Site icon Vistara News

‘ಒಂದ್ ಕಪ್‌ ಟೀ ಕೊಡೆ’ ಎಂದಿದ್ದಕ್ಕೆ ಗಂಡನ ಕಣ್ಣಿಗೆ ಕತ್ತರಿ ಚುಚ್ಚಿದ ಪತ್ನಿ; ಕೇಳೋ ಮುನ್ನ ಹುಷಾರು!

Wife Serving Tea

Uttar Pradesh woman stabs husband in eye with scissors after he asks for tea

ಲಖನೌ: ‘ಒಂದ್‌ ಕಪ್‌ ಟೀ ಕೊಡೇ’… ಇದು ಬಹುತೇಕ ಮನೆಗಳಲ್ಲಿ ಗಂಡನು ಹೆಂಡತಿಗೆ ಚಹಾ ಕೇಳುವ ಪರಿ. ಹೀಗೆ, ಹೆಂಡತಿ ಎಂಬ ಸಲುಗೆಯಿಂದ ಉತ್ತರ ಪ್ರದೇಶದಲ್ಲಿ (Uttar Pradesh) ವ್ಯಕ್ತಿಯೊಬ್ಬ ಒಂದ್‌ ಕಪ್‌ ಟೀ ಕೊಡೇ (ಹಿಂದಿಯಲ್ಲಿ) ಎಂದು ಕೇಳಿದ್ದಕ್ಕೆ ಹೆಂಡತಿಯು ಆತನ ಕಣ್ಣಿಗೇ ಕತ್ತರಿ ಚುಚ್ಚಿದ್ದಾಳೆ. ಕೆಲಸ ಮಾಡಿ ಬಂದ ಗಂಡನು ಹೆಂಡತಿಗೆ ಒಂದು ಕಪ್‌ ಚಹಾ (Tea) ಕೇಳಿದ್ದಾನೆ. ಯಾವುದೋ ಕೋಪದಲ್ಲಿದ್ದ ಹೆಂಡತಿಯು ಕತ್ತರಿಯಿಂದ ಆತನ ಕಣ್ಣಿಗೆ ಕತ್ತರಿ ಚುಚ್ಚಿ ಹಲ್ಲೆ ನಡೆಸಿದ್ದಾಳೆ. ರಕ್ತಸ್ರಾವ ಆಗುತ್ತಿದ್ದರೂ ಮನೆಯಿಂದ ಪರಾರಿಯಾಗಿದ್ದಾಳೆ.

ಉತ್ತರ ಪ್ರದೇಶದ ಬಾಗ್ಪುರ ಜಿಲ್ಲೆಯ ಅಂಕಿತ್‌ ಎಂಬ ವ್ಯಕ್ತಿಯೇ ಹೆಂಡತಿಯಿಂದ ಹಲ್ಲೆಗೊಳಗಾಗಿದ್ದಾನೆ. ಮೂರು ವರ್ಷದ ಹಿಂದೆ ಇವರು ಯುವತಿಯೊಬ್ಬಳನ್ನು ಮದುವೆಯಾಗಿದ್ದಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಜಗಳಗಳು ಸಾಮಾನ್ಯವಾಗಿದ್ದವು. ಇಬ್ಬರ ಮಧ್ಯೆ ವಾಗ್ವಾದಗಳು ನಡೆಯುತ್ತಿದ್ದವು. ಇಷ್ಟಾದರೂ ವ್ಯಕ್ತಿಯು ಅನುಸರಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಆದರೆ, ಆತ ಯಾವಾಗ ಚಹಾ ಕೇಳಿದನೋ, ಕೋಪದಲ್ಲಿದ್ದ ಮಹಿಳೆಯು ಕಣ್ಣಿಗೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಬರುತ್ತಾರೆ ಎಂದು ಮನೆಯಿಂದಲೇ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

3 ದಿನದ ಹಿಂದಷ್ಟೇ ಕೇಸ್‌ ದಾಖಲಿಸಿದ್ದ ಪತ್ನಿ

ಮನೆ, ಕುಟುಂಬದ ವಿಚಾರಕ್ಕೆ ಅಂಕಿತ್‌ ಹಾಗೂ ಆತನ ಪತ್ನಿ ಮಧ್ಯೆ ಜಗಳಗಳು ನಡೆಯುತ್ತಲೇ ಇದ್ದವು ಎಂದು ಮೂಲಗಳು ತಿಳಿಸಿವೆ. “ನನ್ನ ಪತ್ನಿ ಹಾಗೂ ಆತನ ಕುಟುಂಬಸ್ಥರು ಹಲ್ಲೆ ನಡೆಸುತ್ತಿದ್ದಾರೆ, ಕಿರುಕುಳ ನಡೆಸುತ್ತಿದ್ದಾರೆ” ಎಂದು ಕತ್ತರಿಯಿಂದ ಹಲ್ಲೆ ನಡೆಸುವ ಘಟನೆಯ ಮೂರು ದಿನಗಳ ಹಿಂದೆ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಳು ಎನ್ನಲಾಗಿದೆ. ಆದಾಗ್ಯೂ, ಇಬ್ಬರ ಮಧ್ಯೆ ಜಗಳ ನಡೆಯಲು ನಿಖರ ಕಾರಣ ಏನು ಎಂಬುದು ಇದುವರೆಗೆ ಗೊತ್ತಾಗಿಲ್ಲ.

ಇದನ್ನೂ ಓದಿ: Viral News: ತಮ್ಮನಿಗೆ ಕಿಡ್ನಿ ಕೊಟ್ಟ ಹೆಂಡತಿ, ಹೆಂಡತಿಗೆ ತಲಾಖ್ ಕೊಟ್ಟ ಗಂಡ!

ಪತ್ನಿಯು ಕತ್ತರಿ ಚುಚ್ಚಿದ ಕೂಡಲೇ ಪತಿ ಜೋರಾಗಿ ಕೂಗಿದ್ದಾನೆ. ಕೋಣೆಯಲ್ಲಿದ್ದ ಕುಟಂಬಸ್ಥರು ಕೂಡಲೇ ಹೊರಗೆ ಬಂದು ನೋಡಿದ್ದಾರೆ. ಆತನ ಕಣ್ಣಿನಿಂದ ರಕ್ತ ಸುರಿಯುತ್ತಿದ್ದನ್ನು ಕಂಡು ಕೂಡಲೇ ವೈದ್ಯರು ಹಾಗೂ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಂಕಿತ್‌ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಮೀರತ್‌ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಪರಾರಿಯಾಗಿರುವ ಮಹಿಳೆಯ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version