ನವದೆಹಲಿ: ದೇಶದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಷೇಧವಾಗಿದೆ. ಬಾಲಕ ಅಥವಾ ಬಾಲಕಿಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು, ಅವರಿಂದ ದುಡಿಸಿಕೊಳ್ಳುವುದು ಅಪರಾಧವಾಗಿದೆ. ಆದರೂ, ದೆಹಲಿಯಲ್ಲಿ 10 ವರ್ಷದ ಬಾಲಕಿಯನ್ನು ಮನೆಯ ಕೆಲಸಕ್ಕೆ ಇಟ್ಟುಕೊಂಡ ಮಹಿಳಾ ಪೈಲಟ್ ಹಾಗೂ ಆಕೆಯ ಪತಿಯು ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾರೆ. ಮಹಿಳಾ ಪೈಲಟ್ ಹಾಗೂ ಆಕೆಯ ಪತಿಯ ನಿಜಬಣ್ಣ ಬಯಲಾದ ಬಳಿಕ ಸಾರ್ವಜನಿಕರು ಧರ್ಮದೇಟು ಕೊಟ್ಟಿದ್ದಾರೆ. ಈ ವಿಡಿಯೊ (Viral Video) ಈಗ ವೈರಲ್ ಆಗಿದೆ.
ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿರುವ ಮಹಿಳೆಯು ಸಮವಸ್ತ್ರದಲ್ಲಿದ್ದಾರೆ. ಜನ ಅವರ ಮನೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸುತ್ತಲೇ ಪೈಲಟ್ ಹಾಗೂ ಆಕೆಯ ಪತಿಯು ಜನರಿಗೆ ಕ್ಷಮೆ ಕೇಳಿದ್ದಾರೆ. ಸಾರಿ, ಸಾರಿ… ಎಂದು ಅವರು ಹೇಳುತ್ತಿದ್ದರೂ, ಆಕ್ರೋಶಗೊಂಡಿದ್ದ ಜನ ಇಬ್ಬರಿಗೂ ಧರ್ಮದೇಟು ನೀಡಿದ್ದಾರೆ. ಮಾಡಿದ ತಪ್ಪಿನ ಅರಿವಾಗಿ ದಂಪತಿಯು ಎಷ್ಟೇ ಬೇಡಿಕೊಂಡರೂ ಜನ ಮನಬಂದಂತೆ ಥಳಿಸಿದ್ದಾರೆ.
ದಂಪತಿಗೆ ಧರ್ಮದೇಟು
#WATCH | A woman pilot and her husband, also an airline staff, were thrashed by a mob in Delhi's Dwarka for allegedly employing a 10-year-old girl as a domestic help and torturing her.
— ANI (@ANI) July 19, 2023
The girl has been medically examined. Case registered u/s 323,324,342 IPC and Child Labour… pic.twitter.com/qlpH0HuO0z
ದಂಪತಿಯ ಕೃತ್ಯ ಅಂಥಾದ್ದು
ದಂಪತಿಯ ಮೇಲೆ ಜನ ಅಷ್ಟೊಂದು ಆಕ್ರೋಶ ವ್ಯಕ್ತಪಡಿಸಲು, ಗೂಸಾ ಕೊಡಲು ಕಾರಣ ಹಾಗಿದೆ. ದಂಪತಿಯು ಪಿಎಸ್ ದ್ವಾರಕಾ ಪ್ರದೇಶದಲ್ಲಿ ವಾಸವಿದ್ದು, ಎರಡು ತಿಂಗಳ ಹಿಂದೆ 10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಬಾಲಕಿಗೆ ಕೆಲಸ ಮಾತ್ರ ವಹಿಸದೆ ಆಕೆ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ. ಬಾಲಕಿಯ ಕಣ್ಣಿಗೂ ಪೆಟ್ಟಾಗುವಂತೆ ದಂಪತಿ ಹಲ್ಲೆ ನಡೆಸಿದ್ದಾರೆ. ಬಾಲಕಿಯ ಮುಖ ಸೇರಿ ಆಕೆಯ ಮೈತುಂಬ ಗಾಯಗಳಾಗಿವೆ.
ಇದನ್ನೂ ಓದಿ: Mukesh Ambani : ಅಂಬಾನಿ ಮನೆಯ ಗ್ಯಾರೇಜ್ನ ವಿಡಿಯೊ ವೈರಲ್, ಎಷ್ಟೊಂದು ಕಾರುಗಳಿವೆ ನೋಡಿ
ಸತತ ಎರಡು ತಿಂಗಳಿಂದ ಬಾಲಕಿಗೆ ಕಿರುಕುಳ ನೀಡಿದ ಕುರಿತು ಆಕೆಯ ಸಂಬಂಧಿಕರಿಗೆ ಗೊತ್ತಾಗಿದೆ. ಇದರಿಂದ ಕುಪಿತಗೊಂಡ ಸಂಬಂಧಿಕರು ಹಾಗೂ ಸಾರ್ವಜನಿಕರು ದಂಪತಿಗೆ ಧರ್ಮದೇಟು ಕೊಟ್ಟಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ದಂಪತಿಯನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯು ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿದ್ದರೆ, ಮತ್ತೊಂದು ವಿಮಾನಯಾನ ಸಂಸ್ಥೆಯಲ್ಲಿ ಪತಿಯು ಗ್ರೌಂಡ್ ಸ್ಟಾಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.