ಲಖನೌ: ಹೆಚ್ಚು ಮೊಬೈಲ್ ನೋಡಬೇಡ, ಕಂಪ್ಯೂಟರ್‌ನಲ್ಲಿ ಹೆಚ್ಚು ಹೊತ್ತು ಕಳೀಬೇಡ, ಏನೇನೋ ಆನ್‌ಲೈನ್ ಗೇಮ್ಸ್ ಆಡಬೇಡ ಎನ್ನುವ ಎಚ್ಚರಿಕೆ ಮಾತುಗಳು ಪ್ರತಿ ಮನೆಯಲ್ಲೂ ಸಹಜವೆ. ಆಗೆಲ್ಲ ಮಕ್ಕಳಿಗೆ ಹಾಗೆ ಹೇಳುವ ಅಮ್ಮನ ಮೇಲೆ, ಅಪ್ಪನ ಮೇಲೆ ಸಿಟ್ಟು ಬರೋದು ಕೂಡಾ ಸಹಜವೆ. ಆ ರೀತಿ ಬೈದಾಗ ಕೆಲವು ಮಕ್ಕಳು ಆಯ್ತಮ್ಮ ಅಂತ ಒಪ್ಪಿಕೊಳ್ಳಬಹುದು, ಕೆಲವು ಮಕ್ಕಳು ಸಿಟ್ಟಿನಲ್ಲಿ ಅಮ್ಮನಿಗೆ ಬಯ್ಯುವುದೋ, ಕೈಗೆ ಸಿಕ್ಕಿದ್ದನ್ನು ಎಸೆದು ಸಿಟ್ಟು ಪ್ರದರ್ಶಿಸುವುದೋ ಮಾಡಬಹುದು. ಆದರೆ, ಹೀಗೂ ಮಾಡಬಹುದಾ? ಈಗಿನ ಮಕ್ಕಳು ಇಷ್ಟೊಂದು ಕ್ರೂರಿಗಳಾ ಅಂತ ಅನಿಸುವ ಭಯಾನಕ ಘಟನೆಯೊಂದು ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
16 ವರ್ಷದ ಬಾಲಕನೊಬ್ಬ ಅಮ್ಮ ಪಬ್ ಜಿ ಆಡಲು ಬಿಟ್ಟಿಲ್ಲ ಎಂಬ ಸಿಟ್ಟಿನಲ್ಲಿ ಮನೆಯಲ್ಲಿದ್ದ ಲೈಸನ್ಸ್‌ಡ್ ರಿವಾಲ್ವರ್ ತೆಗೆದು ನೇರವಾಗಿ ತಲೆಗೇ ಗುಂಡಿಟ್ಟು ಕೊಂದು ಹಾಕಿದ್ದಾನೆ. ಅಷ್ಟೇ ಅಲ್ಲ, ಅಲ್ಲಿ ಏನೂ ಆಗೇ ಇಲ್ಲ ಎಂಬಂತೆ ಸ್ನೇಹಿತರನ್ನು ಮನೆಗೇ ಕರೆಸಿಕೊಂಡು ಅವರ ಜತೆ ಪಾರ್ಟಿ ಮಾಡಿದ್ದಾನೆ. ಮೂರು ದಿನ ಅತ್ಯಂತ ನಿರ್ಲಿಪ್ತವಾಗಿ ಕಳೆದಿದ್ದಾನೆ. ಒಬ್ಬ 16 ವರ್ಷದ ಬಾಲಕ ಈ ರೀತಿ ಮಾಡಬಹುದಾ ಎಂದು ನೀವು ಯೋಚಿಸುತ್ತಿದ್ದರೆ ದಯವಿಟ್ಟು ನಿಲ್ಲಿ. ಅವನು ಮಾಡಿದ್ದು ಇಷ್ಟೇ ಆಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲೇ ಆ ಹುಡುಗ ಎಷ್ಟು ಕ್ರೂರಿಯಾಗಿದ್ದ ಎನ್ನುವುದನ್ನು ಡಿಟೇಲಾಗಿ ಓದಿ.
ಅದು ಲಖನೌನ ಪಿಜಿಐ ಪ್ರದೇಶದಲ್ಲಿರುವ ಅಲ್ಡಿಕೋ ಕಾಲೊನಿ. ಅಲ್ಲಿನ ಮನೆಯಲ್ಲಿ ಆ ಕುಟುಂಬ ವಾಸವಾಗಿತ್ತು. ಮನೆಯ ಯಜಮಾನ ಭಾರತೀಯ ಸೇನೆಯಲ್ಲಿ ಅಧಿಕಾರಿ. ಕೋಲ್ಕೊತಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಸಾಧನೆ (40) ಈ ಮನೆಯಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು. ದೊಡ್ಡವನಿಗೆ 16 ವರ್ಷ. ಸಣ್ಣ ಮಗಳಿಗೆ 10 ವರ್ಷ.
16 ವರ್ಷದ ಮಗನಿಗೆ ಎಲ್ಲ ಮಕ್ಕಳಂತೆ ಪಬ್‌ಜಿ ಆಡುವ ಹುಚ್ಚು. ಅಪ್ಪ ಮನೆಯಲ್ಲಿ ಇಲ್ಲದೆ ಇದ್ದುದರಿಂದ ಅಮ್ಮನೇ ಆಗಾಗ ಅವನ ಪಬ್ ಜಿ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಆವತ್ತು ಭಾನುವಾರ ರಾತ್ರಿ. ಎಂದಿನಂತೆ ಪಬ್ ಜಿ ಆಟಕ್ಕೆ ತೊಡಗಿದಾಗ ಅಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಹಣ ಕೊಡು ಎಂದು ಕೇಳಿದ್ದಾನೆ. ಆದರೆ, ತಾಯಿ ನಿರಾಕರಿಸಿದ್ದಾಳೆ. ಅಷ್ಟು ಹೊತ್ತಿಗೆ ಸಿಟ್ಟುಗೊಂಡ ಹುಡುಗ ನೇರವಾಗಿ ಕೋಣೆಯ ಒಳಗೆ ಹೋಗಿ ಅಲ್ಲಿ ಭದ್ರವಾಗಿದ್ದ ಅಪ್ಪನ ಸರ್ವಿಸ್ ರಿವಾಲ್ವರ್‌ನ್ನು ತಂದು ನೇರವಾಗಿ ಅಮ್ಮನ ತಲೆಗೆ ಹಿಡಿದಿದ್ದಾನೆ. ಏನಾಗುತ್ತಿದೆ ಎಂದು ಸಾಧನಾ ಅವರು ಸಾವರಿಸಿಕೊಳ್ಳುವಷ್ಟರಲ್ಲಿ ಮಗ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ.
ಇಷ್ಟಾದರೂ ಒಂದು ಸ್ವಲ್ಪವೂ ಆಘಾತಕ್ಕೆ ಒಳಗಾದ ಹುಡುಗ ಕೂಡಲೇ ತಾಯಿಯ ದೇಹವನ್ನು ಕೋಣೆಯೊಳಗೆ ಎಳೆದೊಯ್ದು ಇಟ್ಟಿದ್ದಾನೆ. ಇದನ್ನೆಲ್ಲ ನೋಡುತ್ತಿದ್ದ 10 ವರ್ಷದ ತಂಗಿಯನ್ನು ಪಕ್ಕದ ಕೋಣೆಯಲ್ಲಿ ಹಾಕಿ ಬಾಗಿಲು ಹಾಕಿದ್ದಾನೆ.
ಇಷ್ಟೆಲ್ಲವನ್ನೂ ಮಾಡಿದ ಆತ ಅಷ್ಟಕ್ಕೇ ಸುಮ್ಮನಿರಲಿಲ್ಲ. ಆವತ್ತು ರಾತ್ರಿಯೋ ಅಥವಾ ಮರುದಿನವೋ ಏನೋ ತನ್ನ ಗೆಳೆಯರಲ್ಲಿ ಕೆಲವರನ್ನು ಮನೆಗೆ ಕರೆಸಿಕೊಂಡಿದ್ದಾನೆ. ಅವರ ಜತೆ ಕುಳಿತು ಫುಕ್ರೇ ಸಿನಿಮಾ ನೋಡಿದ್ದಾನೆ, ಪಾರ್ಟಿ ಮಾಡಿದ್ದಾನೆ. ಮನೆಗೆ ಬಂದ ಸ್ನೇಹಿತರು ʻಅಮ್ಮ ಎಲ್ಲೋʼ ಎಂದು ಕೇಳಿದರೆ, ʻಅಮ್ಮ ಆಂಟಿ ಮನೆಗೆ ಹೋಗಿದ್ದಾರೆʼ ಎಂದು ಧೈರ್ಯವಾಗಿಯೇ ಸುಳ್ಳು ಹೇಳಿದ್ದಾನೆ. ತಂಗಿ ಕೂಡಾ ಅವರ ಜತೆಗೇ ಹೋಗಿದ್ದಾಳೆ ಎಂದಿದ್ದಾನೆ. ಇಷ್ಟು ಮಾತ್ರವಲ್ಲ ಆನ್‌ಲೈನ್‌ನಲ್ಲಿ ಎಗ್ ಕರ‍್ರಿ ತರಿಸಿಕೊಂಡು ಚೆನ್ನಾಗಿ ತಿಂದಿದ್ದಾನೆ.
ಬಾಲಕ ಎಷ್ಟರ ಮಟ್ಟಿಗೆ ತಲೆ ಓಡಿಸಿದ್ದಾನೆ ಎಂದರೆ ಹೆಣದ ವಾಸನೆ ಹೊರಗೆ ಬರಬಾರದು ಎಂದು ರೂಂ ಫ್ರೆಷ್ನರ್‌ನ್ನು ಹಾಕಿದ್ದಾನೆ. ಆದರೆ, ಹೆಣವನ್ನು ಎಷ್ಟು ದಿನ ಇಟ್ಟುಕೊಳ್ಳಬಹುದು ಹೇಳಿ. ಮಂಗಳವಾರ ಸಂಜೆ ಹೊತ್ತಿಗೆ ವಾಸನೆ ಪಕ್ಕದ ಮನೆಗೆ ಬಡಿಯಲು ಆರಂಭಿಸಿತು. ನಮ್ಮ ಮನೆ ಪರಿಸರದಲ್ಲಿ ಈ ತರ ವಾಸನೆ ಬರುತ್ತಿದೆ ಎಂದು ಅವರು ಪೊಲೀಸರಿಗೆ ತಿಳಿಸಿದರು. ಈ ನಡುವೆ, ಬಾಲಕ ಕೂಡಾ ಮಂಗಳವಾರ ಸಂಜೆಯ ಹೊತ್ತಿಗೆ ಅಪ್ಪನಿಗೆ ಫೋನ್ ಮಾಡಿ ತಾಯಿಯ ಸಾವಿನ ಬಗ್ಗೆ ತಿಳಿಸಿದ್ದಾನೆ. ಅವರು ಕೂಡಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಮುಂದೆಯೂ ಆಟ!
ವಿಷಯ ತಿಳಿದು ಮನೆಗೆ ಬಂದ ಪೊಲೀಸರ ಎದುರು ಬಾಲಕ ಬೇರೆಯೇ ಕಥೆ ಹೇಳಿದ್ದಾನೆ. ʻಭಾನುವಾರ ಸಂಜೆ ಮನೆಗೆ ಒಬ್ಬ ಎಲೆಕ್ಟ್ರಿಷಿಯನ್ ಬಂದಿದ್ದ. ಅವನು ನನ್ನ ತಾಯಿಯನ್ನು ಕೊಂದಿದ್ದಾನೆ. ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆʼ ಎಂದು ಕಥೆ ಹೆಣೆದ. ಆದರೆ, ಇವನ ನವರಂಗಿ ಆಟ ಪೊಲೀಸರ ಮುಂದೆ ಹೆಚ್ಚು ಹೊತ್ತು ನಡೆಯಲಿಲ್ಲ. ಮುಂದಿನ ಎರಡೂವರೆ ಗಂಟೆಯಲ್ಲಿ ನಡೆದ ಘಟನೆಯನ್ನು ಯಥಾವತ್ತಾಗಿ ಬಾಯಿ ಬಿಟ್ಟ.
ಪೊಲೀಸರು ವಿಧಿ ವಿಜ್ಞಾನ ತಜ್ಞರನ್ನು ಕರೆಸಿ ತಪಾಸಣೆ ನಡೆಸಿದರು. ಸಾಧನಾ ಅವರ ತಲೆಗೆ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಲಾಗಿದೆ ಎನ್ನುವುದು ತಿಳಿದುಬಂತು. ಬಾಲಕ ಕೊಲೆಯನ್ನು ಮರೆ ಮಾಚಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ತಂಪನೆಯ ವಾತಾವರಣದಲ್ಲಿ ಶವ ಕೊಳೆಯವುದಿಲ್ಲ ಎಂಬ ಕಾರಣಕ್ಕೋ ಏನೋ ಎಸಿಯನ್ನು ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಇಟ್ಟಿದ್ದ ಎಂದು ಕಂಟೋನ್ಮೆಂಟ್ ಎಸಿಪಿ ಅರ್ಚನಾ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರೇಯಸಿಯ ಮಾಜಿ ಲವ್ವರ್‌ನಿಂದ ಹಾಲಿ ಲವ್ವರ್ ಕೊಲೆ