ಬೆಂಗಳೂರು: ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ (Homosexuality, abnormal sexual assault, physical abuse) ಪ್ರಕರಣದಲ್ಲಿ ಬಂಧನವಾಗಿರುವ ಎಂಎಲ್‌ಸಿ ಸೂರಜ್ ರೇವಣ್ಣಗೆ (Suraj Revanna Case) ಮತ್ತೊಂದು ಸಂಕಷ್ಟ ಎದುರಾಗುತ್ತಿದೆ. ಇಂದು ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಅಂತಹದೇ ಕೇಸ್ ದಾಖಲು ಮಾಡುವ ಸಾಧ್ಯತೆ ಇದೆ.
ಸೂರಜ್‌ಗೆ ಮೊದಲ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಸೂರಜ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ನಡುವೆ ಸಿಐಡಿ ಕಚೇರಿಯಲ್ಲಿ ಮತ್ತೊಬ್ಬ ಸಂತ್ರಸ್ತನಿಂದ ಇಂದು ಕೇಸ್ ದಾಖಲು ಸಾಧ್ಯತೆ ಇದೆ. ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗುತ್ತಿದೆ.
ಸಲಿಂಗ ಕಾಮ ಪ್ರಕರಣದಲ್ಲಿ ಜೈಲುಪಾಲಾಗಿರುವ ಸೂರಜ್ ರೇವಣ್ಣನನ್ನು ಕಳೆದ ರಾತ್ರಿ ಎಂಟು ಗಂಟೆಯ ಸುಮಾರಿಗೆ ಪೊಲೀಸರು ಕಂರೆತಂದಿದ್ದು, ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಬ್ಯಾರಕ್‌ಗೆ ಶಿಫ್ಟ್ ಮಾಡಿದ್ದಾರೆ. ಕ್ವಾರಂಟೈನ್ ಸೆಲ್‌ನಲ್ಲಿ ಸೆರೆವಾಸ ಅನುಭವಿಸುತ್ತಿರುವ ಸೂರಜ್ ರೇವಣ್ಣಗೆ ಎಲ್ಲ ಕೈದಿಗಳಿಗೆ ನೀಡುವ ಊಟವನ್ನು ಸಿಬ್ಬಂದಿ ನೀಡಿದ್ದರು.
ರಾತ್ರಿ ಊಟ ಮಾಡಿ 12 ಗಂಟೆಯ ಸುಮಾರಿಗೆ ಸೂರಜ್ ನಿದ್ರೆಗೆ ಜಾರಿದ್ದರು. ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ನಿದ್ರೆಯಿಂದ ಎದ್ದು ನಿತ್ಯ ಕರ್ಮ ಮುಗಿಸಿ ಕಾಫಿ ಸೇವನೆ ಮಾಡಿದ್ದು, ಜೈಲಿನಲ್ಲಿದ್ದ ನ್ಯೂಸ್ ಪೇಪರ್ ಓದಿದ್ದಾರೆ ಎಂದು ಗೊತ್ತಾಗಿದೆ. ನ್ಯೂಸ್ ಪೇಪರ್‌ನಲ್ಲಿನ ತನ್ನ ಮೇಲಿನ ಆರೋಪದ ಸುದ್ದಿ ಓದಿದ ಸೂರಜ್, ಜೈಲು ಸಿಬ್ಬಂದಿ ಜೊತೆಗಾಗಲೀ ಸಹಕೈದಿಗಳ ಜೊತೆಗಾಗಲೀ ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ.
ರಾತ್ರಿ ಸೂರಜ್ ರೇವಣ್ಣನನ್ನು ಪೊಲೀಸರು ಜೈಲಿಗೆ ತಡವಾಗಿ ಕರೆತಂದ ಹಿನ್ನೆಲೆಯಲ್ಲಿ, ಬೆಳಿಗ್ಗೆ 10 ಗಂಟೆಯ ಬಳಿಕ ಸೂರಜ್‌ಗೆ ವಿಚಾರಣಾಧೀನ ಕೈದಿ ನಂಬರ್ ಕೊಡಲಾಗುತ್ತದೆ. ಮಧ್ಯಾಹ್ನ ಅಥವಾ ಸಂಜೆ ವೇಳೆ ಬಾಡಿ ವಾರಂಟ್ ಮೇಲೆ ಮತ್ತೆ ಸಿಐಡಿ ಕಸ್ಟಡಿಗೆ ನೀಡಲಾಗುತ್ತದೆ. ಸೂರಜ್‌ನನ್ನು ಸಿಐಡಿ ಕಸ್ಟಡಿಗೆ ಪಡೆದು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಏನಿದು ಪ್ರಕರಣ?
ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ದೌರ್ಜನ್ಯ ಎಸಗಿದ್ದು, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಸೂರಜ್ ರೇವಣ್ಣ ವಿರುದ್ಧ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದರು. ಈ ಬಗ್ಗೆ ಡಿಜಿಪಿ, ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ದೂರು ಸಲ್ಲಿಸಿದ್ದರು. ಬಳಿಕ ಜೂನ್ 22ರಂದು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಹಿತ್ತು.
ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾದ ಜೆಡಿಎಸ್ ಕಾರ್ಯಕರ್ತ, ಜೂನ್ 16ರಂದು ಸೂರಜ್ ತನಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, ಗನ್ನಿಕಡ ತೋಟದ ಮನೆಗೆ ಆಹ್ವಾನಿಸಿದ್ದರು. ಉದ್ಯೋಗ ನೀಡುವ ಭರವಸೆ ನೀಡಿ ತನ್ನನ್ನು ಕರೆಸಿಕೊಂಡು, ಸಲಿಂಗಕಾಮಕ್ಕೆ ಒತ್ತಾಯಿಸಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದರಿಂದ ನನ್ನ ದೇಹದ ಮೇಲೆ ಗಾಯಗಳಾಗಿದ್ದು, ಈ ಬಗ್ಗೆ ಎಲ್ಲಾದರೂ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದರು.
ಪ್ರತಿ ದೂರು
ಸಂತ್ರಸ್ತ ದೂರು ದಾಖಲಿಸುತ್ತಿದ್ದಂತೆ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿತ್ತು. ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಜೂನ್ 21ರಂದು ಎಫ್‌ಐಆರ್ ದಾಖಲಾಗಿತ್ತು.
ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ರೂ. ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖಿಸಿ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ದೂರು ಸಲ್ಲಿಕೆ ಮಾಡಿದ್ದರಿಂದ ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಾಗಿತ್ತು. ಸದ್ಯ ಸೂರಜ್ ಪರ, ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಶಿವಕುಮಾರ್ ಕೂಡ ನಾಪತ್ತೆಯಾಗಿದ್ದಾನೆ. ಈತ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದೆ.
ಇದನ್ನೂ ಓದಿ | Suraj Revanna Case: ಸೂರಜ್ ಪ್ರಕರಣದ ತನಿಖೆ ಹೊಣೆಯೂ ಬಿ.ಕೆ. ಸಿಂಗ್ ಹೆಗಲಿಗೆ