Site icon Vistara News

Self Harming: ಅಮೆರಿಕದಿಂದ ಬಂದವಳು 6 ತಿಂಗಳ ಹಸುಗೂಸಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಳು!

self harming

self harming

ನೊಯ್ಡಾ: ತನ್ನ 6 ತಿಂಗಳ ಮಗುವಿನೊಂದಿಗೆ 33 ವರ್ಷದ ಮಹಿಳೆಯೊಬ್ಬರು 16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗ್ರೇಟರ್‌ ನೊಯ್ಡಾದಲ್ಲಿ ನಡೆದಿದೆ. ಈ ಮಹಿಳೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಮಾತ್ರವಲ್ಲ ಮಾನಸಿಕ ಖಿನ್ನತೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಪಶ್ಚಿಮ ಗ್ರೇಟರ್‌ ನೊಯ್ಡಾದ ಹೌಸಿಂಗ್‌ ಸೊಸೈಟಿಯ ಬಹು ಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ (ಜನವರಿ 10)ರಂದು ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಸಹೋದರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ʼʼಈ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆ ತನ್ನ ಕುಟುಂಬ ಸದಸ್ಯರೊಡನೆ ವಾಸಿಸುತ್ತಿದ್ದರು. ಅವರು ಕೆಲ ಆರೋಗ್ಯ ಸಮಸ್ಯೆಯ ಜತೆಗೆ ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದರು ಎಂದು ಆಕೆಯ ಸಹೋದರ ತಿಳಿಸಿದ್ದಾರೆʼʼ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದ ಮಹಿಳೆ

ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದ ಈ ಮಹಿಳೆ ಎರಡು ವಾರಗಳ ಹಿಂದೆಯಷ್ಟೇ ತನ್ನಿಬ್ಬರು ಮಕ್ಕಳ ಜತೆಗೆ ಭಾರತಕ್ಕೆ ಬಂದಿದ್ದರು. ಗ್ರೇಟರ್‌ ನೊಯ್ಡಾದ ಅಪಾರ್ಟ್‌ಮೆಂಟ್‌ನಲ್ಲಿ ಆಕೆ ತನ್ನ ಮಕ್ಕಳೊಂದಿಗೆ ತಾಯಿ ಮತ್ತು ಸಹೋದರನ ಜತೆ ವಾಸಿಸುತ್ತಿದ್ದರು. ಎರಡು ದಿನಗಳ ಹಿಂದೆ ಮಹಿಳೆಯ ಹಿರಿಯ ಮಗನ ಹುಟ್ಟುಹಬ್ಬವನ್ನು ಎಲ್ಲರೂ ಸೇರಿ ಆಚರಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯ ಅತ್ತೆಯೂ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ʼʼಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಮಗೆ ಮಧ್ಯರಾತ್ರಿ 12.17ರ ಸುಮಾರಿಗೆ ಮಾಹಿತಿ ಲಭಿಸಿತುʼʼ ಎಂದು ಪೊಲೀಸರು ಹೇಳಿದ್ದಾರೆ. ʼʼಆ ದಿನ ರಾತ್ರಿ ಊಟವಾದ ಬಳಿಕ ಮಹಿಳೆ ತುಸು ಬೇಗನೆ ತನ್ನ ರೂಮ್‌ಗೆ ಹೊರಟು ಹೋಗಿದ್ದರುʼʼ ಎಂದು ಕುಟುಂಬಸ್ಥರು ಹೇಳಿದ್ದಾರೆ. ʼʼಮಹಿಳೆಗೆ 2021ರಲ್ಲಿ ವಿವಾಹವಾಗಿತ್ತು. ಆಕೆಯ ಕುಟುಂಬಸ್ಥರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಅಲ್ಲದೆ ಪೋಸ್ಟ್‌ ಮಾರ್ಟಮ್‌ಗೂ ಅನುಮತಿ ನೀಡಿಲ್ಲ. ಮಾನಸಿಕ ಖಿನ್ನತೆಯೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ತಿಳಿಸಿದ್ದಾರೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪತ್ನಿಗೆ ಬೆಂಕಿ ಹಚ್ಚಿ ನೇಣು ಬಿಗಿದುಕೊಂಡ

ಮಡದಿ ಮೇಲೆ ಎರಗಿ ಮಾರಣಾಂತಿಕ ಹಲ್ಲೆ ನಡೆಸಿದ ಪತಿಯೊಬ್ಬ ಆಕೆ ಸತ್ತು ಹೋಗಿದ್ದಾಳೆ ಎಂದು ತಿಳಿದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಟ್ಟಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್‌ (32) ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟವನು. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗೌರಿಕೊಪ್ಪಲಿನ ಪ್ರಶಾಂತ, ಎರಡು ವರ್ಷಗಳ ಹಿಂದೆ ಬಿಟ್ಟಗೊಂಡನಹಳ್ಳಿಯ ಬಿಂದು (24) ಜತೆ ವಿವಾಹವಾಗಿದ್ದ. ಈ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಬಿಂದು ತವರು ಮನೆ ಸೇರಿಕೊಂಡಿದ್ದಳು.

ಇದರಿಂದ ಮಾನಸಿಕವಾಗಿ ನೊಂದಿದ್ದ ಪ್ರಶಾಂತ್‌ ಬಿಂದು ಮನೆಗೆ ಬಂದಿದ್ದ. ಜ. 9ರಂದು ಬೆಳಗ್ಗೆ ಪತ್ನಿ ಮನೆಗೆ ಬಂದ ಪ್ರಶಾಂತ್‌ ಬಿಂದು ಜತೆಗೆ ಗಲಾಟೆ ಮಾಡಿದ್ದಾನೆ. ಬಳಿಕ ಕುಡುಗೋಲಿನಿಂದ ಕೊಲೆ ಮಾಡಲು ಯತ್ನಿಸಿದ್ದಾನೆ. ಮಾರಣಾಂತಿಕ ಹಲ್ಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತೀವ್ರ ಹಲ್ಲೆಗೊಳಗಾಗಿದ್ದ ಬಿಂದು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಆದರೆ ಇತ್ತ ಪತ್ನಿ ಸತ್ತು ಹೋಗಿದ್ದಾಳೆ ಎಂದು ತಿಳಿದ ಪ್ರಶಾಂತ್‌ ಆಕೆಯ ಮನೆಯಲ್ಲೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಇತ್ತ ಪತಿಯಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಿಂದುವನ್ನು ಸ್ಥಳೀಯರು ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: Self Harming: 9ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Exit mobile version