ಮುಂಬಯಿ: ಮುಂಬಯಿಯ ಉರಾನ್‌ನ 20 ವರ್ಷದ ಯಶಶ್ರೀ ಶಿಂಧೆಯನ್ನು (yashashree shinde Murder) ಕೊಲೆ ಮಾಡಿದ 23 ವರ್ಷದ ಕೊಲೆಪಾತಕಿ ದಾವೂದ್ ಶೇಖ್ (Dawood Sheik), ಸಂತ್ರಸ್ತೆಯನ್ನು ಕರ್ನಾಟಕಕ್ಕೆ ಕರೆದೊಯ್ದು ಮದುವೆಯಾಗಲು ಬಯಸಿದ್ದ ಎಂಬುದು ಇದೀಗ ಗೊತ್ತಾಗಿದೆ. ಆಕೆ ನಿರಾಕರಿಸಿದ್ದರಿಂದ ಇರಿದು ಕೊಲೆ ಮಾಡಿದ್ದಾನೆ.
ತನ್ನೊಂದಿಗೆ ಕರ್ನಾಟಕಕ್ಕೆ ಓಡಿಬಂದು ಮದುವೆಯಾಗುವಂತೆ ದಾವೂದ್ ಶೇಖ್, ಯಶಸ್ರೀಯನ್ನು ಸದಾ ಒತ್ತಾಯಿಸುತ್ತಿದ್ದ. ಆದರೆ ಆಕೆ ಆತನೊಂದಿಗೆ ಹೋಗಲು ಸಿದ್ಧಳಿರಲಿಲ್ಲ. ಹಲವಾರು ಸಲ ಆತನ ನಂಬರ್ ಅನ್ನು ಆಕೆ ಬ್ಲಾಕ್ ಮಾಡಿದ್ದಳು. ಹೀಗಾಗಿ ಕುಪಿತಗೊಂಡು ಜುಲೈ 25ರಂದು ಮಧ್ಯಾಹ್ನ ಆಕೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಡಿಸಿಪಿ (ಅಪರಾಧ) ಅಮಿತ್ ಕಾಳೆ ಹೇಳಿದ್ದಾರೆ.
ಸಂತ್ರಸ್ತೆಯ ಕುಟುಂಬವು 2019ರಲ್ಲಿಯೇ ತಮ್ಮ ಮಗಳಿಗೆ ಕಿರುಕುಳ ನೀಡಿದ್ದಕ್ಕಾಗಿ ಶೇಖ್ ವಿರುದ್ಧ ದೂರು ದಾಖಲಿಸಿತ್ತು. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಶೇಖ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ಒಂದೂವರೆ ತಿಂಗಳು ಜೈಲಿನಲ್ಲಿ ಕಳೆದಿದ್ದ. ಜಾಮೀನು ಪಡೆದ ನಂತರ ಶೇಖ್ 2019ರಲ್ಲಿ ಉರಾನ್‌ನಲ್ಲಿ ಸ್ವಲ್ಪ ಸಮಯ ಕಳೆದಿದ್ದ. COVID-19 ಸಾಂಕ್ರಾಮಿಕದ ಸಮಯದಲ್ಲಿ ಕರ್ನಾಟಕಕ್ಕೆ ಮರಳಿದ್ದ. ಇಲ್ಲಿ ಗುರುತು ಬದಲಿಸಿಕೊಂಡು ಚಾಲಕನಾಗಿ ಕೆಲಸ ಮಾಡಿದ್ದ.
ಅದರ ನಡುವೆ ನಿರಂತರವಾಗಿ ಹುಡುಗಿಯೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿದ್ದ. ಯಶಶ್ರೀ ತನ್ನ ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ಬಳಿಕ ಆಕೆಯನ್ನು ಸಂಪರ್ಕಿಸಲು ತನ್ನ ಸಂಬಂಧಿ ಮೋಶಿನ್‌ನ ಮೊಬೈಲ್ ಅನ್ನು ಬಳಸಿದ್ದ.
ತನ್ನೊಂದಿಗೆ ಬರಲು ನಿರಾಕರಿಸಿದರೆ ಬಾಲಕಿಯನ್ನು ಕೊಲ್ಲುವ ಉದ್ದೇಶದಿಂದಲೇ ಶೇಖ್ ಜುಲೈ 23ರಂದು ಉರಾನ್‌ಗೆ ಮರಳಿದ್ದ. ತನ್ನನ್ನು ಭೇಟಿಯಾಗಬೇಕೆಂದು ಯಶಶ್ರೀಯನ್ನು ಒತ್ತಾಯಿಸಿದ್ದ. ಬೇಲಾಪುರದಲ್ಲಿ ಕೆಲಸ ಮಾಡುತ್ತಿದ್ದ ಯಶಶ್ರೀ, ಅರ್ಧ ದಿನ ರಜೆ ತೆಗೆದುಕೊಂಡು ಜುಲೈ 24ರಂದು ಮಧ್ಯಾಹ್ನ ಜೂಯಿ ನಗರ ರೈಲು ನಿಲ್ದಾಣದಲ್ಲಿ ಆತನನ್ನು ಭೇಟಿಯಾಗಿದ್ದಳು. ಜುಲೈ 25ರ ಬೆಳಿಗ್ಗೆ ತನ್ನನ್ನು ಮತ್ತೆ ಭೇಟಿಯಾಗುವಂತೆ ಶೇಖ್ ಆಕೆಯ ಮೇಲೆ ಒತ್ತಡ ಹೇರುತ್ತಲೇ ಇದ್ದ. ಅಂದು ಆತ ಫೇಸ್‌ಬುಕ್‌ನಲ್ಲಿ ಫೋಟೋವನ್ನು ಕೂಡ ಅಪ್‌ಲೋಡ್ ಮಾಡಿದ್ದ. ಅದನ್ನು ಅಳಿಸುವಂತೆ ಯಶಶ್ರೀ ವಿನಂತಿಸಿದ್ದಳು. ಆಕೆ ಮತ್ತೆ ಭೇಟಿಯಾದರೆ ಮಾತ್ರ ಫೋಟೋ ಅಳಿಸುವುದಾಗಿ, ಇಲ್ಲವಾದರೆ ವೈರಲ್ ಮಾಡುವುದಾಗಿ ಆತ ಬ್ಲ್ಯಾಕ್‌ಮೇಲ್ ಮಾಡಿದ್ದ. ನಂತರ ಭೇಟಿಯಾಗಲು ಆಕೆ ಒಪ್ಪಿದಾಗ ಆತ ಫೋಟೋ ಡಿಲೀಟ್ ಮಾಡಿದ್ದ.
ಜುಲೈ 25ರಂದು ಯಶಶ್ರೀ ಮತ್ತೆ ಅವನನ್ನು ಭೇಟಿಯಾದಳು. ತನ್ನೊಂದಿಗೆ ಕರ್ನಾಟಕಕ್ಕೆ ಬರುವಂತೆ ಶೇಖ್ ಆಕೆಯನ್ನು ಒತ್ತಾಯಿಸಿದ್ದ. ಆಕೆ ತನ್ನೊಂದಿಗೆ ಬರಲು ನಿರಾಕರಿಸಿದಾಗ ಶೇಖ್ ಸಿಟ್ಟಿಗೆದ್ದು ಕರ್ನಾಟಕದಿಂದ ತಂದಿದ್ದ ಚಾಕುವನ್ನು ಬಳಸಿ ಆಕೆಯನ್ನು ಹಲವಾರು ಬಾರಿ ಇರಿದು ಪರಾರಿಯಾಗಿದ್ದ. ಯಶಶ್ರೀ ಆ ಸಂದರ್ಭದಲ್ಲಿ ಸಹಾಯಕ್ಕಾಗಿ ತನ್ನ ಸ್ನೇಹಿತೆಯೊಬ್ಬಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಳು. ಆದರೆ ನೆಟ್‌ವರ್ಕ್ ಸಿಗದೆ ಹೋದುದರಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಚೂರಿಯಿಂದ ಇರಿದ ಬಳಿಕ ಶೇಖ್ ತನ್ನ ಸ್ನೇಹಿತನೊಬ್ಬನ ಬಳಿ ಹಣ ಕೇಳಿದ್ದು, ಪನ್ವೇಲ್ ರೈಲು ನಿಲ್ದಾಣದ ಬಳಿಯ ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ದ. ನಂತರ ಕಳಂಬೋಳಿ ವೃತ್ತಕ್ಕೆ ಆಗಮಿಸಿ ಬಸ್ಸಿನಲ್ಲಿ ಕರ್ನಾಟಕದ ಗುಲ್ಬರ್ಗಕ್ಕೆ ತೆರಳಿದ್ದ. ಜುಲೈ 30ರಂದು ಗುಲ್ಬರ್ಗ ಜಿಲ್ಲೆಯ ಶಹಾಪುರ ಬೆಟ್ಟ ಪ್ರದೇಶದಲ್ಲಿ ಶೇಖ್‌ನನ್ನು ಬಂಧಿಸಲಾಗಿತ್ತು. ಶೇಖ್‌ನನ್ನು ಪನ್ವೇಲ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲಿ ಆತನನ್ನು ಆಗಸ್ಟ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಜಾಮೀನು ರಹಿತ ವಾರಂಟ್
ಏತನ್ಮಧ್ಯೆ, ಪನ್ವೇಲ್ ನ್ಯಾಯಾಲಯವು 2019ರ ಪ್ರಕರಣದಲ್ಲಿ ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆಯಡಿಯಲ್ಲಿ ಶೇಖ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ತಿಳಿದುಬಂದಿದೆ. ಶೇಖ್ ಒಂದೂವರೆ ತಿಂಗಳು ಜೈಲಿನಲ್ಲಿ ಕಳೆದಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ ಪನ್ವೇಲ್ ನ್ಯಾಯಾಲಯವು ಜುಲೈ 20, 2024ರಂದು ಅವನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಜುಲೈ 20ರಂದು ಪೊಲೀಸರು ಶೇಖ್‌ನನ್ನು ಏಕೆ ಬಂಧಿಸಲಿಲ್ಲ ಎಂದು ಕೇಳಿದಾಗ, ಆ ಬೆಳವಣಿಗೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಡಿಸಿಪಿ ಕಾಳೆ ಹೇಳಿದ್ದಾರೆ.
ಇದನ್ನೂ ಓದಿ: Hindu Girl Murder: ಯುವತಿ ಬರ್ಬರ ಕೊಲೆ ಪ್ರಕರಣ; ಹಂತಕ ದಾವೂದ್ ಶೇಖ್ ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯ ಪತ್ತೆ