ಚಿಕ್ಕಬಳ್ಳಾಪುರ: ಆಷಾಢಕ್ಕೆ ತವರು ಮನೆಗೆ ಬಂದ ವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಪಲ್ಲಿ ಗ್ರಾಮದಲ್ಲಿ ನಡೆದಿದೆ. ಅನುಷಾ( 19) ಮತ್ತು ಆಕೆಯ ಪ್ರಿಯಕರ ವೇಣು (21) ಆತ್ಮಹತ್ಯೆ ಮಾಡಿಕೊಂಡವರು.
ಸೊಂಟಕ್ಕೆ ವೇಲ್ ಬಿಗಿದುಕೊಂಡು ಕೃಷಿ ಹೊಂಡಕ್ಕೆ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಷಾ ಮತ್ತು ವೇಣು 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅನುಷಾ ಮನೆಯವರು ಈ ಪ್ರೀತಿಗೆ ಒಪ್ಪಿಗೆ ನೀಡದೆ ಆಕೆಗೆ ಬೇರೆ ಮದುವೆ ಮಾಡಿಸಿದ್ದರು. ಕೆಲವು ತಿಂಗಳ ಹಿಂದೆ ಚೌಡರೆಡ್ಡಿ ಎಂಬವರೊಂದಿಗೆ ಅನುಷಾ ವಿವಾಹ ನಡೆದಿತ್ತು.
ಆಷಾಢಕ್ಕೆ ತವರು ಮನೆಗೆ ಬಂದ ಅನುಷಾ ಮತ್ತು ವೇಣು ಮತ್ತೆ ಭೇಟಿಯಾಗಿದ್ದರು. ಮೊದಲೇ ಪ್ರೀತಿಗೆ ನಿರಾಕರಿಸಿದ್ದ ಕುಟುಂಬ ಇಬ್ಬರನ್ನು ಒಟ್ಟಿಗೆ ಬಾಳಲು ಬಿಡುವುದಿಲ್ಲ ಎಂದು ಮನನೊಂದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಸಂಜೆ ಮೃತದೇಹ ನೀರಿನಲ್ಲಿ ತೇಲಿದೆ. ಸ್ಥಳಕ್ಕೆ ಕೆಂಚಾರ್ಲಹಳ್ಳಿ ಪೋಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿದ್ದಾರೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಬಹಿರ್ದೆಸೆಗೆ ಹೋದ ಬಾಲಕಿ ಶವವಾಗಿ ಪತ್ತೆ
ವಿಜಯನಗರ: ಬಹಿರ್ದೆಸೆಗೆ ಹೋದ 10 ವರ್ಷದ ಬಾಲಕಿ ಅನುಮಾನಾಸ್ಪವಾಗಿ ಮೃತಪಟ್ಟಿರುವ ಘಟನೆ ಹಡಗಲಿ ತಾಲೂಕಿನ ದುಂಗಾವತಿ ತಾಂಡದಲ್ಲಿ ನಡೆದಿದೆ. ಶನಿವಾರ ಸಂಜೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ವಿವರ
ʼʼಬಹಿರ್ದೆಸೆಗೆ ಹೋಗಿದ್ದ ಬಾಲಕಿ ತುಂಬ ಹೊತ್ತಾದರೂ ಮರಳಿರಲಿಲ್ಲ. ಇದರಿಂದ ಆಕೆಯನ್ನು ಹುಡುಕಿಕೊಂಡು ಹೋದಾಗ ಮೃತದೇಹ ಪತ್ತೆಯಾಗಿತ್ತು. ಬಾಲಕಿಯ ಮೃತದೇಹ ಹೊಂಡದ ಪಕ್ಕದಲ್ಲಿ ಮತ್ತು ತಂಬಿಕೆ ಮತ್ತೊಂದು ಕಡೆ ಬಿದ್ದಿತ್ತುʼʼ ಎಂದು ಆಕೆಯ ತಂದೆ ತಿಳಿಸಿದ್ದಾರೆ. ಕೂಡಲೇ ಬಾಲಕಿಯನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಎಂದ ವೈದ್ಯರು ಘೋಷಿಸಿದ್ದರು.
ಇದನ್ನೂ ಓದಿ: Self Harming: ಬೈಕ್ ಕೊಡಿಸದಿದ್ದಕ್ಕೆ ಯುವಕ ನೇಣಿಗೆ ಶರಣು; ಮಗನ ಸಾವು ನೋಡಿ ರೈಲಿಗೆ ತಲೆಕೊಟ್ಟ ತಾಯಿ!
ಅವಳನ್ನು ಯಾರು, ಯಾಕಾಗಿ ಸಾಯಿಸಿದ್ದಾರೋ ಗೊತ್ತಿಲ್ಲ. ನ್ಯಾಯ ಕೊಡಿಸಿ ಎಂದು ತಂದೆ ಮತ್ತು ತಾಯಿ ಅಂಗಲಾಚುತ್ತಿದ್ದಾರೆ. ಇದ್ದ ಒಬ್ಬಳೇ ಮಗಳನ್ನು ಪಾಪಿಗಳು ಕೊಂದಿದ್ದಾರೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಬಾಲಕಿ ಸಾವಿಗೆ ಕಾರಣ ಇನ್ನೂ ನಿಗೂಢವಾಗಿದೆ. ತಮ್ಮ ಮಗಳಿಗೆ ಆದ ಅನ್ಯಾಯ ಬೇರೆಯವರಿಗೆ ಆಗಬಾರದು. ಮಗಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಶ್ರೀಹರಿಬಾಬು, ಶಾಸಕ ಕೃಷ್ಣ ನಾಯ್ಕ್ ಮತ್ತಿತರರು ಭೇಟಿ ನೀಡಿದ್ದಾರೆ. ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಕೃಷ್ಣ ನಾಯ್ಕ್ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ನಿಗೂಢ ಸಾವು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.