ಹಾಸನ: ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧನವಾಗಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಎಚ್.ಡಿ.ರೇವಣ್ಣ ಕುಟುಂಬದ ಮತ್ತೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ (Suraj Revanna Case) ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ (Unnatural sexual abuse) ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಡಿಜಿಪಿ, ಎಸ್‌ಪಿ, ಸಿಎಂ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಕೆಯಾಗಿದೆ. ಇತ್ತ ಇಂದು (ಜೂನ್ 22) ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗುವ ಸಾಧ್ಯತೆ ಇದೆ.
ತನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿರುವ ಜೆಡಿಎಸ್ ಕಾರ್ಯಕರ್ತರೊಬ್ಬರು ಇದೀಗ ವಕೀಲರ ಮೂಲಕ ದೂರು ದಾಖಲಿಸಲು ತಯಾರಿ ನಡೆಸಿದ್ದಾರೆ. ಜೂ. 16ರಂದು ಹೊಳೆನರಸೀಪುರ ತಾಲೂಕಿನ ಗನ್ನಿಕಡದ ಸೂರಜ್ ತೋಟದ ಮನೆಯಲ್ಲಿ ದೌರ್ಜನ್ಯ ನಡೆಸಲಾಗಿತ್ತು ಎಂದು ಸಂತ್ರಸ್ತ ಹೇಳಿದ್ದಾರೆ. ತೋಟದ ಮನೆಗೆ ಕರೆಸಿ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಶುಕ್ರವಾರ ಅವರು 14 ಪುಟಗಳ ದೂರು ಬರೆದು ಬೆಂಗಳೂರಿನಲ್ಲಿ ಡಿಜಿ ಅವರಿಗೆ ನೀಡಿದ್ದರು. ಇಂದು ಅಧಿಕೃತವಾಗಿ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಹಾಜರಾಗಿ ದೂರು ದಾಖಲಿಸುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣಾ ವೇಳೆ ಅರಕಲಗೂಡು ತಾಲೂಕಿನ ಜೆಡಿಎಸ್ ಕಾರ್ಯಕರ್ತನಾಗಿದ್ದ ಸಂತ್ರಸ್ತನನ್ನು ಪರಿಚಯ ಮಾಡಿಕೊಂಡು ಎಂಎಲ್‌ಸಿ ಸೂರಜ್ ಫೋನ್ ನಂಬರ್ ಪಡೆದುಕೊಂಡಿದ್ದರು. ಬಳಿಕ ಮನೆಗೆ ಕರೆಸಿ ದೌರ್ಜನ್ಯ ನಡೆಸಿದ್ದಾಗಿ ಹೇಳಿಕೆ ನೀಡಿದ್ದರು. ಇದು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಪ್ರತಿ ದೂರು
ಇತ್ತ ಸಂತ್ರಸ್ತ ದೂರು ದಾಖಲಿಸುತ್ತಿದ್ದಂತೆ ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದ. ಐದು ಕೋಟಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖಿಸಿ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ದೂರು ಸಲ್ಲಿಕೆ ಮಾಡಿದ್ದರಿಂದ ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಾಗಿದೆ.
ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವಕ ಕೇಳಿಕೊಂಡಿದ್ದ. ನೀನೇ ಹೋಗಿ ಬಾಸ್ ಭೇಟಿ ಮಾಡು ಎಂದು ಫೊನ್ ನಂಬರ್ ಕೊಟ್ಟಿದ್ದೆ. ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಕೆಲಸ ಕೇಳಲು ಸಂತ್ರಸ್ತ ಹೋಗಿದ್ದ. ಕೆಲಸ ಕೇಳಿ ವಾಪಸ್ ಬಂದ ಬಳಿಕ ಬ್ಲ್ಯಾಕ್ ಮೇಲ್ ಮಾಡಿರೊದಾಗಿ ಆರೋಪಿಸಲಾಗಿದೆ. ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲ. ನನಗೆ ತುಂಬಾ ಕಷ್ಟ ಇದೆ, ನನಗೆ ಹಣ ಬೇಕು. ನೀನು, ನಿಮ್ಮ ಬಾಸ್‌ನಿಂದ ಐದು ಕೋಟಿ ಹಣ ಕೊಡಿಸದಿದ್ದರೆ, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಸಂತ್ರಸ್ತ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ | Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ