ಚಂಡೀಗಢ: ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯೂಟ್ಯೂಬರ್ ಜೋಡಿಯೊಂದು (YouTuber Couple) ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದಿದೆ. ಮೃತ ಜೋಡಿಯನ್ನು ಗಾರ್ವಿತ್ (25) ಮತ್ತು ನಂದಿನಿ (22) ಎಂದು ಗುರುತಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಬಹದ್ದೂರ್‌ಗಢದಲ್ಲಿ ಈ ದುರಂತ ಸಂಭವಿಸಿದೆ.
ಗರ್ವಿತ್ ಮತ್ತು ನಂದಿನಿ ಇಬ್ಬರೂ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಸ್ ಆಗಿದ್ದರು. ತಮ್ಮದೇ ಚಾನಲ್ ನಡೆಸುತ್ತಿದ್ದ ಈ ಜೋಡಿ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಫ್ಲಾಟ್‌ಫಾರ್ಮ್‌ಗಳಿಗಾಗಿ ಕಿರುಚಿತ್ರ ತಯಾರಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ʼʼಕೆಲವು ದಿನಗಳ ಹಿಂದೆ ಇವರು ತಮ್ಮ ತಂಡದೊಂದಿಗೆ ಡೆಹ್ರಾಡೂನ್‌ನಿಂದ ಬಹದ್ದೂರ್‌ಗಢಕ್ಕೆ ಸ್ಥಳಾಂತರಗೊಂಡಿದ್ದರು. ಅವರು ಬಹು ಮಹಡಿ ಕಟ್ಟಡವೊಂದರ ಏಳನೇ ಮಹಡಿಯಲ್ಲಿನ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲಿ ಅವರು ತಮ್ಮ ಐದು ಸಹೋದ್ಯೋಗಿಗಳೊಂದಿಗೆ ವಾಸಿಸುತ್ತಿದ್ದರುʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಣವೇನು?
ʼʼಇಂದು (ಏಪ್ರಿಲ್ 13) ಬೆಳಗ್ಗೆ ಸುಮಾರು 6 ಗಂಟೆಗೆ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ. ಚಿತ್ರೀಕರಣ ಮುಗಿಸಿ ಇವರು ತಡವಾಗಿ ಮನೆಗೆ ಮರಳಿದ್ದರು ಮತ್ತು ಯಾವುದೋ ವಿಷಯದ ಬಗ್ಗೆ ಅವರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಇಬ್ಬರೂ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆʼʼ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ಮಾಡಿಕೊಳ್ಳಲಿರುವ ನೈಜ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಫೋರೆನಿಕ್ ತಂಡ ಕೂಡ ಸ್ಥಳಕ್ಕೆ ತೆರಳಿ, ಸಾಕ್ಷ್ಯ ಮತ್ತು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಸಂಗ್ರಹಿಸಿದೆ. ʼʼನಾವು ಘಟನೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಕರಣದ ತನಿಖಾಧಿಕಾರಿ ಜಗ್ಬೀರ್ ಹೇಳಿದ್ದಾರೆ.
ಆನ್‌ಲೈನ್ ವಂಚನೆಗೆ ಇನ್ನೊಂದು ಬಲಿ; ವಿದ್ಯಾರ್ಥಿ ಆತ್ಮಹತ್ಯೆ
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ (Cyber Crime)ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಇದಕ್ಕೆ ಇಲ್ಲಿದೆ ಮತ್ತೊಂದು ತಾಜಾ ಉದಾಹರಣೆ. ತನ್ನ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ 18 ವರ್ಷದ ಯುವಕ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದ. ವಂಚಕರು ಲಿಂಕ್ ಕಳುಹಿಸಿ ಆತನ ತಂದೆಯ ಬ್ಯಾಂಕ್ ಅಕೌಂಟ್‌ನಿಂದ ಸುಮಾರು 2 ಲಕ್ಷ ರೂ. ದೋಚಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆ ಮುಂಬೈಯಲ್ಲಿ ನಡೆದಿದೆ.
ಮುಂಬೈನ ನಲಸೊಪರದ ಈ ಯುವಕ ಎಂದಿನಂತೆ ಬುಧವಾರ (ಏಪ್ರಿಲ್ 3) ತನ್ನ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ. ಆಗ ವಂಚಕರು ಲಿಂಕ್ ಒಂದನ್ನು ಆ ಮೊಬೈಲ್‌ಗೆ ಕಳುಹಿಸಿದ್ದರು. ಆತ ತಪ್ಪಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದ. ಇದರಿಂದ ವಂಚಕರು ಆತನ ತಂದೆಯ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಅಕೌಂಟ್‌ನಿಂದ 2 ಲಕ್ಷ ರೂ. ಡ್ರಾ ಮಾಡಿದ್ದರು. ತಾನು ವಂಚನೆಗೊಳಗಾದ ವಿಷಯ ಅರಿವಿಗೆ ಬರುತ್ತಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Self Harming: ನಾಯಂಡಹಳ್ಳಿ ಫ್ಲೈಓವರ್‌ನಿಂದ ಜಿಗಿದು ನವವಿವಾಹಿತ ಆತ್ಮಹತ್ಯೆ