ಬೆಂಗಳೂರು: ಮತದಾರರ ದತ್ತಾಂಶಗಳನ್ನು (Voter Data) ಅಕ್ರಮವಾಗಿ ಸಂಗ್ರಹಿಸಿರುವ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಲೋಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಲೋಕೇಶ್, ತಲೆಮರೆಸಿಕೊಂಡಿದ್ದ.
ಚುನಾವಣಾ ಗುರುತಿನ ಚೀಟಿಯನ್ನು ಅಕ್ರಮವಾಗಿ ಇರಿಸಿಕೊಂಡಿದ್ದರ ಕುರಿತು ಬಿಬಿಎಂಪಿ ವತಿಯಿಂದ ಕಾಡುಗೋಡಿಯಲ್ಲಿ ದಾಖಲಾಗಿದ್ದ ದೂರಿನಲ್ಲೂ ಲೋಕೇಶ್ ಹೆಸರು ಕೇಳಿಬಂದಿತ್ತು. ಈತನ ಹೆಸರಿನಲ್ಲಿ ಚುನಾವಣಾ ಆಯೋಗದ ಗುರುತಿನ ಚೀಟಿ ಪತ್ತೆಯಾಗಿತ್ತು.
ಲೋಕೇಶ್‌ನನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು ಇದೀಗ ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದು, ಪ್ರಕರಣ ಸಂಬಂಧ ಮತ್ತೋರ್ವನನ್ನು ಬಂಧಿಸಿದ್ದೇವೆ. ಕಾಡುಗೋಡಿ ಮತ್ತು ಹಲಸೂರು ಗೇಟ್‌ನಲ್ಲಿ ದಾಖಲಾದ ಎರಡೂ ಎಫ್‌ಐಆರ್‌ನಲ್ಲಿ ಈತನ ಹೆಸರು ಉಲ್ಲೇಖ ಆಗಿತ್ತು. ಆತನನ್ನು ಬಂಧಿಸಿ ಒಂದು ರೌಂಡ್ ವಿಚಾರಣೆ ಮಾಡಲಾಗಿದೆ. ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ. ಈತ ಮುಖ್ಯ ಆರೋಪಿ ರವಿಕುಮಾರ್ ಆಪ್ತನಾಗಿದ್ದ. ಸದ್ಯ ಹೆಚ್ಚಿನ ತನಿಖೆ ಮುಂದುವರೆಸಲಾಗುತ್ತಿದೆ ಎಂದಿದ್ದಾರೆ.
ಈಗಾಗಲೆ ರವಿಕುಮಾರ್ ಸೇರಿ ಐವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಿನೇದಿನೆ ಪ್ರಕರಣ ಗಂಭೀರತೆ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಮುಖಂಡರಿಗೂ ಮುಳುವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Voter Data | ಸರ್ಕಾರದ ವಿರುದ್ಧ ಕಾಂಗ್ರೆಸ್ ಜತೆಗೆ ಆಪ್, ಎಸ್‌ಡಿಪಿಐನಿಂದಲೂ ವಾಗ್ದಾಳಿ; ಚುನಾವಣಾ ಆಯೋಗಕ್ಕೆ ದೂರು