ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ನಗರದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿಯೋರ್ವ ಬ್ಲೇಡ್‌ನಿಂದ ಗೀರಿರುವ (Stabbing Case) ಆರೋಪದ ಹಿನ್ನೆಲೆಯಲ್ಲಿ ನಗರದಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇಬ್ಬರೂ ಭಿನ್ನ ಸಮುದಾಯಕ್ಕೆ ಸೇರಿದವರಾದ ಹಿನ್ನೆಲೆಯಲ್ಲಿ ಎರಡೂ ಕಡೆಯ ಮುಖಂಡರು ಆಸ್ಪತ್ರೆ ಮುಂಭಾಗ ಜಮಾಯಿಸಿದ ಪರಿಣಾಮ ಉದ್ವಿಗ್ನ ಸ್ಥಿತಿ (Puttur Tense) ನಿರ್ಮಾಣಗೊಂಡಿದೆ.
ಗಾಯಾಳು ವಿದ್ಯಾರ್ಥಿನಿ ಬನ್ನೂರಿನವಳಾಗಿದ್ದು, ವಿದ್ಯಾರ್ಥಿ ಕಬಕ ಸಮೀಪದವನು. ಇಬ್ಬರೂ ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಇವರಿಬ್ಬರು ಕೊಂಬೆಟ್ಟು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳು. ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳಾಗಿದ್ದು ಇತಿಹಾಸ ವಿಷಯದಲ್ಲಿ ಒಂದೇ ತರಗತಿಯ ಸಹಪಾಠಿಗಳಾಗಿದ್ದರು. ವಿದ್ಯಾರ್ಥಿನಿ ಮುಸ್ಲಿಂ ಸಮುದಾಯಕ್ಕೆ ಹಾಗೂ ವಿದ್ಯಾರ್ಥಿ ಹಿಂದೂ ಸಮುದಾಯಕ್ಕೆ ಸೇರಿದ್ದು ಇಬ್ಬರ ಮಧ್ಯೆ ಸಣ್ಣ ವಿಷಯಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಹರಿತವಾದ ವಸ್ತುವಿನಿಂದ ಗೀರಿದ ಗಾಯ ಉಂಟಾಗಿದ್ದು ವಿದ್ಯಾರ್ಥಿ ತನಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ.
ಬೆಳಗ್ಗೆ ಕಾಲೇಜು ಆರಂಭಕ್ಕೆ ಮೊದಲು ಪುತ್ತೂರು ಮುಖ್ಯ ಆಂಚೆ ಕಚೇರಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಇಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿ ಅದು ತರಗತಿ ತನಕವೂ ಮುಂದುವರಿದಿದೆ ಎನ್ನಲಾಗಿದೆ. ಇನ್ನೊಂದು ಮಾಹಿತಿ ಪ್ರಕಾರ, ಪ್ರಥಮ ಅವಧಿಯ ತರಗತಿಯಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿದ್ದು ಈ ವೇಳೆ ವಿದ್ಯಾರ್ಥಿ ಹರಿತವಾದ ವಸ್ತುವಿನಿಂದ ತಿವಿದಿದ್ದಾನೆ ಎನ್ನಲಾಗಿದೆ. ಆದರೆ ಕೆಲ ವಿದ್ಯಾರ್ಥಿಗಳ ಪ್ರಕಾರ ಆತ ತಿವಿದಿಲ್ಲ. ಗಾಯ ಹೇಗೆ ಸಂಭವಿಸಿದೆ ಅನ್ನುವುದೇ ಆಶ್ಚರ್ಯಕರ ಸಂಗತಿ ಎನ್ನುತ್ತಾರೆ.
ಘಟನೆಯ ಮಾಹಿತಿ ಪಡೆದ ವಿದ್ಯಾರ್ಥಿನಿ ತಾಯಿ ನೀಡಿದ ದೂರಿನ ಪ್ರಕಾರ ನಗರ ಠಾಣಾ ಪೊಲೀಸರು ಕಾಲೇಜಿಗೆ ಅಗಮಿಸಿ ಸಿಸಿಟಿವಿ ವೀಡಿಯೋ ಪರಿಶೀಲಿಸಿದ್ದಾರೆ. ಆಕೆಯ ಜತೆಗಿದ್ದ ಬೇರೆ ವಿದ್ಯಾರ್ಥಿಗಳ ಬಳಿಯೂ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳಿಬ್ಬರ ಸಹಪಾಠಿಗಳನ್ನು ಕರೆಯಿಸಿ ವಾಸ್ತವ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಇಬ್ಬರೂ ಭಿನ್ನ ಧರ್ಮದ ವಿದ್ಯಾರ್ಥಿಗಳು ಎಂಬ ಮಾಹಿತಿ ಹರಡುತಿದ್ದಂತೆ ಆಸ್ಪತ್ರೆಗೆ ಒಂದು ಸಮುದಾಯದ ನೂರಾರು ಮಂದಿ ಆಗಮಿಸಿದ್ದು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಪೊಲೀಸರು ಆಸ್ಪತ್ರೆ ಮುಂಭಾಗ ಬಿಗಿ ಬಂದೋಬಸ್ತು ಮಾಡಿ, ಮುಖಂಡರನ್ನು ಸಮಾಧಾನಿಸಿದರು.
ಗಾಯವು ಗಾಜು ತಗಲಿ ಆದದ್ದು ಎಂದು ಪೊಲೀಸರಿಗೆ ತಿಳಿಸುವಂತೆ ಕಾಲೇಜಿನ ಉಪನ್ಯಾಸಕಿಯೊಬ್ಬರು ಹೇಳಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಹೇಳಿದ್ದಾಳೆ. ಈ ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಿ ಕಾಲೇಜಿನಿಂದ ಅಮಾನತು ಮಾಡುವಂತೆ ವಿದ್ಯಾರ್ಥಿನಿ ಪರ ಹಾಜರಿದ್ದ ಹಲವಾರು ಮಂದಿ ಆಗ್ರಹಿಸಿದ್ದಾರೆ. ಬೆಳಗ್ಗೆ 9.20ಕ್ಕೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಸತ್ಯಾಸತ್ಯತೆ ಆ ಮೇಲೆ ತಿಳಿಯಲಿದೆ. ಇದು ಕಾಲೇಜಿನ ಆವರಣದೊಳಗೆ ನಡೆದ ಘಟನೆ ಅಲ್ಲ ಅನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಗೋಪಾಲ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Murder Case: ಬೆಳ್ತಂಗಡಿ ಬಳಿ ಮನೆಯ ಅಂಗಳದಲ್ಲೇ ನಿವೃತ್ತ ಶಿಕ್ಷಕನ ಭೀಕರ ಕೊಲೆ