ನವದೆಹಲಿ: ವೇಶ್ಯಾವಾಟಿಕೆ ಕಾನೂನುಬದ್ಧ ವೃತ್ತಿಯಾಗಿದ್ದು, (sex work legal) ಈ ವಿಚಾರದಲ್ಲಿ ಪೊಲೀಸರು ಮಧ್ಯಪ್ರವೇಶ ಮಾಡುವಂತಿಲ್ಲ. ವೇಶ್ಯೆಯರನ್ನು ಬಂಧಿಸುವಂತಿಲ್ಲ ಅಥವಾ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ. ಅವರನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಸೆಕ್ಸ್ ಕಾರ್ಯಕರ್ತರ ಹಕ್ಕುಗಳನ್ನು ಕಾಪಾಡುವುದಕ್ಕಾಗಿ ಆರು ನಿರ್ದೇಶನಗಳನ್ನು ನೀಡಿದೆ. ʻʻಸೆಕ್ಸ್ ಕಾರ್ಯಕರ್ತರು ಕಾನೂನಿನಲ್ಲಿ ಸಮಾನ ರಕ್ಷಣೆಯನ್ನು ಹೊಂದಿದ್ದಾರೆ. ಸೆಕ್ಸ್ ಕಾರ್ಯಕರ್ತರು ವಯಸ್ಕರಾಗಿದ್ದರೆ, ಅವರು ಸಮ್ಮತಿಪೂರ್ವಕವಾಗಿ ಈ ಕೆಲಸದಲ್ಲಿ ತೊಡಗಿಕೊಂಡಿರುವುದು ಸ್ಪಷ್ಟವಾದರೆ ಪೊಲೀಸರು ಈ ಚಟುವಟಿಕೆಯಲ್ಲಿ ಮಧ್ಯ ಪ್ರವೇಶಿಸುವುದು ಮತ್ತು ಕ್ರಿಮಿನಲ್ ಕಾಯಿದೆಗಳಡಿ ಕ್ರಮ ಕೈಗೊಳ್ಳುವುದರಿಂದ ದೂರ ಉಳಿಯಬೇಕು,ʼʼ ಎಂದು ಸ್ಪಷ್ಟಪಡಿಸಿದೆ. ಒಬ್ಬ ವ್ಯಕ್ತಿ ಯಾವುದೇ ವೃತ್ತಿಯನ್ನು ಮಾಡುತ್ತಿದ್ದರೂ, ಸಂವಿಧಾನದ 21ನೇ ವಿಧಿಯಡಿ ಗೌರವಾನ್ವಿತ ಜೀವನ ನಡೆಸುವ ಹಕ್ಕು ಈ ದೇಶದಲ್ಲಿ ಇದೆ ಎಂದು ಹೇಳಿದೆ.
ನಮ್ಮ ಕಾನೂನಿನಲ್ಲಿ ವೇಶ್ಯಾಗೃಹ ನಡೆಸುವುದು ಮಾತ್ರ ಅಪರಾಧ. ಸ್ವಯಂಪ್ರೇರಿತವಾಗಿ ಸೆಕ್ಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಪರಾದವಲ್ಲ. ಹೀಗಾಗಿ ವೇಶ್ಯಾವಾಟಿಕೆ ಕೇಂದ್ರಗಳಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತರನ್ನು ಯಾವ ಕಾರಣಕ್ಕೂ ಬಂಧಿಸಬಾರದು, ದಂಡ ವಿಧಿಸಬಾರದು, ದೌರ್ಜನ್ಯ ನಡೆಸಬಾರದು, ಕಿರಿಕಿರಿ ಮಾಡಬಾರದು ಎಂದು ಸುಪ್ರೀಂಕೋರ್ಟ್ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಮಗುವನ್ನು ಬೇರೆ ಮಾಡಬಾರದು
ಒಬ್ಬ ಹೆಣ್ಮಗಳು ಸೆಕ್ಸ್ ಉದ್ಯಮದಲ್ಲಿದ್ದಾಳೆ ಎಂಬ ಒಂದೇ ಕಾರಣಕ್ಕೆ ಆಕೆಯಿಂದ ಮಗುವನ್ನು ದೂರ ಮಾಡಬಾರದು ಎಂದು ಹೇಳಿರುವ ಕೋರ್ಟ್, ಮಾನವ ಘನತೆ ಮತ್ತು ಸಭ್ಯತೆಯನ್ನು ರಕ್ಷಿಸುವ ಮೂಲ ರಕ್ಷಣಾ ವ್ಯವಸ್ಥೆ ಸೆಕ್ಸ್ ಕಾರ್ಯಕರ್ತರಿಗೆ ಮತ್ತು ಅವರ ಮಕ್ಕಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದೆ. ಒಂದು ವೇಳೆ ಒಂದು ಅಪ್ರಾಪ್ತ ಮಗು ವೇಶ್ಯಾಗೃಹದಲ್ಲಿ ಇಲ್ಲವೇ ಸೆಕ್ಸ್ ಕಾರ್ಯಕರ್ತರ ಜತೆಗಿದ್ದರೆ ಅವರನ್ನು ಕಳ್ಳಸಾಗಣೆ ಮೂಲಕವೇ ತರಲಾಗಿದೆ ಎಂಬ ಪೂರ್ವಗ್ರಹವನ್ನು ಹೊಂದಿರಬೇಕಾಗಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ | Me Too ಆರೋಪ ಸುಳಿಯಲ್ಲಿ ಮಲಯಾಳಂ ನಟ ವಿಜಯ್ ಬಾಬು: ನಾನವನಲ್ಲ ಎಂದ ʼಶರಬತ್ ಶಮೀರ್ʼ
ಲೈಂಗಿಕ ದೌರ್ಜನ್ಯ ವೇಶ್ಯೆಯರ ಮೇಲೂ ನಡೆಯಬಹುದು
ಒಂದೊಮ್ಮೆ ಲೈಂಗಿಕ ಕಾರ್ಯಕರ್ತರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದರೆ, ಕೇಸು ದಾಖಲಿಸಿಕೊಳ್ಳುವಲ್ಲಿ ತಾರತಮ್ಯ ಮಾಡಬಾರದು. ಲೈಂಗಿಕ ಹಲ್ಲೆಗೆ ಒಳಗಾಗುವ ಲೈಂಗಿಕ ಕಾರ್ಯಕರ್ತರಿಗೂ ವೈದ್ಯಕೀಯ, ಕಾನೂನು ನೆರವು ಸೇರಿದಂತೆ ಎಲ್ಲ ನೆಲೆಗಳಲ್ಲೂ ಸಹಾಯ ನೀಡಬೇಕು ಎಂದು ಸೂಚಿಸಿದೆ.
ಮಾಧ್ಯಮಗಳಿಗೂ ಕಿವಿಮಾತು
ವೇಶ್ಯಾವಾಟಿಕೆ ದಾಳಿ, ಬಂಧನ, ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತರ ಗುರುತು ಬಯಲಾಗದಂತೆ ಎಚ್ಚರ ವಹಿಸಬೇಕು ಎಂದು ಮಾಧ್ಯಮಗಳಿಗೂ ಕೋರ್ಟ್ ಕಿವಿಮಾತು ಹೇಳಿದೆ. ಅವರನ್ನು ಬಲಿಪಶುಗಳೆಂದೋ, ಆರೋಪಿಗಳೆಂದೋ, ಹೇಗೆ ಪರಿಗಣಿಸಿದರೂ ಅವರ ಚಿತ್ರಗಳನ್ನು ಪ್ರಕಟಿಸಬಾರದು, ವಿಡಿಯೊಗಳನ್ನು ಪ್ರಸಾರ ಮಾಡಬಾರದು ಎಂದು ಸೂಚಿಸಿದೆ.
ಇದನ್ನೂ ಓದಿ| ಹೈದರಾಬಾದ್ ರೇಪ್ ಕೇಸ್ ಎನ್‌ಕೌಂಟರ್ ಉದ್ದೇಶ ಪೂರ್ವಕ ಎಂದ ಸುಪ್ರೀಂಕೋರ್ಟ್ ರಚಿತ ಆಯೋಗ