ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಾಲಕಿಯನ್ನು ರೇಪ್ ಮಾಡಿ, ಅರೆನಗ್ನ ಸ್ಥಿತಿಯಲ್ಲಿ ಬೀದಿಯಲ್ಲಿ ಬಿಟ್ಟ ಭೀಭತ್ಸ ಘಟನೆ (Ujjain Horror) ನಡೆದ ಒಂದು ತಿಂಗಳಿನಲ್ಲಿಯೇ ಅಂಥದೇ ಮತ್ತೊಂದು ಉಜ್ಜಿಯಿನಿಯಲ್ಲಿ ನಡೆದಿದೆ. 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Pocso Case) ಎಸಗಲಾಗಿದೆ.
ಉಜ್ಜಯಿನಿಯ ಝಾರ್ದಾ ತಹಸಿಲ್‌ನಲ್ಲಿ ಮಂಗಳವಾರ ಅಕ್ಟೋಬರ್ 31ರಂದು 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ. ರೇಪ್ ಆರೋಪಿಯು ತನ್ನ ಮನೆಯೊಳಗಿದ್ದ ಶೆಲ್ಫ್‌ನಿಂದ ಕೆಲವು ವಸ್ತುಗಳನ್ನು ತೆಗೆದುಕೊಡಲು ಸಹಾಯ ಮಾಡುವ ನೆಪದಲ್ಲಿ ಅಪ್ರಾಪ್ತಳನ್ನು ಮನೆಯೊಳಗೆ ಕರೆದಿದ್ದಾನೆ. ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ.
ನಂತರ ಆಕೆಯನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಹೊರಬಿಟ್ಟಿದ್ದಾನೆ. ಆಕೆ ಅಳುತ್ತಾ ಕಿರುಚುತ್ತಾ ತನ್ನ ಮನೆಗೆ ತಲುಪಿದಳು. ಅವಳ ತಾಯಿ ಈಕೆಯ ಸ್ಥಿತಿಯನ್ನು ಕಂಡು ಭಯಭೀತರಾದರು. ವಿಚಾರಿಸಿದಾಗ ಬಾಲಕಿ ತನ್ನ ಮೇಲೆ ನಡೆದ ಕೃತ್ಯವನ್ನು ವಿವರಿಸಿದ್ದಾಳೆ. ಬಾಲಕಿ ಸಹಿತ ಕುಟುಂಬ ಜಾರ್ಡಾ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಕೃತ್ಯ ನಡೆದ ದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅದೇ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿದ್ದರು. ಎಸ್‌ಡಿಒಪಿ ಮತ್ತು ಪೊಲೀಸ್ ಠಾಣೆ ಪ್ರಭಾರಿಗಳಿಗೆ ಮಾಹಿತಿ ಬಂದ ತಕ್ಷಣ ಅವರು ಮುಖ್ಯಮಂತ್ರಿಗಳ ಸಭೆಯಿಂದ ನಿರ್ಗಮಿಸಿದ್ದಾರೆ. ಅಪ್ರಾಪ್ತೆ ಹಾಗೂ ಆಕೆಯ ಪೋಷಕರ ವಿಡಿಯೋ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ ಎಂದು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿತೀಶ್ ಭಾರ್ಗವ ತಿಳಿಸಿದ್ದಾರೆ. ಆರೋಪಿಯ ಹುಡುಕಾಟ ನಡೆಸಿ ಬುಧವಾರ ತಡರಾತ್ರಿ ಆತನ ಸ್ನೇಹಿತನ ಮನೆಯಿಂದ ಬಂಧಿಸಲಾಗಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದಾಗ ತಾನು ಕುಡಿದಿದ್ದೆ ಎಂದು ಹೇಳಿದ್ದಾನೆ. ವಿಚಾರಣೆ ನಂತರ ಆರೋಪಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಒಂದು ತಿಂಗಳ ಹಿಂದೆ ಸತ್ನಾದಲ್ಲಿ ಇಂಥದೇ ಇನ್ನೊಂದು ಬರ್ಬರ ಕೃತ್ಯ ನಡೆದಿತ್ತು. 12 ವರ್ಷದ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾದ ಬಳಿಕ ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ ಅರೆ ಬೆತ್ತಲೆಯಾಗಿ ರಕ್ತ ಸ್ರವಿಸುತ್ತ ಬಟ್ಟೆ ಹಾಗೂ ಆಶ್ರಯ ಬೇಡಿ ಮನೆಯಿಂದ ಮನೆಗೆ ಓಡಾಡಿದ್ದಳು. ಇದರ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ಆರೋಪಿ ಭರತ್ ಸೋನಿ ಎಂಬಾತನನ್ನು ಬಂಧಿಸಲಾಗಿದೆ. ಆಕೆ ಸುಮಾರು 8 ಕಿಮೀನಷ್ಟ ದೂರ ಅಸಹಾಯಕಳಾಗಿ ನಡೆದಿದ್ದಳು.
ಇದನ್ನೂ ಓದಿ: Ujjain Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; 3-4 ದಿನ ನಿದ್ರಿಸದೆ ತನಿಖೆ ನಡೆಸಿ ದಕ್ಷತೆ ಮೆರೆದ ಪೊಲೀಸರು