Site icon Vistara News

Tantrik Arrest: ರೋಗ ಗುಣಪಡಿಸುವುದಾಗಿ ಹೇಳಿ ಯುವತಿಯ ತಲೆಗೆ 18 ಸೂಜಿ ಚುಚ್ಚಿದ ಮಂತ್ರವಾದಿ!

Tantrik Arrest

ತಂತ್ರವಿದ್ಯೆಗಳ ಪ್ರಯೋಗದ ಬಗ್ಗೆ ಜನರಿಗೆ ಇಂದಿಗೂ ನಂಬಿಕೆ ಇದೆ. ಹಾಗಾಗಿ ಕೆಲವು ಜನ ತಮಗೆ ಯಾವುದೇ ಸಮಸ್ಯೆಯಾದರೂ ಅದಕ್ಕಾಗಿ ಆಸ್ಪತ್ರೆಗೆ ಹೋಗುವ ಬದಲು ಭೂತ ಪ್ರೇತದ ನೆಪದಲ್ಲಿ ತಂತ್ರಿಗಳ ಬಳಿಗೆ ಹೋಗಿ ತಂತ್ರ ವಿದ್ಯೆ ಪ್ರಯೋಗಿಸುತ್ತಾರೆ. ಇದರಿಂದ ಮತ್ತಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಇದೀಗ ಅಂತಹದೊಂದು ಘಟನೆ ಒಡಿಶಾದಲ್ಲಿ ನಡೆದಿದ್ದು, ಇದರಿಂದ ಯುವತಿಯ ಸ್ಥಿತಿ ಗಂಭೀರವಾಗಿದೆ. ಒಡಿಶಾದ ಬಾಲಂಗೀರ್ ಜಿಲ್ಲೆಯಲ್ಲಿ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ 19 ವರ್ಷದ ಯುವತಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ತಲೆಗೆ ಅನೇಕ ಸೂಜಿಗಳನ್ನು ಚುಚ್ಚಿದ ಆರೋಪದ ಮೇಲೆ ತಂತ್ರಿಯೊಬ್ಬನ್ನು (Tantrik Arrest) ಬಂಧಿಸಲಾಗಿದೆ.

Tantrik Arrest

ಈ ಘಟನೆ ಬೆಳಕಿಗೆ ಬಂದ ನಂತರ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವರಗಳ ಪ್ರಕಾರ, ಯುವತಿ ಕಳೆದ ನಾಲ್ಕು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೂ ಕೂಡ ಅವಳ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಲಿಲ್ಲ, ಆಗ ಅವಳ ಕುಟುಂಬದವರು ತಂತ್ರಿ ಸಹಾಯವನ್ನು ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಯುವತಿ ತನ್ನ ಹೆತ್ತವರೊಂದಿಗೆ ತಂತ್ರಿಗಳ ಬಳಿಗೆ ಬಂದಿದ್ದಾಳೆ.

ಆರೋಪಿಯನ್ನು ತಂತ್ರಿ ಸಂತೋಷ್ ರಾಣಾ ಎಂಬುದಾಗಿ ಗುರುತಿಸಲಾಗಿದೆ. ಆತ ಮಹಿಳೆಯನ್ನು ಕೋಣೆಯೊಳಗೆ ಕರೆದೊಯ್ದಿದ್ದಾನೆ. ಒಂದು ಗಂಟೆಯ ನಂತರ ಅವನು ಅವಳನ್ನು ಹೊರಗೆ ಕರೆತಂದ. ಆದರೆ ಯುವತಿಯ ಪೋಷಕರು ಆಕೆ ಮತ್ತಷ್ಟು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ನಂತರ ಅವಳ ತಲೆಯೊಳಗೆ ಸೂಜಿಗಳನ್ನು ಪತ್ತೆ ಮಾಡಿದರು. ತನ್ನ ಮಗಳ ತಲೆಯೊಳಗೆ ಎಂಟು ಸೂಜಿಗಳನ್ನು ತೆಗೆದುಹಾಕಿದ್ದೇನೆ ಎಂಬುದಾಗಿ ಆಕೆಯ ತಂದೆ ತಿಳಿಸಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಸಿಟಿ ಸ್ಕ್ಯಾನ್ ನಡೆಸಲಾಯಿತು, ಆಗ ಆಕೆಯ ತಲೆಯಲ್ಲಿ ಇನ್ನೂ 10 ಸೂಜಿಗಳನ್ನು ಚುಚ್ಚಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಸಮಯದಲ್ಲಿ ಅವಳು ಪ್ರಜ್ಞೆ ತಪ್ಪಿದ್ದಳು. ಹಾಗಾಗಿ ತಲೆಗೆ ಸೂಜಿ ಚುಚ್ಚಿದ ಬಗ್ಗೆ ಆಕೆಗೆ ಹೇಳಲು ಆಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಬಾಲಕಿ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ; ವಿಡಿಯೊ ಮನೆಗೇ ಕಳಿಸಿದ ದುಷ್ಟರು

ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಂತ್ರಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಈ ಘಟನೆಯು ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ತಂತ್ರ ವಿದ್ಯೆಗಳ ಮೂಲಕ ನೀಡುವ ಚಿಕಿತ್ಸೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಿಳಿಸುತ್ತದೆ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗದವರ ದುರ್ಬಲತೆಯನ್ನು ಎತ್ತಿ ತೋರಿಸಿದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಅರ್ಹ ವೈದ್ಯಕೀಯ ಸಹಾಯವನ್ನು ಪಡೆಯುವುದು ಉತ್ತಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಮತ್ತು ಅಂತಹ ತಂತ್ರಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

Exit mobile version