Site icon Vistara News

UDR Case: ಟೆಕ್ಕಿ ಪತ್ನಿಯ ಅನುಮಾನಾಸ್ಪದ ಸಾವು

techie wife udr case

ಬೆಂಗಳೂರು: ರಾಜಧಾನಿಯ (bengaluru crime) ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ (woman self harming) ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತರು ಸಾಫ್ಟ್‌ವೇರ್‌ ಎಂಜಿನಿಯರ್‌ (Software engineer) ಪತ್ನಿಯಾಗಿದ್ದು, ಇದೊಂದು ಅಸಹಜ ಸಾವು (UDR Case) ಎಂದು ಮೃತಳ ತವರಿನವರು ಶಂಕಿಸಿದ್ದಾರೆ.

ಮಂಜುನಾಥ ನಗರದ ಸಂಧ್ಯಾ ಮೃತ ಮಹಿಳೆ. ನೆನ್ನೆ ರಾತ್ರಿ ಘಟನೆ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ ಮೃತ ದೇಹ ಪತ್ತೆಯಾಗಿದೆ. ಇವರಿಗೆ ಮದುವೆಯಾಗಿ 5 ವರ್ಷ ಆಗಿತ್ತು. ನಾಲ್ಕು ವರ್ಷದ ಗಂಡು ಮಗುವೂ ಇತ್ತು. ಅಳಿಯ ಜಯಪ್ರಕಾಶ್‌ ಮೈತುಂಬಾ ಸಾಲ ಮಾಡಿ ಅದನ್ನು ತೀರಿಸಲು ಕಿರುಕುಳ ನೀಡುತ್ತಿದ್ದ. ನನ್ನ ಮಗಳಿಗೆ ಈ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ತಂದೆ ಆಪಾದಿಸಿದ್ದಾರೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಂಗಿಯನ್ನು ಬೈಕ್‌ನಲ್ಲಿ ಸುತ್ತಾಡಿಸುತ್ತಿದ್ದವನನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ

ಬೆಳಗಾವಿ : ಬೆಳಗಾವಿಯಲ್ಲಿ (Belgavi News) ಹಾಡಹಗಲೇ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಯುವಕನ (Murder Case) ಕೊಲೆ ಮಾಡಲಾಗಿದೆ. ಬೆಳಗಾವಿ ನಗರದ ಮಹಾಂತೇಶ ನಗರದ ಬ್ರಿಡ್ಜ್‌ ಬಳಿ ಘಟನೆ ನಡೆದಿದೆ. ಗಾಂಧಿ ನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತಪಟ್ಟವನು. ಮುಜಮಿಲ್ ಸತ್ತಿಗೇರಿ ಕೊಲೆ ಆರೋಪಿಯಾಗಿದ್ದಾನೆ.

ಇದೇ ಬಡಾವಣೆಯ ಯುವತಿ ಜತೆಗೆ ಇಬ್ರಾಹಿಂ ಪ್ರೀತಿ -ಪ್ರೇಮ ಅಂತ ಓಡಾಡುತ್ತಿದ್ದ . ಗುರುವಾರ ತನ್ನ ಹುಡುಗಿ ಜತೆಗೆ ಇಬ್ರಾಹಿಂ ಬೈಕ್‌ನಲ್ಲಿ ಹೊರಟ್ಟಿದ್ದ. ಇದನ್ನು ನೋಡಿದ ಯುವತಿಯ ಸಹೋದರ ಮುಜಮಿಲ್ ಸತ್ತಿಗೇರಿ ಎಂಬಾತ ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದಾನೆ.

ಕೂಡಲೇ ಅಲ್ಲಿದ್ದ ಸ್ಥಳೀಯರು ಗಾಯಾಳು ಇಬ್ರಾಹಿಂನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ರಾಹಿಂ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.

ಚಾಮರಾಜನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಚಾಮರಾಜನಗರ ತಾಲ್ಲೋಕಿನ ಜ್ಯೋತಿಗೌಡನಪುರ ಗ್ರಾಮದ ಹೊರವಲಯದಲ್ಲಿ ಗ್ರಾಮದ ಬಸವನಕಟ್ಟೆ ದೇವಸ್ಥಾನದ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಅನುಮಾನ ಮೂಡಿದೆ. ಸ್ಥಳಕ್ಕೆ ರಾಮಸಮುದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜತೆಗೆ ಮೃತನ ಗುರುತು ಪತ್ತೆಗಾಗಿ, ಸ್ಥಳದಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

ದಾವಣಗೆರೆ: ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಿ (Murder case) ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ದಾವಣಗೆರೆ ತಾಲೂಕಿನ ಒಬಜ್ಜಿಹಳ್ಳಿಯ ಹೊರ ವಲಯದಲ್ಲಿ ಘಟನೆ ನಡೆದಿದೆ. ಸುದೀಪ್ (25) ಕೊಲೆಯಾದವನು.

ದಾವಣಗೆರೆ ನಗರದ ಬೂದಾಳ್ ರಸ್ತೆಯ ನಿವಾಸಿ ಸುದೀಪ್‌ನನ್ನು ಕಳೆದ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾಗಿರುವ ಸುದೀಪ್‌ ಕೂಡ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಸಿಪಿಐ ಕಿರಣ್ ಕುಮಾರ್, ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ರಾತ್ರಿ ವೇಳೆ ಗಲಾಟೆಯಾಗಿ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೊಲೆ ಕೇಸ್‌ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Exit mobile version