Site icon Vistara News

Tiger pawl : ನಟ ದರ್ಶನ್‌, ರಾಕ್‌ಲೈನ್‌, ವಿನಯ್‌ ಗುರೂಜಿಗೂ ಕಂಟಕವಾಗುತ್ತಾ ಹುಲಿ ಉಗುರು!

Vinaya Guruji and Actor Darshan tiger Pawl

ಬೆಂಗಳೂರು: ಹುಲಿಯುಗುರಿನ (Tiger pawl) ಪೆಂಡೆಂಟ್‌ ಧರಿಸಿದ್ದ ಕಾರಣಕ್ಕಾಗಿ ಕೃಷಿಕ ವರ್ತೂರು ಸಂತೋಷ್‌ (Varthur Santhosh) ಅವರನ್ನು ಬಿಗ್‌ ಬಾಸ್‌ ಮನೆಯಿಂದಲೇ (BBK Season 10) ಅರಣ್ಯಾಧಿಕಾರಿಗಳು ಅರೆಸ್ಟ್‌ ಮಾಡಿದ ಘಟನೆಯ ಬೆನ್ನಿಗೇ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಹುಲಿಯುಗುರಿನ ಚೈನ್‌ ಧರಿಸಿದ ನಟರು, ಹುಲಿಯ ಚರ್ಮದ ಮೇಲೆ ಕುಳಿತ ಸ್ವಾಮೀಜಿಗಳ ಮೇಲೆ ಜನರ ಕಣ್ಣು ಬಿದ್ದಿದೆ. ಇದರಲ್ಲಿ ಮುಖ್ಯವಾಗಿ ಈಗ ಜನರ ಗಮನ ಸೆಳೆದಿರುವುದು ನಟ ದರ್ಶನ್‌ (Actor Darshan), ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಮತ್ತು ಕೊಪ್ಪದ ಗೌರಿ ಗದ್ದೆ ಆಶ್ರಮದ ಶ್ರೀ ವಿನಯ್‌ ಗುರೂಜಿ (Vinay guruji) ಅವರು. ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಪೊಲೀಸರಿಗೆ ದೂರು ಕೂಡಾ ನೀಡಲು ಸಿದ್ಧತೆ ನಡೆದಿದೆ.

ಜನತಾ ಪಕ್ಷದ ಹೆಸರಿನಲ್ಲಿ ಪೊಲೀಸರಿಗೆ ದೂರು ನೀಡಲು ಸಿದ್ಧತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್‌ ಹಾಗೂ ಗೌರಿಗದ್ದೆ ಮಠದ ಶ್ರೀ ವಿನಯ್ ಗುರೂಜಿ ಅವರ ವಿರುದ್ಧ ಪೊಲೀಸರಿಗೆ ಮತ್ತು ಅರಣ್ಯಾಧಿಕಾರಿಗಳಿಗೆ ದೂರು ನೀಡುವುದಾಗಿ ಜನತಾ ಪಕ್ಷದ ನಾಯಕರು ಹೇಳಿದ್ದಾರೆ.

ಜನತಾಪಕ್ಷದಿಂದ ಸಲ್ಲಿಕೆಯಾಗಿರುವ ದೂರು

ವನ್ಯಜೀವಿ ಕಾಯಿದೆ 1972 ಅಡಿಯಲ್ಲಿ ಪ್ರಿನ್ಸಿಪಲ್ ಸೆಕ್ರೆಟರಿ ಸಂಜಯ್ ಎಸ್ ಬಿಜ್ಜು ಅವರಿಗೆ ಮತ್ತು ನಂತರ ಮಲ್ಲೇಶ್ವರಂನಲ್ಲಿರುವ ಅರಣ್ಯ ಇಲಾಖೆಯ ಮುಖ್ಯಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. ಜನತಾ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಂ ಪಾಲಾಕ್ಷಪ್ಪ, ಬೆಂಗಳೂರು ಘಟಕದ ಅಧ್ಯಕ್ಷರ ರಾಜು ಎ, ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ್ ಎಚ್.ಎ, ರಾಜ್ಯ ಉಪಾಧ್ಯಕ್ಷ ನಳಿನಿ ಗೌಡ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರೌಫ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

ಜನಪರ ವೇದಿಕೆ ಸಂಘಟನೆಯಿಂದಲೂ ದೂರಿಗೆ ಸಿದ್ಧತೆ

ಈ ನಡುವೆ, ಜನಪರ ವೇದಿಕೆ ಎಂಬ ಹೆಸರಿನಲ್ಲಿ ಶಿವಕುಮಾರ್‌ ಎಂಬವರು ಚಿತ್ರನಟ ದರ್ಶನ್ ಹಾಗು ವಿನಯ್ ಗುರೂಜಿ‌ ವಿರುದ್ದ ದೂರು ದಾಖಲಿಸಲು ಮುಂದಾಗಿದ್ದಾರೆ. ದರ್ಶನ್ ಹುಲಿ ಉಗುರು ಧರಿಸಿರುವ ಹಾಗು ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಪೋಟೊ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ದೂರು ನೀಡಲು ನಿರ್ಧರಿಸಲಾಗಿದೆ.

ರಾಕ್‌ಲೈನ್‌ ವೆಂಕಟೇಶ್

ಅರಣ್ಯಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿರುವ ಶಿವಕುಮಾರ್, ಬುಧವಾರ ಇಬ್ಬರ ಮೇಲೂ ದೂರನ್ನು ದಾಖಲು ಮಾಡಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ದರ್ಶನ್ ಧರಿಸಿದ ಬಂಗಾರದ ಚೈನ್‌ನಲ್ಲಿ ಹುಲಿಯ ಉಗುರು ಇದೆ. ಇದು ಕಾನೂನಿನ ಉಲ್ಲಂಘನೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣ ವರ್ತೂರು ಸಂತೋಷರ ಬಂಧನವಾಗಿರುವ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್ ಗುರೂಜಿಯನ್ನು ಕರೆಸಿ ಅವರು ಧರಿಸಿದ್ದು ಅಸಲಿನೋ, ನಕಲಿಯೋ ಪರಿಶೀಲಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ.

ಇದನ್ನೂ ಓದಿ : Varthur Santhosh Arrest : ವರ್ತೂರು ಸಂತೋಷ್‌ ಹುಲಿಯ ಉಗುರು ಖರೀದಿಸಿದ್ದು ಎಲ್ಲಿ?

ಅರ್ಚಕರ ಕೊರಳಿನ ಉಗುರಿನ ಮೇಲೂ ಕಣ್ಣು!

ಈ ನಡುವೆ ತುಮಕೂರಿನ ಕುಣಿಗಲ್ ತಾಲ್ಲೂಕಿನ ಬಿದನಗೆರೆ ಶನೇಶ್ವರಸ್ವಾಮಿ ದೇವಾಲಯದ ಅರ್ಚಕ ಧನಂಜಯ ಸ್ವಾಮಿ ಅವರ ಕೊರಳಲ್ಲಿರುವ ಹುಲಿಯ ಉಗುರಿನ ಮೇಲೂ ಕೆಲವರ ಕಣ್ಣು ಬಿದ್ದಿದೆ. ಅರ್ಚಕ ಧನಂಜಯ ಸ್ವಾಮಿ ಅವರನ್ನು ವಿಚಾರಣೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತರಿಂದ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.

ಧನಂಜಯ ಸ್ವಾಮಿ

ದೂರು ಸಲ್ಲಿಸಿದ ಕೂಡಲೇ ಅಪರಾಧಿಗಳಲ್ಲ!

ಹುಲಿಯುಗುರು ಧರಿಸಿದ ಮಾತ್ರಕ್ಕೆ ಯಾರೂ ಅಪರಾಧಿ ಆಗುವುದಿಲ್ಲ. ಆದರೆ, ಅವರು ಅದನ್ನು ಎಲ್ಲಿಂದ ಖರೀದಿಸಿದರು, ಅಕ್ರಮವಾಗಿ ಧರಿಸಿದ್ದಾರೆಯೇ? ಸೂಕ್ತ ಮಾರಾಟ ವ್ಯವಸ್ಥೆ ಮೂಲಕ ಪಡೆದಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ ಮೇಲೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಖರೀದಿಗೆ ಸೂಕ್ತವಾದ ಬಿಲ್‌ ಮತ್ತಿತರ ದಾಖಲೆಗಳಿದ್ದರೆ ಅದು ಅಪರಾಧ ಆಗುವುದಿಲ್ಲ.

Exit mobile version