ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜೂನ್ ೨೦ರಂದು ಸಂಭವಿಸಿದ ಒಂದೇ ಮನೆಯ ಒಂಬತ್ತು ಮಂದಿಯ ನಿಗೂಢ ಸಾವಿಗೆ ಬಹುದೊಡ್ಡ ತಿರುವು ಸಿಕ್ಕಿದೆ. ಆವತ್ತು ಇದೊಂದು ಸಾಮೂಹಿಕ ಆತ್ಮಹತ್ಯೆ ಇರಬಹುದು ಎಂದು ನಂಬಲಾಗಿತ್ತು. ಆದರೆ, ಇದು ಮಂತ್ರವಾದಿ ಮಾಡಿದ ಭಯಾನಕ ಕೃತ್ಯ ಎಂದು ಬಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.
ಆವತ್ತು ಏನಾಗಿತ್ತು?
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೈಸಲ್ ಗ್ರಾಮದಲ್ಲಿ ಜೂನ್ ೨೦ರಂದು ಅಣ್ಣ-ತಮ್ಮಂದಿರಾದ ಒಬ್ಬ ಶಿಕ್ಷಕ ಮತ್ತು ಇನ್ನೊಬ್ಬ ಪಶುವೈದ್ಯರ ಕುಟುಂಬದ ಒಂಬತ್ತು ಮಂದಿ ನಿಗೂಢವಾಗಿ ಮೃತಪಟ್ಟಿದ್ದರು.
೯ ಜನರಲ್ಲಿ, ಮೂವರ ಮೃತದೇಹ ಮನೆಯ ಒಂದು ಭಾಗದಲ್ಲಿ ಸಿಕ್ಕಿದ್ದರೆ, ಇನ್ನು ಆರು ಜನರ ಶವ ಮತ್ತೊಂದು ಭಾಗದಲ್ಲಿ ಪತ್ತೆಯಾಗಿತ್ತು. ಮೃತರಲ್ಲಿ ನಾಲ್ವರು ಮಕ್ಕಳಾಗಿದ್ದರು. ಅಕ್ಕಾತಾಯ್ ವಾಮೋರೆ(72), ಅವರ ಇಬ್ಬರು ಪುತ್ರರಾದ ಡಾ. ಮಾಣಿಕ್ ಯೆಲ್ಲಪ್ಪ ವ್ಯಾನ್ಮೋರ್(49), ಪೋಪಟ್ ಯೆಲಪ್ಪಾ ವ್ಯಾನ್ಮೋರ್(52), ಮಾಣಿಕ್ ಪತ್ನಿ ರೇಖಾ ಮಾಣಿಕ್ ವ್ಯಾನ್ಮೋರ್(೪೫), ಇವರ ಪುತ್ರ ಆದಿತ್ಯ (೧೫) ಮತ್ತು ಪುತ್ರಿ ಅನಿತಾ (೨೮). ಪೋಪಟ್ ಪತ್ನಿ ಸಂಗೀತಾ ವ್ಯಾನ್ಮೋರ್(೪೮), ಪುತ್ರಿ ಅರ್ಚನಾ (೩೦) ಮತ್ತು ಪುತ್ರ ಶುಭಂ (೨೮) ಮೃತರು.
ಆರಂಭದಲ್ಲಿ ಇದೊಂದು ಸಾಮೂಹಿಕ ಆತ್ಮಹತ್ಯೆಯಾಗಿರಬಹುದು ಎಂದು ಭಾವಿಸಲಾಗಿತ್ತು. ಈ ಕುಟುಂಬ ಸಾಲ ಪಡೆದಿದ್ದು, ಸಾಲಗಾರರ ಕಾಟದಿಂದ ನಲುಗಿತ್ತು ಎಂಬ ಸುದ್ದಿಗಳು ಹರಡಿದ್ದವು. ಹೀಗಾಗಿ ಆ ಭಾಗದ ೧೫ ಮಂದಿ ಹಣಲೇವಾದೇವಿಗಾರರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆದರೆ, ಸರಿಯಾದ ಸುಳಿವು ಸಿಕ್ಕಿರಲಿಲ್ಲ.
ಇದು ಮಾಂತ್ರಿಕರು ಮಾಡಿದ ದುಷ್ಕೃತ್ಯ
ಆರಂಭದಲ್ಲೇ ಈ ಸಾವಿನ ಹಿಂದೆ ಏನೋ ನಿಗೂಢತೆ ಇದೆ ಎಂಬ ಸಂಶಯ ಪೊಲೀಸರಿಗಿತ್ತು. ಹೀಗಾಗಿ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದರು. ಪೊಲೀಸರ ಸತತ ತನಿಖೆಯ ಪರಿಣಾಮವಾಗಿ ಇದೊಂದು ಮಾಂತ್ರಿಕರು ಮಾಡಿದ ದುಷ್ಕೃತ್ಯ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಧಾನ ಆರೋಪಿಯಾಗಿರುವ ಅಬ್ಬಾಸ್ ಮೊಹಮ್ಮದ್ ಅಲಿ ಭಗವಾನ್ ಎಂಬಾತ ತನ್ನ ಸಹಚರನೊಬ್ಬನ ಸಹಾಯದಿಂದ ಈ ಕೊಲೆ ಮಾಡಿದ್ದಾನೆ.
ಭಗವಾನ್ ಒಬ್ಬ ಮಾಂತ್ರಿಕನಾಗಿದ್ದು, ಆತ ಈ ಕುಟುಂಬದ ಮನೆಯಲ್ಲಿ ಒಂದು ನಿಧಿ ಇದೆ ಎಂದು ನಂಬಿಸಿದ್ದ. ಅದನ್ನು ತೆಗೆದುಕೊಡುವುದಾಗಿ ಹೇಳಿದ ಹಲವಾರು ಬಾರಿ ಈ ಕುಟುಂಬದಿಂದ ಹಣವನ್ನು ಪಡೆದಿದ್ದ. ಈ ಮೊತ್ತ ಸುಮಾರು ಒಂದು ಕೋಟಿ ರೂ. ಮೀರಿತ್ತು ಎನ್ನಲಾಗಿದೆ. ಆದರೆ, ಆತ ನಿಧಿ ಹುಡುಕಿಕೊಡುವ ಕೆಲಸ ಮಾಡಿರಲಿಲ್ಲ. ಈ ನಡುವೆ ಕುಟುಂಬದವರು ತಮ್ಮ ಹಣವನ್ನು ಮರಳಿಸುವಂತೆ ಭಗವಾನ್‌ನ ಬೆನ್ನು ಬಿದ್ದಿದ್ದರು. ಹೀಗಾಗಿ ಇಡೀ ಕುಟುಂಬವನ್ನು ಕೊಲೆ ಮಾಡಲು ನಿರ್ಧರಿಸಿದ್ದಾಗಿ ಭಗವಾನ್ ಬಾಯಿ ಬಿಟ್ಟಿದ್ದಾನೆ.
ಪೊಲೀಸರಿಗೆ ಸಂಶಯ ಬಂದಿದ್ದು ಹೇಗೆ?
ಮೃತಪಟ್ಟ ಒಂಬತ್ತು ಮಂದಿಯ ಪೈಕಿ ಒಬ್ಬರ ಕೈಯಲ್ಲಿ ಮಾತ್ರ ವಿಷದ ಬಾಟಲಿ ಇತ್ತು. ಆತ್ಮಹತ್ಯಾ ಟಿಪ್ಪಣಿ ಬಗ್ಗೆಯೂ ಪೊಲೀಸರಿಗೆ ಅನುಮಾನ ಇತ್ತು.
ಸಾಮಾನ್ಯವಾಗಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಒಬ್ಬರು ಸಾವಿಗೆ ಕಾರಣವನ್ನು ಬರೆಯುತ್ತಾರೆ ಮತ್ತು ತಮ್ಮ ಅತಿರೇಕದ ನಿರ್ಧಾರಕ್ಕೆ ಕಾರಣರಾದವರ ಹೆಸರನ್ನು ಬರೆಯುತ್ತಾರೆ. ಆದರೆ, ಇಲ್ಲಿ ಕೆಲವರ ಹೆಸರನ್ನು ಆರಂಭದಲ್ಲೇ ಬರೆಯಲಾಗಿತ್ತು. ಇದರಲ್ಲಿ ತಾವು ಸಾಯಲು ಬಯಸಿದ್ದೇವೆ ಎನ್ನುವುದನ್ನೂ ಉಲ್ಲೇಖಿಸಿರಲಿಲ್ಲ. ಇದು ಪೊಲೀಸರಲ್ಲಿ ಸಂಶಯ ಹುಟ್ಟಿಸಿತ್ತು.
ಸಹೋದರರು ಮಂತ್ರವಾದಿಗೆ ಕೊಡಲು ಹಲವರ ಬಳಿ ಸಾಲ ಪಡೆದಿದ್ದರು. ಅವರು ಯಾರ ಬಳಿಯೆಲ್ಲಾ ಸಾಲ ಪಡೆದಿದ್ದರೋ ಅವರ ಹೆಸರನ್ನೆಲ್ಲ ಉಪಾಯದಿಂದ ಬರೆಸಿದ ಮಂತ್ರವಾದಿಗಳು ಅದನ್ನೇ ಬಳಿಕ ಆತ್ಮಹತ್ಯಾ ಟಿಪ್ಪಣಿಯಾಗಿ ಪರಿವರ್ತಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಗಾರರು ಸಿಕ್ಕಿಬಿದ್ದಿದ್ದು ಹೇಗೆ?
ಪೊಲೀಸರ ತನಿಖೆಯ ಪ್ರಕಾರ, ಮಾಂತ್ರಿಕ ಮತ್ತು ಅವನ ಸಹಚರ ಜೂನ್ ೧೯ರಂದು ರಾತ್ರಿ ಆ ಮನೆಗೆ ಬಂದಿದ್ದಾರೆ. ಇವತ್ತು ಭಗವಾನ್ ಅವರು ಬರುತ್ತಾರೆ. ರಾತ್ರಿ ನಿಧಿ ಶೋಧದ ಪೂಜೆ ಮಾಡುತ್ತಾರೆ. ನೀವು ಸಿದ್ಧರಾಗಿರಿ ಎಂದು ಹೇಳಿದ್ದಾರೆ. ಪೂಜೆಯ ಹೊತ್ತು ಬಂದಾಗ ಮನೆಯ ಸದಸ್ಯರೆಲ್ಲರನ್ನೂ ಟೆರೇಸ್‌ಗೆ ಹೋಗುವಂತೆ ತಿಳಿಸಿದ್ದಾರೆ. ಬಳಿಕ ಒಬ್ಬೊಬ್ಬರನ್ನೇ ಕೆಳಗೆ ಕರೆಸಿಕೊಂಡಿದ್ದಾರೆ. ಅವರು ಕೆಳಗೆ ಬರುತ್ತಿದ್ದಂತೆಯೇ ಅವರಿಗೆ ವಿಷಮಿಶ್ರಿತ ಚಹಾವನ್ನು ನೀಡಿದ್ದಾರೆ. ಎಲ್ಲರೂ ಸತ್ತು ಬಿದ್ದ ಬಳಿಕ ಈ ದುಷ್ಕರ್ಮಿಗಳು ವಾಹನ ಹತ್ತಿ ಪರಾರಿಯಾಗಿದ್ದಾರೆ.
ಮನೆಯ ಪರಿಸರದ ಕೆಲವು ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಒಂದು ಕಾರು ರಾತ್ರಿ ಓಡಾಡಿದ್ದು ಪತ್ತೆಯಾಗಿದೆ. ಅದು ಬಳಿಕ ಸೋಲಾಪುರದಲ್ಲಿ ಸಿಕ್ಕಿತು. ಇದರ ಆಧಾರ ಮತ್ತು ಮಾಂತ್ರಿಕರು ಮನೆಗೆ ಬಂದು ಹೋಗುತ್ತಿದ್ದ ಹಿನ್ನೆಲೆಯನ್ನು ಗಮನಿಸಿ ನಡೆಸಿದ ತನಿಖೆ ಫಲ ಕೊಟ್ಟಿದೆ.