ಈರೋಡ್: ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯೊಬ್ಬಳ ಮೇಲೆ ಆಕೆಯ ಮಲತಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಜತೆಗೆ, ಆಕೆಯ ತಾಯಿಯೇ ತನ್ನ ಮಗಳ ಅಂಡಗಳನ್ನು ಕಳೆದ ಐದು ವರ್ಷಗಳಿಂದ ಬಲಾತ್ಕಾರವಾಗಿ ಮಾರಾಟ ಮಾಡುತ್ತಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಈರೋಡ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಎರಡು ಖಾಸಗಿ ಆಸ್ಪತ್ರೆಗಳಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ತನಿಖೆ ನಡೆಸಿರುವ ಪೊಲೀಸರು ಹಲವು ಅಚ್ಚರಿಯ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಪತಿಯಿಂದ ಬೇರ್ಪಟ್ಟ ಸೌಮ್ಯಾ ಎಂಬಾಕೆ ತನ್ನ 16 ವರ್ಷದ ಮಗಳೊಂದಿಗೆ 40 ವರ್ಷದ ಸೈಯದ್ ಅಲಿ ಎಂಬವನ ಜೊತೆ ಈರೋಡ್‌ನ ಸೂರಂಪಟ್ಟಿ ವಲಸು ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ. ಪ್ರಾಥಮಿಕ ವಿಚಾರಣೆಯಲ್ಲಿ ಮಲತಂದೆ ಸೈಯದ್ ಅಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಹಾಗೂ ಆಕೆಯ ಅಂಡಗಳನ್ನು ಎಂಟು ಬಾರಿ ಮಾರಾಟ ಮಾಡಿದ್ದು ಕಂಡುಬಂತು. ಇನ್ನಷ್ಟು ಆಳವಾಗಿ ವಿಚಾರಿಸಿದಾಗ, ಆಕೆಯ ತಾಯಿ ಸಹ ಇದರಲ್ಲಿ ಪಾಲ್ಗೊಂಡಿದ್ದು ಸಾಬೀತಾಯಿತು.
ಪ್ರತಿಬಾರಿ ಬಾಲಕಿಯನ್ನು ಬಲಾತ್ಕಾರವಾಗಿ ಆಸ್ಪತ್ರೆಗೆ ಎಳೆದೊಯ್ದು ಅಂಡಾಣು ನೀಡಲಾಗುತ್ತಿತ್ತು. ಪ್ರತಿ ಬಾರಿ ಅಂಡಾಣು ನೀಡಿದಾಗಲೂ ಈ ದುಷ್ಟ ತಂದೆತಾಯಿಗೆ 20,000 ರೂ. ಸಿಗುತ್ತಿತ್ತು ಎಂದು ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಆರೋಪಿಯು ಬಾಲಕಿಯ ವಯಸ್ಸು 20 ಎಂದು ತೋರಿಸಲು ನಕಲಿ ಆಧಾರ್ ಕಾರ್ಡ್ ಅನ್ನು ಸಿದ್ಧಪಡಿಸಿದ್ದ. ಮಾಲತಿ ಎಂಬ ಮಹಿಳೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಪ್ರಕರಣದಲ್ಲಿ ಬಾಲಕಿಯ ತಾಯಿ, ಸಾಕು ತಂದೆ ಸೈಯದ್ ಅಲಿ ಮತ್ತು ಮಹಿಳಾ ಮಧ್ಯವರ್ತಿ ಮಾಲತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಎರಡು ಖಾಸಗಿ ಆಸ್ಪತ್ರೆಗಳನ್ನು ಪೊಲೀಸ್ ಕಣ್ಗಾವಲಿನಲ್ಲಿ ಇಡಲಾಗಿದೆ. ಇದರ ಬೆನ್ನಲ್ಲೇ, ಸೇಲಂ ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳೂ ಸಹ ಈ ಕಾನೂನುಬಾಹಿರ ದಂಧೆಯಲ್ಲಿ ಶಾಮೀಲಾಗಿರಬಹುದು ಎಂದು ಶಂಕಿಸಲಾಗಿದೆ.
ತಮಿಳುನಾಡಿನ ವೈದ್ಯಕೀಯ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಆರು ಸದಸ್ಯರ ತಂಡ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ. ಅಪ್ರಾಪ್ತರಿಂದ ಅಂಡಾಣು ಪಡೆಯುವ ಈ ಜಾಲ ವ್ಯಾಪಕವಾಗಿದೆ ಎಂದು ಶಂಕಿಸಲಾಗಿದ್ದು, ಬಾಲಕಿಯ ಮಾಹಿತಿಯ ಆಧಾರದ ಮೇಲೆ ರಾಜ್ಯದ ಮತ್ತಷ್ಟು ಫಲವತ್ತತೆ ಕೇಂದ್ರಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಹೊಸೂರು, ಆಂಧ್ರಪ್ರದೇಶದ ತಿರುಪತಿ, ಕೇರಳದ ತಿರುವನಂತಪುರಗಳ ವರೆಗೂ ತನಿಖೆ ಚಾಚಿದೆ.
ಹುಡುಗಿಯ ಹೇಳಿಕೆಯ ಪ್ರಕಾರ ಆಕೆಯನ್ನು ಅಂಡಾಣು ಒದಗಿಸಲು ಈರೋಡ್‌ನ ಆಸ್ಪತ್ರೆಗಳಿಗೆ ಮಾತ್ರವಲ್ಲದೆ ಸೇಲಂ, ಹೊಸೂರು, ಕೇರಳ ಮತ್ತು ಆಂಧ್ರಪ್ರದೇಶದ ಆಸ್ಪತ್ರೆಗಳಿಗೂ ಕರೆದೊಯ್ಯಲಾಗಿದೆ. 2018ರಿಂದ ಈವರೆಗೆ ಎಷ್ಟು ಮಂದಿಗೆ ಕೃತಕ ಗರ್ಭಧಾರಣೆ ಮಾಡಲಾಗಿದೆ ಎಂಬ ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ, ಅಂಥದ್ದೇನಾಯ್ತು?