ಮುಂಬೈ: ಜಗತ್ತಿನಲ್ಲಿ ಅಮ್ಮನ ಕೈತುತ್ತು ಬಿಡಿ, ಅಮ್ಮನ ಮುಖವನ್ನೇ ಕಾಣದ ಕೋಟ್ಯಂತರ ಜನರಿದ್ದಾರೆ. ಅಮ್ಮನನ್ನು ಕಳೆದುಕೊಂಡವರಿಗೆ ಆ ದುಃಖ ಉಸಿರಿರುವತನಕ ಕಾಡುತ್ತದೆ ಎಂಬ ಮಾತಿದೆ. ಅಷ್ಟಕ್ಕೂ, ಅಮ್ಮನ (Mother) ಪ್ರೀತಿ, ಅಮ್ಮನ ಕೈತುತ್ತು ತಿಂದವರೇ ಅದೃಷ್ಟವಂತರು. ಇನ್ನು ಫೈವ್ ಸ್ಟಾರ್ ಹೋಟೆಲ್‌ನಲ್ಲಿ (Five Star Hotel) ಊಟ ಮಾಡಿದರೂ ಅಮ್ಮ ಮಾಡುವ ಅಡುಗೆಯ ರುಚಿಗೆ ಸರಿಸಾಟಿಯೇ ಇರುವುದಿಲ್ಲ. ಆದರೆ, ಮಹಾರಾಷ್ಟ್ರದಲ್ಲೊಬ್ಬ (Maharashtra) ದುಷ್ಟ ಮಗನು, ತಾಯಿ ಮಾಡಿದ ಅಡುಗೆ ರುಚಿಯಾಗಿಲ್ಲ ಎಂದು ಆಕೆಯನ್ನೇ ಕೊಂದಿದ್ದಾನೆ.
ಹೌದು, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವೇಲು ಗ್ರಾಮದಲ್ಲಿ ಭಾನುವಾರ (ನವೆಂಬರ್ 26) ಸಂಜೆ ಕೊಲೆ ನಡೆದಿದೆ. ಅಡುಗೆ ರುಚಿಯಾಗಿ ಮಾಡಿಲ್ಲ ಎಂದು 55 ವರ್ಷದ ತಾಯಿಯನ್ನು ಮಗ ಕೊಂದಿದ್ದಾನೆ ಎಂದು ಪೊಲೀಸರು ಮಂಗಳವಾರ (ನವೆಂಬರ್ 28) ಮಾಹಿತಿ ನೀಡಿದ್ದಾರೆ. “ಮನೆ, ಅಡುಗೆ ವಿಚಾರಕ್ಕೆ ಆಗಾಗ ತಾಯಿ ಮಗನ ಮಧ್ಯೆ ಜಗಳ ನಡೆಯುತ್ತಿತ್ತು. ಭಾನುವಾರ ರಾತ್ರಿ ಮನೆಗೆ ಬಂದ ಮಗನಿಗೆ ತಾಯಿ ಊಟ ಬಡಿಸಿದ್ದಾಳೆ. ಊಟ ರುಚಿಯಾಗಿಲ್ಲ ಎಂದು ಆತ ತಾಯಿ ಜತೆ ಜಗಳ ಆಡಿದ್ದಾನೆ. ಇದೇ ವೇಳೆ ಆತನು ತಾಯಿಯ ಕತ್ತಿಗೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಮಹಿಳೆ ಮೃತಪಟ್ಟಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಿದಿನ ರುಚಿಯಾಗಿ ಅಡುಗೆ ಮಾಡಿಲ್ಲ ಎಂದು ವ್ಯಕ್ತಿಯು ತಾಯಿ ಜತೆ ಜಗಳ ಆಡುತ್ತಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. “ರುಚಿಯಾಗಿ ಅಡುಗೆ ಮಾಡಿಲ್ಲ ಎಂಬ ವಿಷಯಕ್ಕೇ ಕಳೆದ ಭಾನುವಾರ ವ್ಯಕ್ತಿಯು ಕೋಪಗೊಂಡಿದ್ದಾನೆ. ಮೊದಲು ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಕುಡಗೋಲಿನಿಂದ ಆಕೆಯ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ” ಎಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮಗಳ ಮೇಲೆಯೇ ಪ್ರಿಯತಮ ಲೈಂಗಿಕ ದೌರ್ಜನ್ಯ ಎಸಗಲು ಬಿಟ್ಟ ಮಹಿಳೆಗೆ 40 ವರ್ಷ ಜೈಲು
ತಾಯಿ ಮೇಲೆ ಮಗ ಹಲ್ಲೆ ನಡೆಸುತ್ತಿರುವ ಕುರಿತು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದರು ಎನ್ನಲಾಗಿದೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮತ್ತೊಂದೆಡೆ, ತಾಯಿಯನ್ನು ಹತ್ಯೆಗೈದ ವ್ಯಕ್ತಿಯು ನಿದ್ರೆ ಮಾತ್ರೆಗಳನ್ನು ನುಂಗಿದ್ದಾನೆ. ಅಸ್ವಸ್ಥಗೊಂಡಿರುವ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಗುಣಮುಖನಾದ ಮೇಲೆ ಪೊಲೀಸರು ಬಂಧಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ