ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸದ್ಯ ಜೈಲು ಪಾಲಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ (Suraj-Prajwal) ಪಾಲಿಗೆ ಇಂದು (ಜುಲೈ 22) ಮಹತ್ವದ ದಿನ ಆಗಲಿದೆ. ಈ ಸಹೋದರರ ಜಾಮೀನು ಕುರಿತಾದ ಆದೇಶ ಇಂದು ಪ್ರಕಟವಾಗಲಿದೆ. ಹೀಗಾಗಿ ಇಬ್ಬರಿಗೂ ರಿಲೀಫ್ ಸಿಗುತ್ತಾ ಎನ್ನುವುದು ಸದ್ಯದ ಪ್ರಶ್ನೆ.
ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಜೈಲು ಕಂಬಿ ಎಣಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ. ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಇತ್ತ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಂಎಲ್‌ಸಿ ಸೂರಜ್ ರೇವಣ್ಣ ಅವರ ಜಾಮೀನು ಆದೇಶವನ್ನೂ ಕೋರ್ಟ್ ಇಂದೇ ಪ್ರಕಟಿಸಲಿದೆ. ಸೂರಜ್ ವಿರುದ್ಧ ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಜಾಮೀನು ಕೋರಿ ಸೂರಜ್ ಅರ್ಜಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಅರ್ಜಿಗಳ ವಿಚಾರಣೆ ನಡೆದಿದ್ದು, ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಹೀಗಾಗಿ ಸಹೋದರರ ಪಾಲಿಗೆ ಇಂದು ಬಿಗ್ ಡೇ ಆಗಲಿದೆ.
ಏನಿದು ಪ್ರಕರಣ?
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್ ವಿರುದ್ದ ಕೇಳಿ ಬಂದಿದೆ.
ಇತ್ತ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ದೂರು ಸಲ್ಲಿಸಿದ್ದರು. ಬಳಿಕ ಜೂನ್ 22ರಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದರು.
ಜೂನ್ 22ರಂದು ರಾತ್ರಿ ಸೂರಜ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನಂತರ ಐದು ಕೋಟಿ ರೂ. ಬ್ಲ್ಯಾಕ್‌ಮೇಲ್ ಕೇಸ್‌ನಲ್ಲಿ ಸಂತ್ರಸ್ತನ ವಿರುದ್ಧ ಸಾಕ್ಷ್ಯ ನೀಡಲು ಸೂರಜ್, ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ತೆರಳಿದ್ದಾಗ ಸುದೀರ್ಘ ವಿಚಾರಣೆ ಬಳಿಕ ಪೊಲೀಸರು ಬಂಧಿಸಿದ್ದರು.