ನವದೆಹಲಿ: ಸಿನಿಮಾಗಳಲ್ಲಿ ಮನೋಜ್ಞವಾಗಿ ನಟಿಸಿ, ವಾಕ್ಚಾತುರ್ಯದಿಂದಲೇ ರಾಜಕೀಯದಲ್ಲಿ ಜನರ ಮನಗೆದ್ದು, ಕ್ರಿಕೆಟ್‌ನಲ್ಲಿ ಬಿರುಗಾಳಿಯಂತೆ ಬ್ಯಾಟ್ ಬೀಸಿ ಸೆಲೆಬ್ರಿಟಿಗಳಾಗುತ್ತಾರೆ. ಹಾಡು, ನೃತ್ಯ, ಸಾಹಸ, ಕಲೆ, ಪ್ರತಿಭೆಯ ಮೂಲಕವೂ ದೇಶಾದ್ಯಂತ ಖ್ಯಾತಿಯಾಗುತ್ತಾರೆ. ಆದರೆ, ಕಳ್ಳತನ ಮಾಡುವ ಮೂಲಕ ದೇಶದ ಸೆಲೆಬ್ರಿಟಿಯಾಗುವುದು ಸಾಧ್ಯವೇ? ಸಾಧ್ಯವೇ ಇಲ್ಲ ಎಂಬ ಉತ್ತರ ನಿಮ್ಮಿಂದ ಬರಬಹುದು. ಆದರೆ, ಸಾಧ್ಯ ಎಂಬುದನ್ನು ದೇವಿಂದರ್ ಸಿಂಗ್ ಅಲಿಯಾಸ್ ಬಂಟಿ ಚೋರ್ ಅಲಿಯಾಸ್ ಸೂಪರ್ ತೀಫ್ ಮಾಡಿ ತೋರಿಸಿದ್ದಾನೆ. ಇಷ್ಟೆಲ್ಲ ಮಾಡಿದ ಈತನೀಗ ಪೊಲೀಸರ (Bunty Chor Arrested) ಅತಿಥಿಯಾಗಿದ್ದಾನೆ.
ಹೌದು, ಕಳ್ಳತನದ ಪ್ರಕರಣಗಳಲ್ಲಿ ಸಿಲುಕಿ, ತಪ್ಪಿಸಿಕೊಂಡು ತಿರುಗಾಡುತ್ತಿದ್ದ ದೇವಿಂದರ್ ಸಿಂಗ್‌ನನ್ನು ಸಿನಿಮೀಯ ರೀತಿಯಲ್ಲಿ 500 ಕಿಲೋಮೀಟರ್ ಚೇಸ್ ಮಾಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಆತನನ್ನು ಬಂಧಿಸಿದ್ದಾರೆ. ಇದರೊಂದಿಗೆ ದೇವಿಂದರ್ ಸಿಂಗ್ ಈಗ ಮತ್ತೆ ದೇಶಾದ್ಯಂತ ಸುದ್ದಿಯಾಗಿದ್ದಾನೆ. ಸೆಲೆಬ್ರಿಟಿ ಕಳ್ಳನನ್ನು ಸಿನಿಮೀಯ ರೀತಿಯಲ್ಲಿಯೇ ಬಂಧಿಸುವ ಮೂಲಕ ಮತ್ತೆ ದೇವಿಂದರ್ ಸಿಂಗ್‌ನನ್ನು ಜೈಲಿಗೆ ಕಳುಹಿಸಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿ, ಸಿನಿಮಾಗೆ ಸ್ಫೂರ್ತಿ
ದೇವಿಂದರ್ ಸಿಂಗ್‌ಗೆ ಸುಖಾಸುಮ್ಮನೆ ಸೆಲೆಬ್ರಿಟಿ ಕಳ್ಳನ ಸ್ಟೇಟಸ್ ಸಿಕ್ಕಿದ್ದಲ್ಲ. ಈತನ ಕಳ್ಳತನದ ಕೌಶಲ, ಜೀವನ, ಗಂಭೀರ ಪ್ರಕರಣಗಳನ್ನು ಆಧರಿಸಿ 2008ರಲ್ಲಿ ‘ಓಯ್ ಲಕ್ಕಿ! ಲಕ್ಕಿ ಓಯ್’ (Oye Lucky! Lucky Oye) ಎಂಬ ಬಾಲಿವುಡ್ ಸಿನಿಮಾ ಬಂದಿದೆ. ಅಲ್ಲದೆ, ಈತ ಹಿಂದಿಯ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಸಿದ್ದಾನೆ. ಅಷ್ಟರಮಟ್ಟಿಗೆ ಈತ ಖ್ಯಾತಿ ಗಳಿಸಿದ್ದಾನೆ.
ಕದಿಯದ ವಸ್ತುವಿಲ್ಲ, ಕೈಚಳಕ ತೋರಿಸದ ಊರಿಲ್ಲ!
ಹಾಗೆ ನೋಡಿದರೆ, ದೇವಿಂದರ್ ಸಿಂಗ್ ಕದಿಯದ ವಸ್ತುಗಳೇ ಇಲ್ಲ. ಎಸ್‌ಯುವಿಯಂತಹ ಕಾರುಗಳು, ವಜ್ರ, ಚಿನ್ನಾಭರಣ, ನಗದು, ಮೊಬೈಲ್, ಬೈಕ್, ಲ್ಯಾಪ್‌ಟಾಪ್ ಸೇರಿ ಕಂಡಿದ್ದೆಲ್ಲ, ಕೈಗೆ ಸಿಕ್ಕಿದ್ದೆಲ್ಲ ಕದ್ದ ಕುಖ್ಯಾತಿ ಈತನದ್ದು. ಅಷ್ಟೇ ಅಲ್ಲ, ಬೆಂಗಳೂರಿನಿಂದ ಹಿಡಿದು ದೆಹಲಿವರೆಗೆ, ಚೆನ್ನೈನಿಂದ ಹಿಡಿದು ಮುಂಬೈವರೆಗೆ ಹತ್ತಾರು ನಗರಗಳಲ್ಲಿ ಬಂಟಿ ಚೋರ್ ಕೈಚಳಕ ತೋರಿಸಿದ್ದಾನೆ. ತಡರಾತ್ರಿ 2 ಗಂಟೆಯಿಂದ ಬೆಳಗ್ಗೆ 6 ಗಂಟೆ ಈತನ “Duty Hour” ಆಗಿದೆ.
ಇದನ್ನೂ ಓದಿ: Fraud Case: ಈತ ಕೇಸಲ್ಲಿ ಶತಕವೀರ; ಕೊನೆಗೂ ಸೆರೆ ಸಿಕ್ಕ ಕೋಟಿ ಚೋರ!
ಕಳ್ಳತನವೇ ವೃತ್ತಿಯಾಗಿದ್ದೇಕೆ?
45 ವರ್ಷದ ಬಂಟಿ ಚೋರ್ ಕಳೆದ 30 ವರ್ಷಗಳಿಂದ ಕಳ್ಳತನ ಮಾಡುತ್ತಿದ್ದಾನೆ. ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ. 30 ವರ್ಷದ ಕಳ್ಳತನದ ಜೀವನದಲ್ಲಿ 10 ವರ್ಷ ಆತ ಜೈಲಿನಲ್ಲಿಯೇ ಕಳೆದಿದ್ದಾನೆ. ಆದರೂ, ಬಂಟಿ ಚೋರ್ ತನ್ನ ಕೈಚಳಕ ಬಿಟ್ಟಿಲ್ಲ. 14ನೇ ವಯಸ್ಸಿನಲ್ಲಿ ಅಂದರೆ, 1993ರಲ್ಲಿ 9ನೇ ತರಗತಿಯಲ್ಲಿ ಫೇಲ್ ಆದ ಕಾರಣಕ್ಕೆ ದೇವಿಂದರ್ ಸಿಂಗ್ ತಂದೆಯು ಹೊಡೆಯುತ್ತಾರೆ. ಇದರಿಂದ ಕುಪಿತಗೊಂಡ ಬಂಟಿ ಚೋರ್, ಮನೆ ತೊರೆದು, ಕಳ್ಳತನಕ್ಕೆ ಇಳಿಯುತ್ತಾನೆ.