Site icon Vistara News

Muslim Couple: ಹಿಂದು ಯುವತಿ ಜತೆ ಮುಸ್ಲಿಂ ಯುವಕ ಪರಾರಿ; ಆತನ ತಂದೆ-ತಾಯಿಯನ್ನು ಬಡಿದು ಕೊಂದ ಜನ

Uttar Pradesh Couple Death

Uttar Pradesh Muslim Couple Beaten To Death After Son Elopes With Hindu Girl

ಲಖನೌ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ (Sitapur District) ಮುಸ್ಲಿಂ ಯುವಕನೊಬ್ಬ ಹಿಂದು ಯುವತಿ ಜತೆ ಓಡಿ ಹೋಗಿದ್ದಕ್ಕೆ ಆ ಯುವಕನ ತಂದೆ-ತಾಯಿಯ (Muslim Couple) ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ. ಮುಸ್ಲಿಂ ಯುವಕ ಮಾಡಿದ ತಪ್ಪಿಗಾಗಿ ಪಕ್ಕದ ಮನೆಯವರು ಆತನ ತಂದೆ-ತಾಯಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸೀತಾಪುರ ಜಿಲ್ಲೆಯ ರಜೇಯ್‌ಪುರ ಗ್ರಾಮದಲ್ಲಿ ಶುಕ್ರವಾರ (ಆಗಸ್ಟ್‌ 18) ಅಬ್ಬಾಸ್‌ ಹಾಗೂ ಅವರ ಪತ್ನಿ ಕಮರುಲ್‌ ನಿಶಾ ಅವರ ಮೇಲೆ ಉದ್ರಿಕ್ತ ಜನ ದಾಳಿ ನಡೆಸಿದ್ದಾರೆ. ರಾಡ್‌ ಹಾಗೂ ದೊಣ್ಣೆಗಳಿಂದ ಇಬ್ಬರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರೇಮ ಪ್ರಕರಣವೇ ಹತ್ಯೆಗೆ ಕಾರಣ

ಅಬ್ಬಾಸ್‌ ಹಾಗೂ ಕಮರುಲ್‌ ನಿಶಾ ಅವರ ಪುತ್ರನು ಪಕ್ಕದ ಮನೆಯ ರಾಮ್‌ಪಾಲ್‌ ಎಂಬುವರ ಪುತ್ರಿ ರೂಬಿಯನ್ನು ಪ್ರೀತಿಸುತ್ತಿದ್ದ. 2020ರಲ್ಲಿ ಯುವಕ ಹಾಗೂ ರೂಬಿಯು ಓಡಿ ಹೋಗಿದ್ದರು. ಇದೇ ವೇಳೆ ರೂಬಿಯ ಕುಟುಂಬಸ್ಥರು ಯುವಕನ ವಿರುದ್ಧ ಅಪಹರಣ ಸೇರಿ ಹಲವು ಪ್ರಕರಣ ದಾಖಲಿಸಿದ್ದರು. ಅದರಂತೆ, ಜೈಲಿಗೆ ಹೋಗಿದ್ದ ಯುವಕ, ಜೈಲಿನಿಂದ ಹೊರಬಂದ ಬಳಿಕ ಮತ್ತೆ ರೂಬಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.

ರೂಬಿಯನ್ನು ಕರೆದುಕೊಂಡು ಹೋಗಿ ಮದುವೆಯಾದ ಬಳಿಕವೂ ರೂಬಿಯ ಪೋಷಕರು ಆತನ ವಿರುದ್ಧ ದೂರು ನೀಡಿದ್ದರು. ಇದಾದ ನಂತರವೂ ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಯುವಕನು ಜೈಲಿನಿಂದ ಬಿಡುಗಡೆಯಾಗಿದ್ದ. ಇದೇ ಸಿಟ್ಟಿನಲ್ಲಿ ರೂಬಿಯ ಕಡೆಯವರು ಅವರ ಮನೆಗೆ ದಾಳಿ ಮಾಡಿದ್ದಾರೆ. ಆಗ ಯುವಕನ ಪೋಷಕರು ಮಾತ್ರ ಸಿಕ್ಕ ಕಾರಣ ಅವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Exit mobile version