ಚೆನ್ನೈ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಅಪ್ರಾಪ್ತರು ಈ ಘೋರ ಕೃತ್ಯಗಳಲ್ಲಿ ತೊಡಗಿರುವುದು ಆತಂಕ ಮೂಡಿಸುತ್ತಿದೆ. ಇದೇ ರೀತಿ ಕಳವಳ ಹುಟ್ಟಿಸುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದ್ದು, 16 ವರ್ಷದ ಬಾಲಕನೊಬ್ಬ ತನ್ನ 11 ವರ್ಷದ ಸಹೋದರಿ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ (Tamil Nadu Horror).
ಇತ್ತೀಚೆಗೆ ಸಂತ್ರಸ್ತ ಬಾಲಕಿಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಹೆತ್ತವರು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರೀಕ್ಷಿಸಿದಾಗ ಬಾಲಕಿ 4 ತಿಂಗಳ ಗರ್ಭಿಣಿ ಎನ್ನುವುದು ತಿಳಿದು ಬಂತು. ಈ ವೇಳೆ ಆಕೆ ತನ್ನ ಸಹೋದರನ ನೀಚ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದು, ಹೆತ್ತವರು ಆಘಾತಕ್ಕೆ ಒಳಗಾಗಿದ್ದಾರೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಜಿಂಜಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತಮ್ಮ ಮನೆ ತುಂಬ ಚಿಕ್ಕದಾಗಿದ್ದು, ಜಾಗ ಇಲ್ಲದ ಕಾರಣ ತಾವು ಟೆರೇಸ್ ಮೇಲೆ ಮಲಗಿದರೆ, ಮನೆಯೊಳಗೆ ಮಕ್ಕಳಿಬ್ಬರು ಮಲಗುತ್ತಾರೆ. ಈ ವೇಳೆ ಸಹೋದರ ದೌರ್ಜನ್ಯ ಎಸಗಿದ್ದಾನೆ ಎಂದು ಹೆತ್ತವರು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಆತ ನಿರಂತರವಾಗಿ ತನ್ನ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನು ತಂದೆ ತಾಯಿ ಬಳಿ ಹೇಳದಂತೆಯೋ ಬೆದರಿಕೆ ಹಾಕಿದ್ದ ಎಂದು ಆಕೆ ಈಗ ಬಾಯ್ಬಿಟ್ಟಿದ್ದಾಳೆ.
ಇತ್ತೀಚೆಗೆ ಆಕೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ತೆರಳಿದ್ದರಿಂದ ಈ ಆಘಾತಕಾರಿ ಸತ್ಯ ಹೊರ ಬಿದ್ದಿದೆ. ಸದ್ಯ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ತಂಗಿ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ, ಕೊಲೆ
ಕೆಲವು ದಿನಗಳ ಹಿಂದೆಯಷ್ಟೇ ಮಧ್ಯಪ್ರದೇಶದ ರೇವಾದಲ್ಲಿ 9 ವರ್ಷದ ತಂಗಿಯ ಮೇಲೆ 13 ವರ್ಷದ ಅಣ್ಣನು ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಅಶ್ಲೀಲ ವಿಡಿಯೊ ವೀಕ್ಷಿಸಿದ ಬಳಿಕ ಆತನು ತಂಗಿಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಾಲಕನು ಅತ್ಯಾಚಾರ ಎಸಗಿದ ಬಳಿಕ ಬಾಲಕಿಯನ್ನು ಕತ್ತು ಹಿಸುಕುವ ವೇಳೆ ಆತನ ತಾಯಿ ಹಾಗೂ ಇಬ್ಬರು ಅಕ್ಕಂದಿರು ಕೂಡ ಇದ್ದರು. ಹತ್ಯೆಯ ಬಳಿಕ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದರು ಎಂಬ ಮಾಹಿತಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ಇದನ್ನೂ ಓದಿ: Sexual Harassment: ರಿಕ್ಷಾದಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಚಾಲಕ
ಏಪ್ರಿಲ್ 24ರಂದೇ ಪ್ರಕರಣ ನಡೆದಿತ್ತು. ಮೊದಲು ಬಾಲಕನು ಅಶ್ಲೀಲ ವಿಡಿಯೊ ನೋಡಿದ್ದಾನೆ. ಇದಾದ ಬಳಿಕ ಕಾಮೋದ್ರೇಕಗೊಂಡ ಆತನು 9 ವರ್ಷದ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕನ ಕೃತ್ಯವು ಆತನ ತಾಯಿ ಹಾಗೂ 17 ಮತ್ತು 18 ವರ್ಷದ ಸಹೋದರಿಯರಿಗೆ ಗೊತ್ತಿದೆ. ತಾಯಿಯ ಎದುರೇ ಬಾಲಕನು ಕತ್ತು ಹಿಸುಕಿದ್ದಾನೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದರು.