Site icon Vistara News

Terror killing: ಅಮರಾವತಿ- ಉದಯಪುರ ಹತ್ಯೆಯಲ್ಲಿ ಎಸ್‌ಡಿಪಿಐ ಕೈವಾಡ, ತನಿಖೆಯಲ್ಲಿ ಬಯಲು

amaravathi udaypur

ನವ ದೆಹಲಿ: ಅಮರಾವತಿ ಮತ್ತು ಉದಯಪುರದಲ್ಲಿ ನಡೆದ ಐಸಿಸ್ ಮಾದರಿಯ ಹತ್ಯೆ ಆರೋಪಿಗಳಿಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆಗೂ ಸಂಪರ್ಕ ಇರುವುದು ಬಹಿರಂಗವಾಗಿದೆ. ಉದಯಪುರ ಹತ್ಯೆ ಆರೋಪಿ ರಿಯಾಜ್ ಅತ್ತಾರ್ 2019ರಲ್ಲಿ ಎಸ್‌ಡಿಪಿಐಗೆ ಸೇರಿದ್ದ.

ತನಿಖಾ ಸಂಸ್ಥೆಗಳು ಈ ಹತ್ಯೆಯ ಆರೋಪಿಗಳಿಗೂ ಎಸ್‌ಡಿಪಿಐಗೂ ಇರುವ ಸಂಬಂಧವನ್ನು ಶೋಧಿಸಿದ್ದಾರೆ. ಎಸ್‌ಡಿಪಿಐಯು ತೀವ್ರವಾದಿ ಇಸ್ಲಾಮಿಕ್‌ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ರಾಜಕೀಯ ಘಟಕವಾಗಿದೆ.

ಕನ್ಹಯ್ಯ ಲಾಲ್‌ ಕತ್ತು ಸೀಳಿದ ಪ್ರಕರಣದಲ್ಲಿ ಫರ್ಹಾದ್ ಮೊಹಮ್ಮದ್ ಶೇಖ್ ಅಲಿಯಾಸ್‌ ಬಬ್ಲಾನನ್ನು ಏಳನೇ ಆರೋಪಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಜೂನ್ 20ರಂದು ನೂಪುರ್ ಶರ್ಮಾ ವಿರುದ್ಧದ ರ್ಯಾಲಿ ನಡೆದಾಗ ಈ ಸಂಚು ರೂಪಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಪ್ರಮುಖ ಆರೋಪಿ ರಿಯಾಜ್ ಅತ್ತಾರ್ ಕೊಲೆಗೆ ಬೇಕಾದ ಚಾಕು ತಯಾರಿಸಿದ್ದ, ಇವನು 2019ರಲ್ಲಿ ಎಸ್‌ಡಿಪಿಐಗೆ ಸೇರಿದ್ದ ಮತ್ತು ಸಕ್ರಿಯ ಸದಸ್ಯನಾಗಿದ್ದ ಎಂಬುದು ದೃಢಪಟ್ಟಿದೆ. ಆರೋಪಿ ಬಬ್ಲಾ ವಿಚಾರಣೆಯ ವೇಳೆ ತನ್ನ ಪಿಎಫ್‌ಐ-ಎಸ್‌ಡಿಪಿಐ ನಂಟನ್ನು ಸಹ ಒಪ್ಪಿಕೊಂಡಿದ್ದಾನೆ.

ಭದ್ರತಾ ಏಜೆನ್ಸಿಗಳು ಆರೋಪಿಗಳಿಂದ ವಶಪಡಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಾಧನಗಳ ಪರೀಕ್ಷೆಯು ಈ ಆರೋಪಿಗಳ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ದೃಢಪಡಿಸಲಿದೆ. ಆದರೆ ಅಮರಾವತಿ ಹತ್ಯೆಯಲ್ಲಿ ಪಿಎಫ್‌ಐ-ಎಸ್‌ಡಿಪಿಐ ನಂಟು ಸ್ಪಷ್ಟವಾಗಿ ಹೊರಬಂದಿದೆ.

PFI-SDPI ತಮ್ಮನ್ನು ಸಾಮಾಜಿಕ-ರಾಜಕೀಯ ಸಂಘಟನೆಗಳು ಎಂದು ಬಣ್ಣಿಸಿಕೊಳ್ಳುತ್ತವೆ. ಆದರೆ ಈ ಗುಂಪುಗಳು ಮಾಜಿ ಸಿಮಿ ಕಾರ್ಯಕರ್ತರನ್ನು ಹೊಂದಿವೆ. ಈ ಸಿಮಿ ಬೆಂಬಲಿಗರು ಅಲ್ಹೆ-ಹದೀಸ್ ಅಥವಾ ಸಲಫಿ ಸಿದ್ಧಾಂತದೊಂದಿಗೆ ಗುರುತಿಸಿಕೊಂಡವರು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಜಾಗತಿಕ ಭಯೋತ್ಪಾದಕ ಸಂಘಟನೆ ಕೂಡ ಅಹ್ಲೆ-ಹದೀಸ್‌ನ ಅನುಯಾಯಿ.

ಇದನ್ನೂ ಓದಿ: ಟೇಲರ್‌ ಶಿರಚ್ಛೇದಕ್ಕೆ ಬರೆಲ್ವಿ ಉಲೇಮಾ ಮುಸ್ಲಿಮರ ತೀವ್ರ ಖಂಡನೆ; ಫತ್ವಾ ಹೊರಡಿಸಿದ ಮುಖಂಡರು

ಕಳೆದ ದಶಕದಲ್ಲಿ ಕೇರಳ- ಕರ್ನಾಟಕ ಮೂಲದ ಸೂಫಿ ಬರೇಲ್ವಿ ಮತ್ತು ದೇವಬಂದಿ ಗುಂಪಿನ ಹಲವರನ್ನು ಆಯ್ಕೆ ಮಾಡಿ ತನ್ನ ಕೇಡರ್ ಅನ್ನು ವಿಸ್ತರಿಸಲು ಪಿಎಫ್‌ಐ ಪ್ರಯತ್ನಿಸಿತ್ತು. ಪೌರತ್ವ ತಿದ್ದುಪಡಿ ಕಾಯಿದೆ, ಕೃಷಿ ಕಾನೂನು ವಿರುದ್ಧ ಆಂದೋಲನಗಳ ಹೆಸರಿನಲ್ಲಿ ತೀವ್ರವಾದಿಗಳನ್ನು ಸಂಘಟಿಸಲು ಯತ್ನಿಸಿತ್ತು. ಇತ್ತೀಚೆಗೆ ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ ಅವರ ಕಾಳಿ ದೇವಿಯ ಕುರಿತ ಹೇಳಿಕೆಗೂ ಬೆಂಬಲ ನೀಡಿದೆ.

ಪೊಲೀಸ್‌ ವೈಫಲ್ಯ ಕೂಡ ಕಂಡುಬಂದಿದೆ. ಜೂನ್ 17-18ರಂದೇ ಕನ್ಹಯ್ಯ ಲಾಲ್‌ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದರೂ ಉದಯಪುರ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜೂನ್ 20ರ ರ್ಯಾಲಿಯ ನಂತರ, ಕನ್ಹಯ್ಯ ಲಾಲ್‌ಗೆ ಪಾತಕಿಗಳು ಪ್ರತಿದಿನ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಅದೇ ರೀತಿ, ಅಮರಾವತಿ ಪೊಲೀಸರು ಕೂಡ ಕೊಲೆಯಾದ ಕೂಡಲೇ ಇಬ್ಬರನ್ನು ಬಂಧಿಸಿದ್ದರೂ ಈ ಘೋರ ಅಪರಾಧವನ್ನು ದರೋಡೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.

ಇದನ್ನೂ ಓದಿ: Terror killing: ಉದಯಪುರ, ಅಮರಾವತಿ ಬಳಿಕ ಈಗ ಲಖನೌದ ಮಹಿಳೆಗೆ ಹತ್ಯೆ ಬೆದರಿಕೆ

Exit mobile version