ಚಿಕ್ಕಮಗಳೂರು: ಜಮೀನಿನಲ್ಲಿ ಕೆಲಸ ಮುಗಿಸಿ ಬಂದ ವ್ಯಕ್ತಿಯೊಬ್ಬ ಮುಳ್ಳು ಚುಚ್ಚಿದೆ ಎಂದು ತಿಳಿದು ರಾತ್ರಿ ಊಟ ಮಾಡಿ ಮಲಗಿದವ ಚಿರನಿದ್ರೆಗೆ ಜಾರಿದ್ದ. ಗ್ರಾಮದ ಗಣ್ಯ ನಾಯ್ಕ್ (44) ಮೃತ ದುರ್ದೈವಿ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಘಟನೆ (Snake Bite) ನಡೆದಿದೆ.
ಗಣ್ಯ ನಾಯ್ಕ್ ಜಮೀನಿನಲ್ಲಿ ಕೆಲಸ ಮಾಡುವಾಗ ಕಾಲಿಗೆ ಎರಡು ಬಾರಿ ಹಾವು ಕಚ್ಚಿತ್ತು. ಆದರೆ ಮುಳ್ಳು ಚುಚ್ಚಿರಬೇಕು ಏನು ಆಗಲ್ಲ ಎಂದು ನಿರ್ಲಕ್ಷಿಸಿದ್ದ. ಹಾವು ಕಚ್ಚಿದ್ದು ಗಮನಕ್ಕೆ ಬಾರದೆ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ.
ಕುಟುಂಬಸ್ಥರು ಮಲಗಿದ್ದ ಗಣ್ಯನನ್ನು ಎಬ್ಬಿಸಲು ಮುಂದಾಗಿದ್ದಾರೆ. ಆದರೆ ಆತ ಅಲುಗಾಡದೆ ಇದ್ದಾಗ ಅನುಮಾನಗೊಂದು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಒಂದು ಸಣ್ಣ ನಿರ್ಲಕ್ಷ್ಯಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಜಿಂಕೆಗಳ ಅನುಮಾನಾಸ್ಪದ ಸಾವು
ಹತ್ತು ದಿನಗಳ ಅಂತರದಲ್ಲಿ ಎರಡು ಜಿಂಕೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಏನಿಗದೆಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಏನಿಗದೆಲೆ ಗ್ರಾಮದ ಹರೀಶ್ ಎಂಬುವರ ತೋಟದಲ್ಲಿ ಜಿಂಕೆಗಳ ಮೃತಪಟ್ಟಿವೆ. ಚಿಲಕಲನೇರ್ಪು ಗ್ರಾಮಪಂಚಾಯ್ತಿ ವ್ಯಾಪ್ತಿಯ ಏನಿಗದೆಲೆ ಗ್ರಾಮದಲ್ಲಿ ಬೇಟೆಗಾರರ ಹಾವಳಿಗೆ ಜಿಂಕೆಗಳು ಬಲಿಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Love Propose : I Love You ಮೆಸೇಜ್ ಕಳಿಸಿದ ಮುಸ್ಲಿಂ ಯುವಕನಿಗೆ ವಿವಾಹಿತೆಯಿಂದ ಚಪ್ಪಲಿ ಏಟು!
ಬೈಕ್-ಕ್ಯಾಂಟರ್ ಡಿಕ್ಕಿಗೆ ಯುವತಿ ನಾಲಿಗೆ ಕಟ್! ಸವಾರ ಸ್ಪಾಟ್ ಡೆತ್
ಚಿಕ್ಕಮಗಳೂರು/ಬೆಳಗಾವಿ: ಬೈಕ್-ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಇದ್ದ ಯುವತಿಯ ನಾಲಿಗೆ ಕಟ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ (Road Accident) ಘಟನೆ ನಡೆದಿದೆ.
ಶಿವರಾಜ್ (26) ಮೃತ ದುರ್ದೈವಿ. ಲಾವಣ್ಯ (20) ನಾಲಿಗೆ ಕಳೆದುಕೊಂಡವಳು. ಲಾವಣ್ಯ ಹಾಸನದ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಳು. ಶಿವರಾಜ್-ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರು.
ಇಬ್ಬರು ಬೈಕ್‌ನಲ್ಲಿ ಬರುವಾಗ ಕ್ಯಾಂಟರ್ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಶಿವರಾಜ್ ಸ್ಥಳದಲ್ಲೆ ಮೃತಪಟ್ಟರೆ, ಇತ್ತ ಹಿಂಬದಿ ಕುಳಿತಿದ್ದ ಲಾವಣ್ಯ ಡಿಕ್ಕಿ ರಭಸಕ್ಕೆ ನಾಲಿಗೆಯೇ ಕಟ್ ಆಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಗಾಯಾಳು ಲಾವಣ್ಯಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
ಉಳುಮೆ ಮಾಡುವಾಗ ಕರೆಂಟ್ ಶಾಕ್‌ಗೆ ರೈತ ಬಲಿ
ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ದುರ್ಮರಣ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನದಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರೈತ ಮಂಜುನಾಥ್ ದಾಸನಕೊಪ್ಪ ಮೃತ ದುರ್ದೈವಿ.
ಗ್ರಾಮದಲ್ಲ ಭಾರಿ ಮಳೆ ಗಾಳಿಗೆ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದನ್ನು ಗಮನಿಸದ ರೈತ ಮಂಜುನಾಥ್ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಿತ್ತೂರು ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ