ಮೈಸೂರು: ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಲಾರಿ ಚಾಲಕ (Lorry Driver) ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮೈಸೂರಿನ ಪಿರಿಯಾಪಟ್ಟಣದ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿದೆ.
ತಮಿಳುನಾಡು ಮೂಲದ ಲಾರಿ ಡ್ರೈವರ್ ಎಂದು ಹೇಳಲಾಗಿದೆ. ರಸ್ತೆ ಬದಿ ಲಾರಿಯನ್ನು ನಿಲ್ಲಿಸಿ, ಅಲ್ಲೇ ಇದ್ದ ಕೊಟ್ಟಿಗೆಗೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ. ಬೆಳಗ್ಗೆ ಕೊಟ್ಟಿಗೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಲಾರಿ ಚಾಲಕನ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಟ್ಟಿಗೆಯಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಲಾರಿಯನ್ನು ವಶಕ್ಕೆ ಪಡೆದು, ಚಾಲಕನ ಗುರುತು ಪತ್ತೆ ಮಾಡುತ್ತಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಅಧಿಕಾರಿಗಳ ಕಿರುಕುಳಕ್ಕೆ ವಿಷ ಸೇವಿಸಿದ ಅರ್ಚಕ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ನಿರುವಗಲ್ಲು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಅರ್ಚಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅರ್ಚಕ ಅಜಯ್ ಕುಮಾರ್ ಎಂಬಾತ ವಿಷ ಸೇವಿಸಿದ್ದಾರೆ. ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ವಿಚಾರವಾಗಿ ಅರ್ಚಕರ ವರ್ಗವು ಹೈಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ದೇವಾಲಯದಲ್ಲಿ ಉತ್ಸವ ಪೂಜೆ ನಿಂತು ಹೋಗಿದೆ.
ಇತ್ತೀಚೆಗೆ ದುರ್ಗಮ್ಮನ ಜಾತ್ರೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಗೀತಾ ಅವರು, ದೇವಾಲಯದ ಬಾಗಿಲು ಮುರಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯಾವುದೇ ನೋಟಿಸ್ ನೀಡದೆ ರಾತ್ರಿ 10 ಗಂಟೆಗೆ ಬಂದು ದೇವರಿಗೆ ಪೂಜೆ ಮಾಡಿ ಎಂದು ನನಗೆ ಹಾಗೂ ನನ್ನ ಕುಟುಂಬಕ್ಕೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಅರ್ಚಕ ಅಜಯ್‌ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ರಾತ್ರಿ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿ ಇಲ್ಲದಿದ್ದರೆ ದೇವಾಲಯದ ಕೀ ಕೊಡಿ ಎಂದು ದಬ್ಬಾಳಿಕೆ ನಡೆಸಿದ್ದಾರೆ. ಕೋಟ್೯ ಆದೇಶಕ್ಕೂ ಬೆಲೆ ಕೊಟ್ಟಿಲ್ಲ, ನಮಗೆ ಅನ್ಯಾಯವಾಗಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ ಎಂದಿದ್ದಾರೆ.
ಇನ್ನೂ ಅರ್ಚಕ ಆತ್ಮಹತ್ಯೆಗೂ ಮುನ್ನ ಉಚ್ಚ ನ್ಯಾಯಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ನ್ಯಾಯಕ್ಕಾಗಿ ಅಂಗಲಾಚಿಸಿದ್ದಾರೆ. ವಿಷ ಸೇವಿಸಿದ ಅರ್ಚಕ ಅಜಯ್ ಕುಮಾರ್‌ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಜಯ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ