Site icon Vistara News

Student Self harming: ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ, ಪೋಷಕರ ಪ್ರತಿಭಟನೆ; ಟಾಪರ್‌ಗಳೇ ಸಾಯ್ತಿರೋದ್ಯಾಕೆ?

pes students self harming

ಬೆಂಗಳೂರು: ನಿನ್ನೆ ರಾಜಧಾನಿಯ (Bengaluru) ಪ್ರತಿಷ್ಠಿತ ಪಿಇಎಸ್‌ ಎಂಜಿನಿಯರಿಂಗ್‌ (PES university) ಕಾಲೇಜಿನ ವಿದ್ಯಾರ್ಥಿ ರಾಹುಲ್‌ ಆತ್ಮಹತ್ಯೆಯೊಂದಿಗೆ, ಈ ಕಾಲೇಜಿನಲ್ಲಿ ಒಂದು ವರ್ಷದ ಅಂತರದಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ (Student Self harming) ಮಾಡಿಕೊಂಡಂತಾಗಿದೆ. ಇವು ನಾಲ್ಕೂ ಕೂಡ ವಿಚಿತ್ರ ಸಾಮ್ಯತೆ ಹೊಂದಿವೆ. ನಾಲ್ವರೂ ಪಿಇಎಸ್‌ ಕಟ್ಟಡದಿಂದಲೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಎಲ್ಲರೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು (Engineering Students) ಹಾಗೂ ಅಭ್ಯಾಸದಲ್ಲಿ ಟಾಪರ್‌ಗಳೇ (Toppers) ಆಗಿದ್ದಾರೆ.

ಇತ್ತ, ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಆಡಳಿತ ಮಂಡಳಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಒಂದು ವರ್ಷದಲ್ಲಿ 4 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪರಿಸ್ಥಿತಿಯ ಗಂಭೀರತೆಯನ್ನು ಪೊಲೀಸರ ಹಾಗೂ ಸರ್ಕಾರದ ಗಮನಕ್ಕೆ ತರಲು ಪಿಇಎಸ್ ಯೂನಿವರ್ಸಿಟಿ ವಿರುದ್ಧ ಮೇ 18ಕ್ಕೆ ಪ್ರತಿಭಟನೆ ಪೋಷಕರಿಂದ ಫ್ರೀಡ್ಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಒಂದೇ ವರ್ಷದ ಅಂತರದಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಮೂವರೂ ಒಂದೇ ಕಟ್ಟಡದ, 6ನೇ ಅಂತಸ್ತಿನಿಂದಲೇ ಬಿದ್ದು ಮೃತಪಟ್ಟಿದ್ದಾರೆ. 2023ರ ಜುಲೈನಲ್ಲಿ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜಿನಲ್ಲಿ ಆದಿತ್ಯ ಪ್ರಭು ಎಂಬಾತ ಜೀವಹಾನಿ ಮಾಡಿಕೊಂಡಿದ್ದ. ಇದರ ನಂತರ, ಎಲೆಕ್ಟ್ರಾನಿಕ್‌ ಸಿಟಿಯ ಪಿಇಎಸ್‌ ಯೂನಿವರ್ಸಿಟಿ ಕಟ್ಟಡದಲ್ಲಿ ದುರಂತಗಳು ಸಂಭವಿಸಿವೆ. 2023ರ ಅಕ್ಟೋಬರ್‌ನಲ್ಲಿ ‌ಸೂರ್ಯ (21), 2024ರ ಜನವರಿ 29ರಂದು ವಿಗ್ನೇಶ್ (20), ನಿನ್ನೆ ರಾಹುಲ್ (21) ಸುಸೈಡ್‌ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಿಂದ ಇವುಗಳ ತನಿಖೆ ನಡೆಯುತ್ತಿದೆ.

ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಟಾಪರ್ಸ್ ಆಗಿದ್ದು, ಇನ್ನಷ್ಟು ಅಂಕ ಗಳಿಸುವಂತೆ ಒತ್ತಡಕ್ಕೊಳಗಾಗಿರಬಹುದು ಎಂದು ಶಂಕಿಸಲಾಗಿದೆ. ಈ ಆತ್ಮಹತ್ಯೆ ಸರಣಿಯ ಬಗ್ಗೆ ಆಕ್ರೋಶ ಹೆಚ್ಚಾಗಿದ್ದು, ಪ್ರತಿಷ್ಠಿತ ಕಾಲೇಜಿನ ವಿರುದ್ಧ ಕೆಲ ಪೋಷಕರು ತಿರುಗಿ ಬಿದ್ದಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಆಕ್ರೋಶ ಕಂಡುಬಂದಿದೆ. ಈ ಕಾಲೇಜಿನಲ್ಲಿ ಏನಾಗುತ್ತಿದೆ, ಇಷ್ಟು ಆತ್ಮಹತ್ಯೆಗಳು ಸಂಭವಿಸಿದರೂ ಕಾರಣ ಯಾಕೆ ಪತ್ತೆಯಾಗುತ್ತಿಲ್ಲ, ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಹಲವರು, ಸೂಸೈಡ್ ಪ್ರಕರಣಗಳ ಹಿಂದಿನ ರಹಸ್ಯ ಭೇದಿಸಲು ಒತ್ತಾಯಿಸಿದ್ದಾರೆ.

ಈ ಹಿಂದೆ, ಪಿಇಎಸ್ ಯೂನಿವರ್ಸಿಟಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಯ ಕುರಿತು ಏಪ್ರಿಲ್‌ನಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಪತ್ರ ಬರೆದಿತ್ತು. ವಿದ್ಯಾರ್ಥಿಗಳ ಸರಣಿ ಸಾವಿನ ಬಗ್ಗೆ ತನಿಖೆ ನಡೆಸಿ, ತಡೆಗಟ್ಟಲು ಸೂಕ್ತ ಕ್ರಮವಹಿಸಲು ಕೇಂದ್ರ ಸಚಿವಾಲಯ ಸೂಚನೆ ನೀಡಿತ್ತು. 2024 ಏಪ್ರಿಲ್ 1ರಂದು ಕೇಂದ್ರ ಶಿಕ್ಷಣ ಸಚಿವಾಲಯ ಪತ್ರ ಬರೆದ ಒಂದು ತಿಂಗಳಲ್ಲೇ ಮತ್ತೊಬ್ಬ ವಿದ್ಯಾರ್ಥಿಯ ಸಾವು ಸಂಭವಿಸಿದೆ.

ನಿನ್ನೆಯ ಘಟನೆ

ನಿನ್ನೆ ಕರಸಾಲ ರಾಹುಲ್‌ ಎಂಬ ವಿದ್ಯಾರ್ಥಿ ರಾಜಧಾನಿಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ (Electronic city) ಪಿಇಎಸ್ ಯೂನಿವರ್ಸಿಟಿಯ ಕಟ್ಟಡದಿಂದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಪರೀಕ್ಷೆಗೆ (Exam) ತಡವಾಗಿ ಬಂದಿದ್ದಕ್ಕಾಗಿ ನಿಂದಿಸಿದ್ದರಿಂದ ನೊಂದ ಈತ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈತ ಮೂಲತಃ ಆಂಧ್ರಪ್ರದೇಶದ ಕರ್ನೂಲಿನ ಕುಟುಂಬದ ವಿಧ್ಯಾರ್ಥಿ. ಈತ ಬಿಇ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದು, ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ.

ರಾಹುಲ್ ತನ್ನ ತಾಯಿಯೊಂದಿಗೆ ಕ್ಯಾಂಪಸ್‌ನಿಂದ 4 ಕಿಮೀ ದೂರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪರೀಕ್ಷೆ 8.30ಕ್ಕೆ ಆರಂಭವಾಗಲಿದ್ದ ಕಾರಣ 7.30ರ ಸುಮಾರಿಗೆ ಮನೆಯಿಂದ ಹೊರಟಿದ್ದ. ಆತನ ತಾಯಿ ಕಾಲೇಜು ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪರೀಕ್ಷೆಗೆ ತಡವಾಗಿ ಬಂದ ಕಾರಣ ಪ್ರವೇಶ ನಿರಾಕರಿಸಲಾಗಿತ್ತು. ಅಧ್ಯಯನದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದ ರಾಹುಲ್, ಇದರಿಂದ ನೊಂದಿದ್ದ ಎನ್ನಲಾಗಿದೆ. ನಂತರ ಸ್ವಲ್ಪ ಹೊತ್ತಿನ ಬಳಿಕ ಕಾಲೇಜಿನ ಐದನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿದ್ದಾರೆ.‌

ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ

ಬೆಂಗಳೂರು: ಮಾಡಿಕೊಂಡ ಸಾಲ ತೀರಿಸಲು, ಶೋಕಿ ಜೀವನ ನಡೆಸಲು ಹಾಗೂ ಪ್ರಿಯತಮನ ಜೊತೆ ಮಜಾ ಉಡಾಯಿಸಲು ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಕಿಯನ್ನೇ ಕೊಲೆ (Woman murder case) ಮಾಡಿದ್ದಾಳೆ. ಮಾಲಕಿ ಕೊರಳಲ್ಲಿ ಧರಿಸಿದ್ದ ಚಿನ್ನದ ಸರದ ಆಕರ್ಷಣೆ ಕೊಲೆಗೆ ಮೂಲವಾಗಿದೆ.

ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹಿಣಿ ಕೊಲೆ (kengeri murder, bangalore crime) ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೇ 10ರಂದು ಕೆಂಗೇರಿ ಠಾಣೆ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿತ್ತು. ದಿವ್ಯಾ ಕೊಲೆಯಾದ ಮಹಿಳೆ. ಮೋನಿಕಾ (24) ಬಂಧಿತ ಆರೋಪಿ. ಶೋಕಿ ಜೀವನಕ್ಕಾಗಿ ಮನೆ ಮಾಲಕಿಯನ್ನೆ ಹತ್ಯೆ ಮಾಡಿದ ದಿವ್ಯಾಳನ್ನು ಬಂಧಿಸಲಾಗಿದೆ.

ಮೋನಿಕಾ ಕಂಪೆನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು. ಮೂಲತಃ ಕೋಲಾರ ಜಿಲ್ಲೆಯ ಮೋನಿಕ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಗುರುಮೂರ್ತಿ ಎಂಬವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಪ್ರಿಯಕರನನ್ನು ಗಂಡ ಎಂದು ಹೇಳಿ ಬಾಡಿಗೆಗೆ ಮನೆ ಗಿಟ್ಟಿಸಿದ್ದಳು. ಆದರೆ ಒಬ್ಬಳೇ ವಾಸವಿದ್ದು, ಮೋನಿಕ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ.

ಮೋನಿಕಾ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳಲ್ಲದೆ, ಜೊತೆಗೆ ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಿಕೊಡಲು ಹಣಕ್ಕಾಗಿ ಹುಡುಕಾಡುತ್ತಿದ್ದಳು. ಅಷ್ಟರಲ್ಲಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಆಕೆಯ ಕಣ್ಣು ಬಿದ್ದಿತ್ತು. ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ನಡೆಸುತ್ತಿದ್ದರು. ದಿವ್ಯಾ ಅತ್ತೆ ಮಾವ ಸಹ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ದಿವ್ಯಾ ಹಾಗೂ 2 ವರ್ಷದ ಮಗು ಮಾತ್ರ ಇರುತ್ತಿದ್ದರು.

ಇದನ್ನು ಗಮನಿಸಿ ಸ್ಕೆಚ್‌ ಹಾಕಿದ ಮೋನಿಕಾ, ಯಾರೂ ಇಲ್ಲದ ಸಮಯ ನೋಡಿ ಹಿಂಬದಿಯಿಂದ ಬಂದು ದಿವ್ಯಾಳ ಕುತ್ತಿಗೆ ಹಿಸುಕಿ (Strangle) ಕೊಲೆ ಮಾಡಿದ್ದಾಳೆ. ನಂತರ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಾಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Exit mobile version