ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಬುಧವಾರ ಮಧ್ಯಾಹ್ನ ಇಬ್ಬರು ಸಹೋದರಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರೂ ಬಾಲಕಿಯರು ಅಪ್ರಾಪ್ತ ವಯಸ್ಸಿನವರಾಗಿದ್ದು ದಲಿತ ಕುಟುಂಬಕ್ಕೆ ಸೇರಿದ್ದಾರೆ. ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಮೋಟರ್ ಸೈಕಲ್‌ಗಳಲ್ಲಿ ಬಂದ ಮೂವರು ಪ್ರಭಾವಿ ಜಾತಿಗೆ ಸೇರಿದ ವ್ಯಕ್ತಿಗಳು ಅವರನ್ನು ಅಪಹರಿಸಿದ್ದಾರೆ ಎಂದು ಅವರ ತಾಯಿ ಸುದ್ದಿಗಾರರಿಗೆ ತಿಳಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ʻʻಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಮಾಹಿತಿ ಮೇರೆಗೆ ನಿಘಸನ್ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ನಿಯಮಾನುಸಾರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದು, ಅದರ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಹುಡುಗಿಯರು ತಮ್ಮ ದುಪಟ್ಟಾಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಲಖನೌ ರೇಂಜ್‌ನ ಐಜಿಪಿ ಲಕ್ಷ್ಮಿ ಸಿಂಗ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ತಜ್ಞರ ಸಮಿತಿ ನಡೆಸಲಿದೆ. ಕುಟುಂಬದವರ ದೂರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ | Murder | ಯುವಕನ ಕೊಲೆಯಲ್ಲಿ ಅಂತ್ಯವಾದ ಅನೈತಿಕ ಸಂಬಂಧ; ಬಡಿಗೆಯಿಂದ ಬಡಿದು ಕೊಂದ!
ಹಿಂದೆಯೂ ಇದೇ ರೀತಿಯ ಪ್ರಕರಣಗಳು ನಡೆದಿದ್ದವು. 2019ರ ಫೆಬ್ರವರಿಯಲ್ಲಿ ಇದೇ ಜಿಲ್ಲೆಯಲ್ಲಿ ಇಬ್ಬರು ಯುವತಿಯರನ್ನು ಕೊಂದು ವಿದ್ಯುತ್ ಕಂಬದಿಂದ ತೂಗಾಡಿಸಲಾಗಿತ್ತು. ಇವರ ಕತ್ತು ಹಿಸುಕಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿತ್ತು. 2017ರ ಮೇ ತಿಂಗಳಲ್ಲಿ ಬದಾವುನ್ ಜಿಲ್ಲೆಯಲ್ಲಿ ಇಬ್ಬರು ತರುಣಿಯರನ್ನು ಮಾವಿನ ಮರಕ್ಕೆ ನೇತುಹಾಕಲಾಗಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ಓಡಿಸುತ್ತಿದ್ದ ಎಸ್‌ಯುವಿ ರೈತರ ಮೇಲೆ ಹರಿದು ಕೊಂದುಹಾಕಿದ ಜಾಗದ ಸಮೀಪದಲ್ಲಿ ಈ ಪ್ರದೇಶವಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಈ ಘಟನೆಗಾಗಿ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದೆ. ರಾಜ್ಯದಲ್ಲಿ ದಲಿತರ, ಮಹಿಳೆಯರು ಸುರಕ್ಷಿತರಾಗಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ | ತ್ರಿವಳಿ ಕೊಲೆ ತಾನೇ ಮಾಡಿದ್ದು ಎಂದಿದ್ದ ಆರೋಪಿ, ಖುಲಾಸೆಗೊಳಿಸಿದ ಹೈಕೋರ್ಟ್