Site icon Vistara News

ವಿಸ್ತಾರ ಸಂಪಾದಕೀಯ: ರಾಮೇಶ್ವರಂ ಕೆಫೆ ಬಾಂಬರ್‌ಗಳನ್ನು ಸೆರೆ ಹಿಡಿದ ಎನ್‌ಐಎ ಸಾಹಸ ಶ್ಲಾಘನೀಯ

Rameshwaram Cafe

Bengaluru Rameshwaram Cafe blast case: NIA probe Points To Pakistan connection

ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ ಉಗ್ರ ಹಾಗೂ ಈ ಯೋಜನೆಯ ರೂವಾರಿಯಾಗಿದ್ದ ಇನ್ನೊಬ್ಬ ಪ್ರಳಯಾಂತಕ- ಇಬ್ಬರನ್ನೂ ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಬಾಂಬ್‌ ಸ್ಫೋಟ ನಡೆದು 40ಕ್ಕೂ ಹೆಚ್ಚು ದಿನಗಳಾದ ಬಳಿಕ ಇವರ ಬಂಧನ ಆಗಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದ ಹೊರವಲಯದಲ್ಲಿ ಇವರು ಬಚ್ಚಿಟ್ಟುಕೊಂಡಿದ್ದರು ಎಂದು ಗೊತ್ತಾಗಿದೆ. ಬಾಂಬರ್‌ ಮುಸಾವೀರ್‌ ಹುಸೇನ್‌ ಶಜೀಬ್‌ ಹಾಗೂ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್‌ ತಹಾರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಮಾರ್ಚ್‌ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಬಾಂಬ್‌ ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದರು. ಈ ಪಾತಕಿಗಳನ್ನು ಹಿಡಿಯಲು ರಾಷ್ಟ್ರೀಯ ತನಿಖಾ ದಳ ಮಾಡಿದ ಪ್ರಯತ್ನ ಒಂದೆರಡಲ್ಲ. ಕೊನೆಗೂ ಈ ದುಷ್ಟರನ್ನು ಬಂಧಿಸುವಲ್ಲಿ ಎನ್‌ಐಎ ಯಶಸ್ವಿಯಾಗಿರುವುದು ಎಲ್ಲರೂ ನಿಟ್ಟುಸಿರು ಬಿಡುವಂಥ ವಿಷಯ. ಇನ್ನೀಗ ಆಗಬೇಕಾದುದೆಂದರೆ ಸೂಕ್ತ, ಶೀಘ್ರ ವಿಚಾರಣೆ ಹಾಗೂ ಕಠಿಣ ಶಿಕ್ಷೆ. 

ಈ ಉಗ್ರರನ್ನು ಹಿಡಿದ ಕಥೆಯೇ ರೋಚಕ. ಆದರೆ ನಮ್ಮ ತನಿಖಾ ಸಂಸ್ಥೆಗಳು ಎಷ್ಟು ಸಮರ್ಥವಾಗಿವೆ, ಮನಸ್ಸು ಮಾಡಿದರೆ ಎಷ್ಟು ಪ್ರಾಮಾಣಿಕವಾಗಿ, ತೀವ್ರಗತಿಯಿಂದ ಇವು ಕೆಲಸ ಮಾಡಿ ದುಷ್ಟರನ್ನು ಹೆಡೆಮುರಿ ಕಟ್ಟಬಲ್ಲವು ಎಂಬುದಕ್ಕೆ ಇದೇ ಉದಾಹರಣೆ. ಪ್ರಕರಣ ನಡೆದ ಜಾಗದಲ್ಲಿ ಶಂಕಿತನ ಎರಡು ಸಿಸಿಟಿವಿ ಫೂಟೇಜ್‌ಗಳು ಬಿಟ್ಟರೆ ಇನ್ನೇನೂ ಎನ್‌ಐಎಗೆ ದೊರೆತಿರಲಿಲ್ಲ. ಅವು ಕೂಡ ಅಸ್ಪಷ್ಟವಾಗಿದ್ದವು. ಅಧಿಕಾರಿಗಳು ಸುತ್ತಮುತ್ತಲಿನ ಹಾಗೂ ಬೆಂಗಳೂರಿನ ಸಾವಿರಾರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು. ಶಂಕಿತ ಉಗ್ರರ ಪ್ರತಿಯೊಂದು ಹೆಜ್ಜೆಯನ್ನು ಹಿಂಬಾಲಿಸಿದ್ದರು. ಬಸ್‌ಗಳು, ಟೋಲ್‌ ಪ್ಲಾಜಾ, ಶಾಪಿಂಗ್‌ ಮಾಲ್‌, ಟ್ರಾಫಿಕ್‌ ಸಿಗ್ನಲ್‌, ಖಾಸಗಿ ವಾಹನಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಸ್ಥಳೀಯ ಪೊಲೀಸರು, ಕೇಂದ್ರ ಗುಪ್ತಚರ ದಳ ಹೀಗೆ ಎಲ್ಲ ಸಂಸ್ಥೆಗಳ ನೆರವು ಪಡೆದಿದ್ದರು. ಈಗಾಗಲೇ ಬಂಧಿತರಾಗಿರುವ ಹಲವು ಶಂಕಿತ ಉಗ್ರರನ್ನೂ ಪ್ರಶ್ನಿಸಿದ್ದರು. ಕೊನೆಗೂ ಭಯೋತ್ಪಾದಕ ಧರಿಸಿದ್ದ ಕ್ಯಾಪ್‌ ನೀಡಿದ ಸುಳಿವನ್ನು ಆಧರಿಸಿ ಈತನನ್ನು ಹಿಡಿಯಲಾಗಿದೆ. 

ರಾಜ್ಯದವರೇ ಆಗಿರುವ ಈ ಭಯೋತ್ಪಾದಕರು ಮಾಡಿರುವ ಅನಾಹುತ ಸಣ್ಣದಲ್ಲ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟಿದ್ದ ಬಾಂಬರ್‌ ಮುಸಾವೀರ್‌ ಹುಸೇನ್‌ ಶಜೀಬ್‌ ಹಾಗೂ ಮತೀನ್‌ ತಾಹಾ ಬಳಿಕ ತುಮಕೂರು, ಬಳ್ಳಾರಿ, ಬೀದರ್‌ ಮುಂತಾದೆಡೆ ತಲೆಮರೆಸಿಕೊಂಡು ಇದ್ದು, ರಾಜ್ಯದಿಂದ ಪರಾರಿಯಾಗಿ ಆಂಧ್ರ ಪ್ರದೇಶದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಅಲ್ಲಿಂದ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯೋಜನೆ ಹೆಣೆದಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರುವ ಮುನ್ನವೇ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುಸಾಫಿರ್‌ ಶಾಜೀಬ್‌ ಹುಸೇನ್‌ ಹಾಗೂ ಐಸಿಸ್‌, ಅಲ್‌ ಹಿಂದ್‌ ಮುಂತಾದ ಉಗ್ರ ಸಂಘಟನೆ ಕೇಸ್‌ಗಳಲ್ಲಿ ಮೋಸ್ಟ್‌ ವಾಂಟೆಡ್‌ ಆರೋಪಿಯಾಗಿರುವ ಅಬ್ದುಲ್‌ ಮತೀನ್‌ ತಾಹಾ ಈ ಕೃತ್ಯದ ರೂವಾರಿಗಳು. ಇವರ ಹಿಂದೆ ಇನ್ನೂ ಯಾರ್ಯಾರು ಇದ್ದಾರೆ ಎಂಬುದು ಕೂಡ ಪತ್ತೆಯಾಗಬೇಕಿದೆ. ಕೆಫೆ ಬಾಂಬ್‌ ಸ್ಫೋಟಕ್ಕೆ ಬಳಸಿದ್ದ ಐಇಡಿ ಮಾದರಿಗಳನ್ನು ಅವಲೋಕಿಸಿದ್ದ ಪೊಲೀಸರು, ಈ ಕೃತ್ಯದ ಹಿಂದೆ ಶಿವಮೊಗ್ಗದ ಐಸಿಸ್‌ ಹಾಗೂ ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಸಾಮ್ಯತೆ ಇರುವುದನ್ನು ಪತ್ತೆ ಹಚ್ಚಿದ್ದರು. 

ಅಂದರೆ, ರಾಜ್ಯದಲ್ಲಿ ಭಯೋತ್ಪಾದಕರ ಜಾಲ ವ್ಯಾಪಕವಾಗಿ ಕಾರ್ಯಾಚರಿಸುತ್ತಿದೆ ಎಂಬುದು ಸತ್ಯ. ಇದರ ಹಿಂದೆ ಇನ್ನೂ ಹಲವರು ಇರಬಹುದು. ಅಥವಾ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಾದ ಐಸಿಸ್‌, ಅಲ್‌ ಕೈದಾ ಮುಂತಾದ ಸಂಘಟನೆಗಳ ಥಿಂಕ್‌ ಟ್ಯಾಂಕ್‌ಗಳ ಕೈವಾಡವಿದ್ದರೂ ಆಶ್ಚರ್ಯವಿಲ್ಲ. ಚುನಾವಣೆಯ ಹೊತ್ತಿನಲ್ಲಿ ಜನತೆಯ ಮನದಲ್ಲಿ ಭೀತಿ ಮೂಡಿಸುವ ಆಶಯ ಇವರ ಕೃತ್ಯದ ಹಿಂದೆ ಇದ್ದಿರಬೇಕು. ಚುನಾವಣೆಯ ಸಮಯವನ್ನೇ ಯಾಕೆ ಆಯ್ದುಕೊಂಡರು? ಇವರ ಹಿಂದೆ ಇನ್ನೂ ಯಾರಿದ್ದಾರೆ? ಇವರ ಕಬಂಧ ಬಾಹುಗಳು ಎಷ್ಟು ಆಳ, ಅಗಲಕ್ಕೆ ಚಾಚಿಕೊಂಡಿವೆ? ಬೆಂಗಳೂರಿನಲ್ಲಿ ಇವರಿಗೆ ಸಹಕಾರ ನೀಡಿದ ಸ್ಲೀಪರ್‌ ಸೆಲ್‌ಗಳು ಎಷ್ಟಿರಬಹುದು? ಇವರಿಗೆ ಭೌತಿಕ ಸಹಕಾರ ನೀಡಿದವರಂತೆ, ಮಾನಸಿಕ ಬೆಂಬಲ ನೀಡಿದವರೂ ಇರಬಹುದಲ್ಲವೇ? ಇವೆಲ್ಲವನ್ನೂ ಆಳವಾಗಿ ತಲಾಶೆ ಮಾಡಿ ವಿಚಾರಣೆಗೆ ತೊಡಗಿಸಬೇಕಿದೆ. 

2014ರಿಂದ ಈಚೆಗೆ ಬೆಂಗಳೂರಿನಲ್ಲಿ ಭಾರಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರು ಮುಂದಾಗಿರಲಿಲ್ಲ. ಇದಕ್ಕೆ ನಾವು ಇಲ್ಲಿನ ಪೊಲೀಸರಿಗೆ ಧನ್ಯವಾದ ಹೇಳಬೇಕು. ಇದೀಗ ಅದೂ ನಡೆದಿದೆ; ಮತ್ತು ಪೊಲೀಸರು ಪಾತಕಿಗಳನ್ನು ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರು, ಬೇಹುಗಾರಿಕೆ ಸಂಸ್ಥೆಗಳು, ಕೇಂದ್ರೀಯ ತನಿಖಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ ಇಲ್ಲಿನ ಜನತೆಯ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಾರೆ. ಆದರೆ ಶಾಂತಿಯುತ ನಗರವಾದ ಬೆಂಗಳೂರಿನಲ್ಲಿ ಉಗ್ರರು ನೆಲೆಯಾಗುತ್ತಿದ್ದಾರೆ ಎನ್ನುವುದಕ್ಕೆ ಈ ಸ್ಫೋಟ ಸಾಕ್ಷಿ. ಬೆಂಗಳೂರಿನ ಜನರ ಸುರಕ್ಷತೆಯನ್ನು ಆಡಳಿತ- ಪೊಲೀಸರು ಖಾತ್ರಿಪಡಿಸುವುದರೊಂದಿಗೆ, ಅಪರಾಧಿಗಳಿಗೆ ಶಿಕ್ಷೆಯೂ ಆಗಿ ಕಠಿಣ ಸಂದೇಶವನ್ನೂ ರವಾನಿಸಬೇಕಿದೆ.

ಇದನ್ನೂ ಓದಿ: Rameshwaram Cafe Blast: ಯಾರು ಈ ಅಬ್ದುಲ್‌ ಮತೀನ್‌ ತಾಹಾ? ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಮಾಸ್ಟರ್‌ ಮೈಂಡ್‌ ಎಲ್ಲಿಯವನು?

Exit mobile version