ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು (Stabbing) ಮತ್ತೊಬ್ಬ ಯುವತಿಯನ್ನು ಕೊಲೆ (Woman Murder Case) ಮಾಡಲಾಗಿದೆ. ಇದು ಕೂಡ ಪಾಗಲ್ ಭಗ್ನಪ್ರೇಮಿಯ ಕೃತ್ಯವಾಗಿದೆ. ನೇಹಾ ಹಿರೇಮಠ (Neha Hiremath murder) ಕೊಲೆ ಪ್ರಕರಣ ನೆನಪಿನಿಂದ ಮಾಸುವ ಮುನ್ನವೇ ಈ ಕೊಲೆಯೂ ಘಟಿಸಿದೆ. ಕೊಲೆಗೆ ಕೆಲ ದಿನಗಳ ಮುನ್ನ ಆರೋಪಿ, ಯುವತಿಗೆ “ನೇಹಾ ಹಿರೇಮಠ ಥರ ಮಾಡ್ತೀನಿ” ಎಂದು ಬೆದರಿಸಿದ್ದ ಎಂದು ಗೊತ್ತಾಗಿದೆ.
ಕೊಲೆ ಮಾಡಿದ ಆರೋಪಿ ಗಿರೀಶ್ ಸಾವಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಂಜಲಿ ಅಂಬಿಗೇರ (20) ಕೊಲೆಯಾಗಿರುವ ಯುವತಿ. ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕ್ರುದ್ಧನಾದ ಗಿರೀಶ್ ಈ ಕೃತ್ಯ ಎಸಗಿದ್ದಾನೆ ಎಂದು ಗೊತ್ತಾಗಿದೆ. ಬೆಳಗಿನ ಜಾವ 5.30ಕ್ಕೆ ಅಂಜಲಿ ಅವರು ವೀರಾಪೂರ ಓಣಿಯಲ್ಲಿರುವ ತಮ್ಮ ಮನೆಯಲ್ಲಿ ಮಲಗಿದ್ದಾಗ ದುಷ್ಕರ್ಮಿ ಮನೆಗೇ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ಪ್ರತಿಭಟಿಸಿದರೂ ಅವರ ಎದುರೇ ಇರಿದಿದ್ದಾನೆ.
ಈ ಸೈಕೋ ಪ್ರೇಮಿ, ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮಕಿ ಹಾಕಿದ್ದ. “ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ” ಎಂದು ಧಮಕಿ ಹಾಕಿದ್ದ. ಗಿರೀಶ ಬೆದರಿಕೆ ಹಾಕಿರುವುದನ್ನು ಅಂಜಲಿಯ ಅಜ್ಜಿ ಗಂಗಮ್ಮ ಅವರು ಪೊಲೀಸರ ಗಮನಕ್ಕೂ ತಂದಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.
ಕೊಲೆಪಾತಕಿ ಗಿರೀಶ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ಯುವತಿ ನೇಹಾ ಹಿರೇಮಠ ಅವರನ್ನು ಪಾಗಲ್ ಪ್ರೇಮಿ ಫಯಾಜ್ ಕಾಲೇಜ್ ಕ್ಯಾಂಪಸ್‌ನಲ್ಲಿಯೇ ಕಳೆದ ತಿಂಗಳು ಕೊಚ್ಚಿ ಕೊಲೆ ಮಾಡಿದ್ದ. ಇದು ಲವ್ ಜಿಹಾದ್ ಪ್ರಕರಣ ಎಂದು ರಾಜಾದ್ಯಂತ ತೀವ್ರ ಪ್ರತಿಭಟನೆ, ರಾಜಕೀಯ ಕೆಸರೆರಚಾಟಗಳಿಗೆ ಕಾರಣವಾಗಿತ್ತು.
ಆಯ ತಪ್ಪಿ ಬಿದ್ದು ಕಾರ್ಮಿಕ ಸಾವು
ವಿಜಯಪುರ: ಎನ್‌ಟಿಪಿಸಿ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರೊಬ್ಬರು ಆಯ ತಪ್ಪಿ 133 ಅಡಿ ಮೇಲಿಂದ ಕೆಳಗೆ ಬಿದ್ದು (Labor death) ಸಾವಿಗೀಡಾಗಿದ್ದಾರೆ. ವಿಜಯಪುರ ಜಿಲ್ಲೆಯ ಕೂಡಗಿ ಬಳಿಯಿರುವ ಎನ್‌ಟಿಪಿಸಿ ಘಟಕದಲ್ಲಿ ದುರಂತ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮೇಲಿಂದ ಬಿದ್ದು ಸಾವು ಸಂಭವಿಸಿದೆ. ಕಿಶನ್ ಕುಮಾರ್ ಭಾರಧ್ವಾಜ್ (33) ಮೃತಪಟ್ಟ ಕಾರ್ಮಿಕ. ಉತ್ತರ ಪ್ರದೇಶ ಮೂಲದ ಇವರು ಎನ್‌ಟಿಪಿಸಿ ಘಟಕದಲ್ಲಿ ಹೆಲ್ಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ ಘಟನೆ ನಡೆದಿದ್ದು, ವಿಜಯಪುರ ಖಾಸಗಿ ಆಸ್ಪತ್ರೆಗೆ ಕಾರ್ಮಿಕನ ಮೃತ ದೇಹ ರವಾನಿಸಲಾಗಿದೆ.
ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಕೂಡಗಿ ಎನ್‌ಟಿಪಿಸಿ ಘಟಕದ ಎದುರು ಬೆಳಿಗ್ಗೆಯಿಂದಲೇ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಬೆಂಕಿ ಆಕಸ್ಮಿಕದಲ್ಲಿ ಮನೆ ಭಸ್ಮ
ಕಲಬುರಗಿ: ವಿದ್ಯುತ್ ಶಾರ್ಟ್ ಸರ್ಕೀಟ್ (Short circuit) ಪರಿಣಾಮ ಕಲಬುರಗಿ ತಾಲ್ಲೂಕಿನ ಆಲಗೂಡ ಗ್ರಾಮದಲ್ಲಿ ಮನೆಯೊಂದು (Fire mishap) ಹೊತ್ತಿ ಉರಿದಿದೆ. ರೈತ ಸೈಬಣ್ಣ ಎನ್ನುವವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದೆ.
ಮನೆಯಲ್ಲಿದ್ದ 20 ಸಾವಿರ ನಗದು ಹಣ, 7-8 ತೊಲೆ ಚಿನ್ನಾಭರಣ, ದವಸಧಾನ್ಯ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮನೆ ಸರ್ವನಾಶವಾದ ಹಿನ್ನೆಲೆಯಲ್ಲಿ ಸೈಬಣ್ಣ ಕುಟುಂಬ ಅತಂತ್ರವಾಗಿದೆ. ಕಲಬುರಗಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ, ಮನೆಕೆಲಸದಾಕೆ ಬಂಧನ
ಬೆಂಗಳೂರು: ಕನ್ನಡದ ‘ಅಮೃತಧಾರೆ’ ಧಾರಾವಾಹಿಯ ನಟಿ ಛಾಯಾ ಸಿಂಗ್ (Chaya Singh) ಅವರ ತಾಯಿ ಮನೆಯಲ್ಲಿ ಕಳ್ಳತನ ಮಾಡಿದ್ದ ಮನೆಕೆಲಸದಾಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಛಾಯಾಸಿಂಗ್ ಅವರ ತಾಯಿ ಚಮನಲತಾ ಅವರ ಬಸವೇಶ್ವರನಗರದ ನಿವಾಸದಲ್ಲಿ ಕಳ್ಳತನ ನಡೆದಿತ್ತು. 66 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವಾಗಿದ್ದವು. ಇದೀಗ ಮನೆಯಲ್ಲಿ ಕಳ್ಳತನ ಮಾಡಿರುವುದು ಮನೆಕೆಲಸದಾಕೆ ಎಂಬುವುದು ತಿಳಿದುಬಂದಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ನಟಿಯ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವಾಗಿದ್ದ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಕೆಲಸದಾಕೆ ಉಷಾ ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಬಂಧಿಸಿ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲಸದ ವೇಳೆ, ಚಿನ್ನಾಭರಣ ದೋಚಿ ಏನೂ ಅರಿಯದಂತೆ ಕೆಲಸದಾಕೆ ವರ್ತಿಸಿದ್ದಳು. ಇದೀಗ ಆಕೆಯ ಕಳ್ಳತನ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಛಾಯಾ ಸಿಂಗ್ ಕುಟುಂಬ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ಛಾಯಾ ಸಿಂಗ್ ಪ್ರಸ್ತುತ ಕನ್ನಡದ ‘ಅಮೃತಧಾರೆ’ ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಇನ್ನು ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್ ಸಿನಿಮಾದಲ್ಲಿ ಛಾಯಾ ಸಿಂಗ್ ಅಭಿನಯಿಸಿದ್ದು, ಈ ವರ್ಷಾಂತ್ಯದಲ್ಲಿ ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ | Actor Dhanush: ಧನುಷ್‌ಗೆ ಐಶ್ವರ್ಯಾ ದೋಖಾ; ಐಶ್ವರ್ಯಾಗೆ ಧನುಷ್ ಮೋಸ! ಖ್ಯಾತ ಗಾಯಕಿಯಿಂದ ಸೆನ್ಷೆಷನಲ್ ಮಾಹಿತಿ