿಯ ಮೇಲೆ ಕಾರ್ಯನಿರ್ವಹಿಸಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ತಪ್ಪಿತಸ್ಥನೆಂದು ಕಂಡುಬಂದಿರುವುದರಿಂದ, ಆತನನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದ್ದಾರೆ.

ಸಂವಿಧಾನದ 311 (2) (ಬಿ) ಅಡಿಯಲ್ಲಿ ವಜಾ ಆದೇಶ ನೀಡಲಾಗಿದೆ. ಇದು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಸಿವಿಲ್ ಉದ್ಯೋಗದಲ್ಲಿರುವ ವ್ಯಕ್ತಿಗಳನ್ನು ಇಲಾಖಾ ವಿಚಾರಣೆ ನಡೆಸದೆ ವಜಾಗೊಳಿಸಲು, ತೆಗೆದುಹಾಕಲು ಅಥವಾ ಹಿಂಬಡ್ತಿ ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರ ನೀಡುತ್ತದೆ.

ಉಚ್ಚಾನಾ ಮ್ಯಾಜಿಸ್ಟ್ರೇಟ್ ನೇತೃತ್ವದ ಪ್ರಕರಣದ ವಿಚಾರಣಾ ಸಮಿತಿಯು 390 ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದು, ಅದರಲ್ಲಿ 142 ವಿದ್ಯಾರ್ಥಿನಿಯರು ಸಿಂಗ್ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ ಎಂದು ಜಿಂದ್ ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ರಾನ್ ರಜಾ ಹೇಳಿದ್ದಾರೆ. ಮೊದಲಿಗೆ ಈತ 60 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಮಾತುಗಳು ಕೇಳಿಬಂದಿದ್ದವು. ತನಿಖೆಯ ವೇಳೆ ಆತ ಸುಮಾರು 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದು ಬಯಲಾಯಿತು. ಅವನಿಗೆ 56 ವರ್ಷ.

ಪ್ರಾಂಶುಪಾಲ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಲೆಯ ವಿದ್ಯಾರ್ಥಿನಿಯರೇ ಹೋರಾಟ ಆರಂಭಿಸಿದ್ದರು. ಅವರು ಕಳೆದ ಆಗಸ್ಟ್‌ 31ರಂದು ಸಹಿ ಹಾಕಿರುವ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಹರಿಯಾಣ ರಾಜ್ಯಪಾಲ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದರು. ಇದಾದ ಬಳಿಕ ಶಾಲೆಯ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೊನೆಗೆ ಆತನನ್ನು ಬಂಧಿಸಲಾಗಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರು, ಅವರ ಪೋಷಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲ; ತಂದೆ ವಯಸ್ಸು ಇವನಿಗೆ!

Exit mobile version