Site icon Vistara News

ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ

Indian Economy

Indian Economy Growth Against China Is Phenomenal

ಭಾರತದ ಆರ್ಥಿಕತೆ (Indian Economy) ಚೀನಾವನ್ನು ಹಿಂದಿಕ್ಕಿ ವೇಗವಾಗಿ ಬೆಳೆಯುತ್ತಿದ್ದು, ಗಾತ್ರದಲ್ಲಿ ಭಾರತದ ಆರ್ಥಿಕತೆ ಚಿಕ್ಕದಾಗಿದ್ದರೂ ಸಾಗುತ್ತಿರುವ ವೇಗ ಹೆಚ್ಚಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್)​ ಏಷ್ಯಾ ಮತ್ತು ಪೆಸಿಫಿಕ್ (ಎಪಿಎಸಿ) ವಿಭಾಗದ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಅವರು ಹೇಳಿದ್ದಾರೆ. ಇದು ನಿರೀಕ್ಷಿತವಾಗಿದ್ದು, ಅಚ್ಚರಿಯ ಸಂಗತಿಯೇನೂ ಅಲ್ಲ. ಚೀನಾದ ಆರ್ಥಿಕತೆಯ ಗಾತ್ರ ಭಾರತಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ಆದರೆ ಭಾರತವು ಇಂದು ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದಿರುವ ಅವರು ಭಾರತದ ಆರ್ಥಿಕ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದು, 2024-25ರ ಹಣಕಾಸು ವರ್ಷದಲ್ಲಿ ಭಾರತದ ಯೋಜಿತ ಬೆಳವಣಿಗೆಯ ದರ 6.8% ಎಂದು ನಿರೀಕ್ಷಿಸಿದ್ದಾರೆ.

ಕೋವಿಡ್- 19 ಸಾಂಕ್ರಾಮಿಕ ರೋಗ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಗಲ್ಫ್ ಪ್ರದೇಶದಲ್ಲಿ ಇತ್ತೀಚಿನ ಉದ್ವಿಗ್ನತೆ ಸೇರಿದಂತೆ ಅನೇಕ ಆಘಾತಗಳನ್ನು ಪರಿಹರಿಸಿಕೊಂಡಿರುವ ಭಾರತದ ಸಾಮರ್ಥ್ಯದ ಬಗ್ಗೆ ಶ್ರೀನಿವಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರಭಾವಶಾಲಿ ಬೆಳವಣಿಗೆಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆ ಕಾರಣ. ಮುಂದಿನ ದಿನಗಳಲ್ಲಿ ಭಾರತದ ಮುನ್ನಡೆಗೆ ಅಡೆತಡೆಗಳಿಲ್ಲ. ಸಮಗ್ರ ಸುಧಾರಣೆಗಳನ್ನು ಶ್ರದ್ಧೆಯಿಂದ ಜಾರಿಗೆ ತಂದರೆ ಮುಂದಿನ ಹಲವಾರು ವರ್ಷಗಳಲ್ಲಿ ಭಾರತವು 6.5% ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಸಾಧಿಸಬಹುದು ಎಂದವರು ಹೇಳಿದ್ದಾರೆ. ವಿಸ್ತರಿಸುತ್ತಿರುವ ಕಾರ್ಮಿಕ ಶಕ್ತಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಗಮನಾರ್ಹ ಸುಧಾರಣೆಗಳ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ. ಭಾರತವು ಯುವ, ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿದೆ. ಇದು ಪ್ರತಿವರ್ಷ ಸುಮಾರು 1.5 ಕೋಟಿ ಜನರನ್ನು ಕಾರ್ಮಿಕ ಬಲಕ್ಕೆ ಸೇರಿಸಲಿದೆ. ಈ ಜನಸಂಖ್ಯಾ ಅನುಕೂಲವನ್ನು ಬಳಸಿಕೊಳ್ಳಲು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಗಣನೀಯ ಹೂಡಿಕೆಗಳು ನಿರ್ಣಾಯಕ ಎಂಬುದು ಅವರ ಕಾಳಜಿ. ಬೆಳೆಯುತ್ತಿರುವ ಕಾರ್ಮಿಕ ಶಕ್ತಿಯು ಆರ್ಥಿಕತೆಗೆ ನೆರವು ನೀಡಬಹುದು ಎಂಬ ಅವರ ಮಾತಿನಲ್ಲಿ ಅರ್ಥವಿದೆ.

ಕಳೆದ ವರ್ಷ ಜಾಗತಿಕ ಆರ್ಥಿಕ ಪ್ರಗತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ರಷ್ಯಾ- ಉಕ್ರೇನ್‌ ಯುದ್ಧ, ಕೋವಿಡ್‌ ನಂತರದ ಸ್ಥಿತಿಗತಿ ಮತ್ತಿತರ ಕಾರಣಗಳಿಂದ ಅದು ಕುಸಿದಿತ್ತು. ಆದರೆ ಭಾರತ ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂದು ವಿಶ್ವ ಹಣಕಾಸು ಸಂಸ್ಥೆ (ಐಎಂಎಫ್‌) ಹೇಳಿದಂತೆ ಭಾರತ ಬೆಳವಣಿಗೆ ಕಂಡಿತ್ತು. ಐಎಂಎಫ್‌ ವರದಿ ಹಾಗೂ ಆರ್ಥಿಕ ಸಮೀಕ್ಷೆಗಳು ಮುಂದಿಟ್ಟಿರುವ ದೇಶದ ಆರ್ಥಿಕ ಚಿತ್ರಣ ಭರವಸೆದಾಯಕವಾಗಿದೆ. ಕೊರೊನಾದಿಂದ ಮುಕ್ತವಾದ ಬಳಿಕ ದೇಶದ ಮಾರುಕಟ್ಟೆಯಲ್ಲಿ ಚಲನಶೀಲತೆ ಮರಳಿದೆ. ಪಟ್ಟಣ ಹಾಗೂ ಗ್ರಾಮೀಣ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಗಳು ಮರಳಿರುವುದರಿಂದ, ಗ್ರಾಹಕ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ವೆಚ್ಚ ಮಾಡುವ ಧೈರ್ಯವೂ ಹೆಚ್ಚಿದೆ. 2024ರಲ್ಲಿ ಭಾರತದ ಆರ್ಥಿಕತೆಯಲ್ಲಿ ಶೇಕಡಾ 7.5ರ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಒಟ್ಟಾರೆಯಾಗಿ ದಕ್ಷಿಣ ಏಷ್ಯಾದ ಬೆಳವಣಿಗೆಯು 2024ರಲ್ಲಿ 6.0 ಪ್ರತಿಶತದಷ್ಟು ಪ್ರಬಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಮುಖ್ಯವಾಗಿ ಭಾರತದಲ್ಲಿನ ದೃಢವಾದ ಬೆಳವಣಿಗೆಯಿಂದ ಉಂಟಾಗಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. ಇಲ್ಲಿನ ಹಣದುಬ್ಬರವನ್ನೂ ಆರ್‌ಬಿಐ ನಿಯಂತ್ರಣದಲ್ಲಿಟ್ಟಿದೆ.

ಭಾರತದ ಜನಸಂಖ್ಯೆ ಚೀನಾವನ್ನೂ ಮೀರಿಸಿ ಈಗಾಗಲೇ ಮುಂದಡಿಯಿಟ್ಟಿದೆ. ಚೀನಾದ ಜನಸಂಖ್ಯೆಯ ಹೆಚ್ಚಿನ ಪ್ರಮಾಣ 40 ವರ್ಷ ಮೀರುತ್ತಿದ್ದರೆ, ಭಾರತದ ಶೇ.50 ಮಂದಿ 30 ವರ್ಷಕ್ಕಿಂತ ಕೆಳಗಿನವರು ಹಾಗೂ ಅದೇ ಕಾರಣಕ್ಕಾಗಿ ಇವರು ಮುಂದಿನ ಮೂರು ದಶಕಗಳ ಕಾಲ ದುಡಿಯುವವರಾಗಿರುತ್ತಾರೆ. ಭಾರತದ ಫಲವತ್ತತೆ ದರವೂ ಚೀನಾಕ್ಕಿಂತ ಮುಂದಿದೆ ಹಾಗೂ ಮುಂದಿನ ದಶಕದಲ್ಲಿ ಅದು ಚೀನಾವನ್ನೂ ಅಭಿವೃದ್ಧಿಯಲ್ಲಿ ಹಿಂದಿಕ್ಕಲಿದೆ. ಇದೇ ಕಾರಣದಿಂದ ಮುಂದಿನ ದಶಕಗಳು ಭಾರತದ್ದಾಗಿದ್ದು, ಇಲ್ಲಿನ ದುಡಿಯುವ ಕೈಗಳು ಜಗತ್ತಿನ ಪಾಲಿಗೆ ಭರವಸೆಯ ಕಿರಣಗಳಾಗಿ ಹೊಮ್ಮಲಿವೆ. ಈ ಹಿಂದೆ ಎರಡು ಬಾರಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾದಾಗಲೂ ಭಾರತಕ್ಕೆ ಅದರ ಬಿಸಿ ತಟ್ಟಿರಲಿಲ್ಲ. ಈ ಬಾರಿ ವಿಶ್ವದ ಹಲವು ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದರೂ ಭಾರತ ಯಥಾಸ್ಥಿತಿಯಲ್ಲಿದೆ ಎಂಬುದು ಮಹತ್ವದ ಅಂಶ. ಕೇಂದ್ರ ಸರ್ಕಾರದ ಹಲವಾರು ದೃಢ ಕ್ರಮಗಳು ಈ ಉನ್ನತಿಯ ಹಿಂದೆ ಇವೆ. ಕಳೆದ ಒಂದು ದಶಕದಿಂದ ದೇಶದ ವಿತ್ತ ವಲಯದಲ್ಲಿ ಮಾಡಿದ ಸುಧಾರಣೆಗಳು, ಡಿಜಿಟಲ್‌ ಪಾವತಿ ಹಾಗೂ ಜನಧನ್‌ನಂಥ ಉಪಕ್ರಮಗಳು, ಗ್ಯಾಸ್‌ ಸಬ್ಸಿಡಿ, ಉಚಿತ ವಿದ್ಯುತ್‌ನಂಥ ಯೋಜನೆಗಳು, ಸುಸ್ಥಿರ ಇಂಧನ ಬಳಕೆ, ಗಡಿಯಲ್ಲಿ ಸುಭದ್ರತೆಯ ಭರವಸೆ ಇತ್ಯಾದಿಗಳು ಎಕಾನಮಿಗೆ ಮಹತ್ವದ ಕೊಡುಗೆ ನೀಡಿವೆ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ: Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

Exit mobile version