ಸೂರತ್: ದೆಹಲಿಯಲ್ಲಿ ನಡೆದ ಹಿಟ್ ಮತ್ತು ಡ್ರ್ಯಾಗ್ ಪ್ರಕರಣ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಕೆಲವೇ ವಾರಗಳ ಅಂತರದಲ್ಲಿ ಅಂತಹ ಮತ್ತೊಂದು ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗುಜರಾತ್‌ನ ಸೂರತ್ ಹೊರವಲಯದ ಪಲ್ಸಾನಾದಲ್ಲಿ ಜನವರಿ 18ರಂದು ಈ ದುರ್ಘಟನೆ ನಡೆದಿದೆ. ಆರೋಪಿಯನ್ನು ಬಿರೇನ್ ಲಾಡುಮೋರ್ ಅಹಿರ್ ಎಂದು ಗುರುತಿಸಲಾಗಿದೆ. ನಿರ್ಮಾಣ ಉದ್ಯಮಿ ಮತ್ತು ರೆಸ್ಟೋರೆಂಟ್ ಮಾಲಿಕನಾದ ಈತನ ಕಾರು ಸಾಗರ್ ಪಾಟೀಲ್ ಎಂಬವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪಾಟೀಲ್ ಕಾರಿಗೆ ಸಿಲುಕಿಕೊಂಡಿದ್ದು, ಕಾರು ಅವರನ್ನು ಸುಮಾರು 12 ಕಿಮೀ ಎಳೆದೊಯ್ದಿದೆ. ಈ ಎಳೆತದಲ್ಲಿ ಸಾಗರ್ ಪಾಟೀಲ್ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಬಳಿಕ ಮುಂಬಯಿ ಮತ್ತು ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಅಹಿರ್‌ನನ್ನು ಸೂರತ್ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಸೂರತ್ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಎಸ್‌ಎನ್ ರಾಥೋಡ್ ತಿಳಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಬೈಕ್ ಸವಾರ ಕಾರಿನ ಕೆಳಗೆ ಸಿಲುಕಿಕೊಂಡಿರುವುದು ತನಗೆ ತಿಳಿದಿರಲಿಲ್ಲ ಎಂದಿದ್ದಾನೆ. ಅಹಿರ್‌ನ ಕಿಯಾ ಕಾರ್ನಿವಲ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಅಹಿರ್ ಗಾಬರಿಯಿಂದ ವೇಗವಾಗಿ ಕಾರು ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಘಟನೆಯ ನಂತರ ಅಹಿರ್ ವಾಹನವನ್ನು ಬಿಟ್ಟು ಮುಂಬಯಿಗೆ ಮತ್ತು ನಂತರ ರಾಜಸ್ಥಾನದ ಸಿರೋಹಿ ಜಿಲ್ಲೆಗೆ ಪಲಾಯನ ಮಾಡಿದ್ದ. ಈ ಘಟನೆಯನ್ನು ನೋಡಿದ ಬೈಕ್ ಸವಾರನೊಬ್ಬ ಮೊಬೈಲ್‌ನಲ್ಲಿ ಅದನ್ನು ಶೂಟ್ ಮಾಡಿಕೊಂಡಿದ್ದಾನೆ. ನಂತರ ಅಹಿರ್‌ನನ್ನು ಬೆನ್ನಟ್ಟಿದ್ದ.
ಇದನ್ನೂ ಓದಿ: Delhi Accident Case | ದೆಹಲಿ ಅಂಜಲಿ ಹಿಟ್ ಆ್ಯಂಡ್ ಡ್ರ್ಯಾಗ್ ಕೇಸ್ನಲ್ಲಿ 11 ಪೊಲೀಸರ ಅಮಾನತು