ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Actor Darshan) ಮತ್ತು ಆತನ ಸಹಚರ ಪ್ರದೋಷ್ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಇಬ್ಬರ ಬಳಿಯೂ ಪರವಾನಗಿ ಹೊಂದಿದ ಪಿಸ್ತೂಲ್‌ಗಳಿದ್ದು Licenced Pistol), ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಇಬ್ಬರೂ ಅವುಗಳನ್ನು ಪೊಲೀಸರ ಬಳಿ ಠೇವಣಿ (deposit) ಇರಿಸಿರಲಿಲ್ಲ ಎಂಬುದು ಗೊತ್ತಾಗಿದೆ. ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.
ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್‌ಗಳು, ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇವೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದರೆ ಚುನಾವಾಣೆ ವೇಳೆ ಶಸ್ತ್ರಾಸ್ತ್ರ ಠೇವಣಿಯಿಂದ ದರ್ಶನ್ ಮತ್ತು ಪ್ರದೋಷ್ ವಿನಾಯಿತಿ ಪಡೆದಿದ್ದರು.
ಬೆಂಗಳೂರು ನಗರಾದ್ಯಂತ 7830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ. ಈ ಪೈಕಿ ದರ್ಶನ್ ಮತ್ತು ಪ್ರದೋಷ್ ಸೇರಿ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು. ಉಳಿದ 7553 ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಠೇವಣಿ ಇರಿಸಿಕೊಂಡಿದ್ದರು. ಆದರೆ ನಟ ದರ್ಶನ್ ಮತ್ತು ಪ್ರದೋಷ್ ಪಿಸ್ತೂಲ್ ವಾಪಸ್ ಮಾಡದೇ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದಿದ್ದಾರೆ.
ಬೆಂಗಳೂರಿನ 277 ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದವರಲ್ಲಿ ದರ್ಶನ್ ಮತ್ತು ಪ್ರದೋಷ್‌ಗೂ ವಿನಾಯಿತಿ ನೀಡಲಾಗಿದ್ದು, ಬೆಂಗಳೂರು ಪೊಲೀಸ್ ಕಮೀಷನರ್ ಅವರಿಂದಲೇ ವಿನಾಯಿತಿ ನೀಡಿ ಆದೇಶ ದೊರೆತಿದೆ. ಕಮೀಷನರ್ ಬಿ. ದಯಾನಂದ ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು. ಅತಿ ಗಣ್ಯರಿಗೆ ನೀಡುವ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್ ಕೂಡ ಅವಕಾಶ ಪಡೆದಿದ್ದು, ಕಳೆದ ಮಾರ್ಚ್ 27ರಂದು ವಿನಾಯಿತಿ ನೀಡಿ ಕಮೀಷನರ್ ದಯಾನಂದ್ ಆದೇಶ ನೀಡಿದ್ದರು.
ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆ ಅಧಿಕಾರಿಗಳು, ಶೂಟಿಂಗ್ ಕ್ರೀಡಾಪಟುಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಬಹುದು. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಶಕ್ಕೆ ಪಡೆಯಬೇಕು.
ಸದ್ಯ ಪ್ರದೋಷ್‌ಗೆ ಸಂಬಂಧಪಟ್ಟಂತೆ ಗಿರಿನಗರ ಠಾಣೆ ಹಾಗೂ ದರ್ಶನ್‌ಗೆ ಸಂಬಂಧಪಟ್ಟಂತೆ ಆರ್.ಆರ್.ನಗರ ಠಾಣಾಧಿಕಾರಿಗಳಿಗೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಿಕ್ಕೆ ಸೂಚನೆ ನೀಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿಗಳಿಂದ ಎರಡು ಠಾಣೆ ಪೊಲೀಸ್ ಇನ್ಸ್ಪೆಕ್ಟರ್‌ಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Actor Darshan: ಪ್ರಥಮ್, ಉಮಾಪತಿಗೆ ಬೆದರಿಕೆ ಹಾಕಿದ ಡಿ ಬಾಸ್ ಫ್ಯಾನ್ ಬಂಧನ