ಕೋಲ್ಕೊತಾ: ಮದುವೆಯಾದ ಹೊಸತರಲ್ಲಿ ಹನಿಮೂನ್‌ಗೆ ತೆರಳಬೇಕು, ಇಬ್ಬರೇ ಪ್ರವಾಸಕ್ಕೆ ಹೋಗಬೇಕು ಎಂಬ ಆಸೆ ಇರುತ್ತದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಮದುವೆಯಾಗಿ ಹಲವು ವರ್ಷ ಕಳೆದು, ಇಬ್ಬರು ಮಕ್ಕಳಾದ ಮೇಲೆ ದಂಪತಿಗೆ ಹನಿಮೂನ್‌ಗೆ ತೆರಳಬೇಕು ಎಂಬ ಆಸೆ ಹುಟ್ಟಿದೆ. ಆದರೆ, ಇದಕ್ಕಾಗಿ ಅವರು ಎಂಟು ತಿಂಗಳ ಹಸುಗೂಸನ್ನೇ ಎರಡು ಲಕ್ಷ ರೂಪಾಯಿಗೆ ಮಾರಾಟ (Couple Sells Baby) ಮಾಡುವ ನೀಚತನ ಪ್ರದರ್ಶಿಸಿದ್ದಾರೆ.
ಹೌದು, ಉತ್ತರ 24 ಪರಗಣ ಜಿಲ್ಲೆಯ ನಿವಾಸಿಗಳಾದ ಜಯದೇವ್ ಘೋಷ್ ಹಾಗೂ ಸತಿ ಎಂಬ ದುಷ್ಟ ದಂಪತಿಯು ಹೊಸ ಮೊಬೈಲ್ ಖರೀದಿಸುವ, ರಾಜ್ಯಾದ್ಯಂತ ಹನಿಮೂನ್‌ಗೆ ತೆರಳುವ ಚಪಲದಿಂದಾಗಿ 8 ತಿಂಗಳ ಮಗುವನ್ನು ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಒಂದೂವರೆಗೆ ತಿಂಗಳ ಹಿಂದೆ ಇವರು ಮಗುವನ್ನು ಮಾರಾಟ ಮಾಡಿದ್ದು, ಜುಲೈ 24ರಂದು ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಜಯದೇವ್ ಘೋಷ್ ಹಾಗೂ ಸತಿ ಅವರಿಗೆ ಮತ್ತೊಬ್ಬ ಮಗಳಿದ್ದಾಳೆ. ಇತ್ತೀಚೆಗೆ ಮನೆಯಲ್ಲಿ ಮಗು ಕಾಣದಿರುವುದು ಹಾಗೂ ಇವರ ಬಳಿ ಹೊಸ ಬ್ರ್ಯಾಂಡ್ ಮೊಬೈಲ್ ಇರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಇವರು ಹಣದ ಆಸೆಗಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ ವಿಷಯ ಬಹಿರಂಗವಾಗಿದೆ.
ದಂಪತಿಗೆ ಇನ್‌ಸ್ಟಾಗ್ರಾಂ ರೀಲ್ಸ್ ಮಾಡುವ, ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಹುಚ್ಚಿತ್ತು. ಇದಕ್ಕಾಗಿ ಅವರು ದುಡಿದು ಹಣ ಗಳಿಸದೆ, ಮಗುವನ್ನೇ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಗುವನ್ನು ಮಾರಿದ ಬಳಿಕ ಬಂದ ಹಣದಲ್ಲಿ ಅವರು ದಿಘಾ, ಮಂಡರ್‌ಮಣಿ ಬೀಚ್ ಸೇರಿ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಮಗುವನ್ನು ಮಾರಾಟ ಮಾಡಲು ಸಹಾಯ ಮಾಡಿದ ಪ್ರಿಯಾಂಕಾ ಘೋಷ್ ಎಂಬುವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಗಾಂಜಾ, ಅಫೀಮು ಚಟವೂ ಇರುವ ಕಾರಣ ಅದು ಕೂಡ ಮಗುವನ್ನು ಮಾರಾಟ ಮಾಡಲು ಕಾರಣವಾಗಿರಬಹುದು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.