ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಮೊಬೈಲ್ ನಂಬರ್‌ಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಪ್ರಾಣ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ಈ ಸಂಬಂಧ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೊಲೆ ಪಾತಕಿ ಕೈದಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತನಿಖೆಗೆ ಮಹಾರಾಷ್ಟ್ರ ಪೊಲೀಸರೂ ಮುಂದಾಗಿದ್ದು, ಜಂಟಿಯಾಗಿ ವಿಚಾರಣೆ ಪ್ರಾರಂಭವಾಗಿದೆ. ಜೈಲಿನೊಳಗೆ ಮೊಬೈಲ್ ಫೋನ್ ತಲುಪಿದ್ದು ಹೇಗೆ ಎಂಬ ಬಗ್ಗೆಯೂ ತೀವ್ರ ತನಿಖೆ ನಡೆಯುತ್ತಿದೆ. ಈ ತನಿಖೆಯೆ ಆಚೆಗೂ ನಾವೆಲ್ಲ ಚಿಂತಿಸಬೇಕಾದ ಅನೇಕ ಸಂಗತಿಗಳಿವೆ. ಅಪರಾಧ ಮಾಡಿದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಸುಧಾರಣೆಯಾಗಲಿ ಎಂಬ ಕಾರಣಕ್ಕೆ ಕೋರ್ಟುಗಳು ಅಪರಾಧಿಗಳಿಗೆ ಶಿಕ್ಷೆ ನೀಡಿ, ಜೈಲಿಗೆ ಕಳುಹಿಸುತ್ತವೆ. ಈಗ ಅದೇ ಜೈಲುಗಳು ಅಪರಾಧದ ಕೇಂದ್ರಗಳಾಗುತ್ತಿರುವುದು ದುರದೃಷ್ಟಕರ. ಬಂದೀಖಾನೆಗಳು ಕೈದಿಗಳ ಅಟಾಟೋಪದ ತಾಣವಾಗುತ್ತಿರುವುದು ಆತಂಕಕಾರಿಯಾಗಿದೆ.
ಆಧುನಿಕ ನ್ಯಾಯ ವ್ಯವಸ್ಥೆಯಲ್ಲಿ ಕಾರಾಗೃಹಗಳು ಸುಧಾರಣೆಯ ತಾಣಗಳು. ಆದರೆ, ಆಗಾಗ ಬಯಲಾಗುತ್ತಿರುವ ಜೈಲು ಕರ್ಮಕಾಂಡಗಳು ಮಾತ್ರ ಬೇರಯದ್ದೇ ಕತೆ ಹೇಳುತ್ತವೆ. ಜೈಲುಗಳು ಮುಖ್ಯ ಸಮಾಜದಿಂದ ಬೇರ್ಪಟ್ಟು ಮತ್ತೊಂದು ಭೂಗತ ಪ್ರಪಂಚವೇ ಆಗಿ ಹೋಗಿದೆ. ಅಪರಾಧಿಯು ತನ್ನ ಶಿಕ್ಷೆಯನ್ನು ಅನುಭವಿಸಬೇಕಾದ ಜೈಲುಗಳು ಜೈಲುಗಳಾಗಿ ಉಳಿದಿಲ್ಲ, ಅಪರಾಧಿಯ ನಡವಳಿಕೆಯ ಸುಧಾರಣೆಯ ಕೇಂದ್ರಗಳಾಗಬೇಕಿದ್ದ ತಾಣಗಳು, ಅಪರಾಧಿಯ ಸುರಕ್ಷೆಯ ತಾಣಗಳಾಗುತ್ತಿವೆ. ಸಮಾಜದಲ್ಲಿ ನಡೆಯುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಅಪರಾಧಗಳು, ಕಳ್ಳ ದಂಧಗೆಳು, ಮಾದಕ ವ್ಯಸನದ ಚಟುವಟಿಕೆಗಳು ಅಲ್ಲಿ ನಡೆಯುತ್ತಿವೆ. ಅಷ್ಟೇ ಅಲ್ಲ, ಹೊರ ಪ್ರಪಂಚದ ಅನೇಕ ಅಪರಾಧಗಳು ಜೈಲಿನಿಂದಲೇ ನಡೆಯುತ್ತವೆ!
ಕೇಂದ್ರ ಸಚಿವರಿಗೆ ಧಮ್ಕಿ ಕರೆ ಮಾಡಿದ ವ್ಯಕ್ತಿ ಇರುವ ಹಿಂಡಲಗಾ ಜೈಲು ಈ ಹಿಂದೆ ಅನೇಕ ಬಾರಿ ಇಂಥದ್ದೇ ಬೇಡವಾದ ಕಾರಣಗಳಿಗೆ ಸುದ್ದಿಯಾಗಿದೆ. ದಾಳಿ ನಡೆಸಿದ ಪ್ರತಿ ಬಾರಿಯೂ ಈ ಜೈಲಿನಲ್ಲಿ ಕೆಜಿಗಟ್ಟಲೇ ಗಾಂಜಾ, ಮಾದಕ ವಸ್ತುಗಳು, ಸಿಗರೇಟ್, ಮದ್ಯ, ಹರಿತ ಆಯುಧಗಳು ಪತ್ತೆಯಾಗಿವೆ. ಇದು ಕೇವಲ ಹಿಂಡಲಗಾ ಜೈಲಿನ ಕತೆ ಮಾತ್ರವಲ್ಲ, ಬೆಂಗಳೂರಿನ ಕೇಂದ್ರ ಕಾರಾಗೃಹದ ಮೇಲೆ 2021 ನವೆಂಬರ್‌ನಲ್ಲಿ ಸಿಸಿಬಿ ದಾಳಿ ನಡೆಸಿತ್ತು. ಆಗಲೂ ಗಾಂಜಾ, ಮೊಬೈಲ್ ಫೋನುಗಳು ಸೇರಿ ಇತರ ಅಕ್ರಮ ವಸ್ತುಗಳು ಪತ್ತೆಯಾಗಿದ್ದವು. ಜೈಲಿನಲ್ಲಿ ಕುಳಿತುಕೊಂಡೇ ಕೈದಿಗಳ ಹೊರ ಜಗತ್ತಿನಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದದ್ದು ಕಂಡು ಬಂದಿತ್ತು! ಎರಡು ವರ್ಷಗಳ ಹಿಂದೆ ರಾಮನಗರ ಕೇಂದ್ರ ಜೈಲು ಮೇಲೆ ಪೊಲೀಸರು ದಾಳಿ ನಡೆಸಿದಾಗ, ಸಾಕಷ್ಟು ಪ್ರಮಾಣದಲ್ಲಿ ನಗದು, ಮೊಬೈಲ್, ಸಿಮ್ ಕಾರ್ಡ್, ಚಾಕು ಸೇರಿದಂತೆ ಅನೇಕ ವಸ್ತುಗಳು ಪತ್ತೆಯಾಗಿದ್ದವು. ಶಿವಮೊಗ್ಗದ ಹಿಂದೂ ಕಾರ್ಯಕರ್ತನ ಹತ್ಯೆಯ ಆರೋಪಿಗಳು ಜೈಲಿನಲ್ಲಿ ಮೋಜು ಮಸ್ತಿ ಮಾಡುತ್ತಿರುವ ಫೋಟೊಗಳು ಸಂಚಲನವನ್ನೇ ಸೃಷ್ಟಿಸಿದ್ದವು. ಇಂಥ ಅರಾಜಕತೆ ಪರಿಸ್ಥಿತಿ ರಾಜ್ಯದ ಹಲವು ಜಿಲ್ಲಾ ಕೇಂದ್ರ ಕಾರಾಗೃಹಗಳಲ್ಲಿದೆ. ಬಹುತೇಕ ಜೈಲುಗಳು ಅಕ್ರಮದ ತಾಣಗಳಾಗುತ್ತಿವೆ.
ಗಲ್ಲು ಶಿಕ್ಷೆಗೆ ಗುರಿಯಾದ ಪಾತಕಿಯೊಬ್ಬನ ಕೈಗೆ ಜೈಲಿನೊಳಗೆ ಮೊಬೈಲ್ ಸಿಗುತ್ತದೆ, ಆತ ಕೇಂದ್ರದ ಪ್ರಭಾವಿ ಸಚಿವರಿಗೇ ಧಮಕಿ ಹಾಕುತ್ತಾನೆಂದರೆ ನಮ್ಮ ಜೈಲುಗಳು ಯಾವ ಮಟ್ಟಕ್ಕೆ ಇಳಿದಿವೆ ಎಂಬುದು ಅರ್ಥವಾಗುತ್ತದೆ. ಜೈಲು ಅಧಿಕಾರಿಗಳು, ಕೆಳ ಹಂತದ ಸಿಬ್ಬಂದಿ ಮತ್ತು ಪ್ರಭಾವಿಗಳ ಬೆಂಬಲ ಇಲ್ಲದೇ ಜೈಲಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಸಾಧ್ಯವೇ ಇಲ್ಲ. ಹಾಗಾಗಿ, ಈ ಕೃತ್ಯದಲ್ಲಿ ಕೈದಿಗಳು ಎಷ್ಟು ಭಾಗಿಯಾಗಿದ್ದಾರೋ ಅಷ್ಟೇ ಪ್ರಮಾಣದ ಅಪರಾಧವು ಅಧಿಕಾರಿಗಳದ್ದೂ ಇದ್ದೇ ಇರುತ್ತದೆ. ಹಾಗಾಗಿ, ಜೈಲು ಶುದ್ಧೀಕರಣಕೈಗೊಳ್ಳುವ ತುರ್ತು ಅಗತ್ಯ ಈಗ ಎದುರಾಗಿದೆ.
ಪ್ರತಿ ಬಾರಿಯೂ ಜೈಲುಗಳ ಮೇಲೆ ದಾಳಿ ನಡೆದಾಗ ಒಂದಿಷ್ಟು ಅಕ್ರಮಗಳು, ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ಆ ಬಳಿಕ ಏನಾಯಿತು ಎಂಬುದು ಗೊತ್ತೇ ಆಗುವುದಿಲ್ಲ. ಆ ಜೈಲುಗಳು ಜೈಲು ಮ್ಯಾನುವಲ್ ಪ್ರಕಾರ ನಡೆಯುತ್ತಿವೆಯೇ, ಅಕ್ರಮಗಳ ಗೂಡಾಗಿವೆಯೇ ಎಂಬುದು ಮತ್ತೊಮ್ಮೆ ದಾಳಿ ನಡೆದಾಗಲೇ ಹೊರ ಜಗತ್ತಿಗೆ ಗೊತ್ತಾಗುತ್ತದೆ. ಇದಕ್ಕೆಲ್ಲ ಪೂರ್ಣ ವಿರಾಮ ಹಾಕುವ ಕಾಲ ಈಗ ಎದುರಾಗಿದೆ. ಕೇಂದ್ರ ಸಚಿವ ಗಡ್ಕರಿ ಅವರಿಗೆ ಹಾಕಿದ ಧಮ್ಕಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಡೀ ಜೈಲು ವ್ಯವಸ್ಥೆಯನ್ನು ಸರಿ ದಾರಿಗೆ ತರುವ ಪ್ರಯತ್ನ ರಾಜ್ಯ ಸರ್ಕಾರವು ಮಾಡಬೇಕು. ಈ ವಿಷಯದಲ್ಲಿ ವಿಳಂಬ ಸಲ್ಲದು. ಹಾಗೆಯೇ, ಯಾವುದೇ ಪ್ರಭಾವಿಗಳು, ಭೂಗತ ದೊರೆಗಳ ಕಾರುಬಾರು ನಡೆಯದಂತೆ ನೋಡಿಕೊಳ್ಳಬೇಕು. ಅಗತ್ಯವಾದರೆ, ಕಾನೂನಿಗೆ ತಿದ್ದಪಡಿಗಳನ್ನು ತಂದು, ಮತ್ತಷ್ಟು ಕಟ್ಟುನಿಟ್ಟು ಕ್ರಮಗಳನ್ನು ಕೈಗೊಳ್ಳಲೇಬೇಕು. ಇಲ್ಲದಿದ್ದರೆ, ಜೈಲುಗಳೇ ಶಾಶ್ವತವಾಗಿ ಅಪರಾಧ ಸೃಷ್ಟಿಯ ಕೇಂದ್ರಗಳಾಗಿ ಬಿಡುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಸರ್ಕಾರ ಮದ್ಯ ಸೇವನೆ ವಯಸ್ಸಿನ ಮಿತಿ ಇಳಿಸಲು ಹೊರಟಿದ್ದು ಅನಾಹುತಕಾರಿ