Site icon Vistara News

ಊಟ ಬೇಕೆಂದು ಅಳುತ್ತಿದ್ದ ಕಂದಮ್ಮಗಳ ಕತ್ತು ಹಿಸುಕಿ ಕೊಂದ ಹೆತ್ತಮ್ಮ

crime

ನಂದೇಡ್‌: ಸಾವಿರ ದೇವರ ಮೊರೆಹೋದರೂ ಕೆಲವರಿಗೆ ಮಕ್ಕಳ ಭಾಗ್ಯ ಇರುವುದಿಲ್ಲ. ಆದರೆ ಕೆಲವರಿಗೆ ಮಕ್ಕಳು ಬೇಡವಾದರೂ ಆ ಭಾಗ್ಯ ಇರುತ್ತದೆ. ಇದೆಲ್ಲದರ ಮಧ್ಯೆ ಹುಟ್ಟಿದ ಮಕ್ಕಳನ್ನು ಸಾಕಲು ಆಗದೆ ನಿರ್ದಾಕ್ಷಿಣ್ಯವಾಗಿ ಕೊಲ್ಲುವವರೂ ಹಲವರು ಇದ್ದಾರೆ. ಆದರೆ ಇಲ್ಲೊಬ್ಬ ತಾಯಿ, ಮಕ್ಕಳು ತುಂಬ ಅಳುತ್ತವೆ ಎಂಬ ಕಾರಣಕ್ಕೆ ಅವರ ಕತ್ತು ಹಿಸುಕಿ ಕೊಂದಿದ್ದಾಳೆ(Woman strangles infants). ಬಳಿಕ ಶವಗಳನ್ನು ಸುಟ್ಟು ಹಾಕಿದ್ದಾಳೆ. ಇಂಥ ಕೃತ್ಯ ನಡೆದದ್ದು ಬೇರೆ ಇನ್ಯಾವುದೇ ದೇಶದಲ್ಲಿ ಅಲ್ಲ. ನಮ್ಮದೇ ದೇಶದಲ್ಲಿ, ನಮ್ಮ ಪಕ್ಕದ ರಾಜ್ಯ ಮಹಾರಾಷ್ಟದಲ್ಲಿ. ಅಂದ ಹಾಗೇ ಇಂತಹ ಕಟುಕ ನಿರ್ಧಾರ ಮಾಡಿ, ಒಡಲಕುಡಿಗಳನ್ನೇ ಕೊಲೆ ಮಾಡಿದ ಮಹಿಳೆ ಹೆಸರು ದುರ್ಪದಾಬಾಯಿ ಗಣಪತ್‌ ನಿಮಲವಾಡ (30). ಮಹಾರಾಷ್ಟ್ರದ ನಂದೇಡ ಜಿಲ್ಲೆಯ ನಿವಾಸಿ.

ಮಕ್ಕಳು ಅಳುವುದು ಸಾಮಾನ್ಯ. ಯಾವ ಮಕ್ಕಳು ತಾನೇ ಅಳುವುದಿಲ್ಲ ಹೇಳಿ? ಅದರಲ್ಲೂ 5 ವರ್ಷದೊಳಗಿನ ಮಕ್ಕಳು ಅಳುವುದು, ರಚ್ಚೆ ಹಿಡಿಯುವುದು, ಹಠ ಮಾಡುವುದು, ತಂದೆ-ತಾಯಿಯನ್ನು ಅದರಲ್ಲೂ ತಾಯಿಯನ್ನು ಕಾಡಿಸುವುದು ಸರ್ವೇ ಸಾಮಾನ್ಯ. ಹಾಗೆ ಅವರ ಅಳು ಹೆಚ್ಚಾದಾಗ ಗದರಿಸಬಹುದು ಅಥವಾ ಹೊಡೆಯಬಹುದು. ಆದರೆ ದುರ್ಪದಾಬಾಯಿ ಎರಡನ್ನೂ ಮಾಡದೆ ಅತ್ಯಂತ ಕ್ರೌರ್ಯವಾದ ಕೃತ್ಯ ಮಾಡಿದ್ದಾಳೆ. ಅಳುತ್ತಿದ್ದ ಇಬ್ಬರೂ ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ಬಳಿಕ ತನ್ನ ತಾಯಿ ಹಾಗೂ ಸೋದರನ ಸಹಾಯದಿಂದ ಶವಗಳನ್ನು ಸುಟ್ಟು ಹಾಕಿದ್ದಾಳೆ.

ʼ4 ತಿಂಗಳ ಮಗಳು ಅನಸೂಯಾ ಹಸಿವಿನಿಂದ ತುಂಬ ಅಳುತ್ತಿದ್ದಳು. ಹೀಗಾಗಿ ಮೇ 31ರಂದು ಕತ್ತು ಹಿಸುಕಿ ಕೊಂದೆ, ಮಾರನೆ ದಿನ 2ವರ್ಷದ ಮಗ ದತ್ತ ಊಟ ಕೇಳಿ ಅಳುತ್ತಿದ್ದ ಎಂಬ ಕಾರಣದಿಂದ ಕತ್ತು ಹಿಸುಕಿ ಕೊಲೆಗೈದೆ. ನಂತರ ನನ್ನ ತಾಯಿ ಕೊಂಡಾಭಾಯಿ ಹಾಗೂ ಸೋದರ ಮಾಧವ ರಾಜಮೋಡ ಸಹಾಯದಿಂದ ಶವಗಳನ್ನು ಮನೆಯ ಹಿಂದೆ ಸುಟ್ಟಿದ್ದೇವೆʼ ಎಂದು ಪೊಲೀಸ್‌ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ. ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಅಪ್ರಾಪ್ತೆ ಗ್ಯಾಂಗ್‌ ರೇಪ್‌, ಐವರು ಆರೋಪಿಗಳೂ ಪಿಯುಸಿ ಹುಡುಗ್ರು!

Exit mobile version