Site icon Vistara News

ವಿಸ್ತಾರ ಸಂಪಾದಕೀಯ: ಇರಾನ್ -‌ ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ

iran- israel

ಇಸ್ರೇಲ್‌ ಹಾಗೂ ಇರಾನ್‌ ನಡುವೆ ಶತ್ರುತ್ವ ಬಿಗಡಾಯಿಸಿದ್ದು, ಯುದ್ಧಾತಂಕ ತಲೆದೋರಿದೆ. ಸಹಜವಾಗಿಯೇ ಮಿತ್ರರಾಷ್ಟ್ರ ಇಸ್ರೇಲ್‌ ಜೊತೆಗೆ ಅಮೆರಿಕ ನಿಂತಿದ್ದು, ಇಸ್ರೇಲ್‌ ಮೇಲೆ ದಾಳಿ ನಡೆಸದಂತೆ ಇರಾನ್‌ಗೆ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ಇರಾನ್ ಸೇನೆ ದಾಳಿ ಮಾಡುವ ಸಾಧ್ಯತೆ ಇದ್ದು, ಅಲರ್ಟ್ ಆಗಿರಿ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಅಮೆರಿಕದ ಅಧ್ಯಕ್ಷರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಸೂಕ್ಷ್ಮ ವಾತಾವರಣ ಸೃಷ್ಟಿ ಮಾಡಿದೆ. “ಯುದ್ಧದಲ್ಲಿ ಇಸ್ರೇಲ್ ಪರ ನಮ್ಮ ಬೆಂಬಲ. ಇಸ್ರೇಲ್‌ಗೆ ಬೇಕಾದ ಎಲ್ಲ ಸಹಾಯ ಮಾಡಲಿದ್ದೇವೆ. ಯುದ್ಧ ನಡೆಸಿದರೆ ಇರಾನ್ ಗೆಲುವು ಪಡೆಯಲಾರದು” ಎಂದಿದ್ದಾರೆ. ಇದರ ನಡುವೆ ಇನ್ನಷ್ಟು ಬೆಳವಣಿಗೆಗಳು ಆಗಿವೆ. ಭಾರತ ಕೂಡ, ಇರಾನ್‌ ಹಾಗೂ ಇಸ್ರೇಲ್‌ಗಳಿಗೆ ಪ್ರಯಾಣಿಸದಂತೆ, ಅಲ್ಲಿರುವವರು ಎಚ್ಚರಾಗಿರುವಂತೆ ಸೂಚನೆ ನೀಡಿದೆ. ಈ ಮಧ್ಯೆ ಯುಎಇ ಕರಾವಳಿಯಲ್ಲಿ ಇಸ್ರೇಲ್‌ ಮೂಲದ ಕಂಟೈನರ್ ಹಡಗೊಂದನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ವಶಪಡಿಸಿಕೊಂಡಿದೆ. ಅದರಲ್ಲಿರುವ 25 ಸಿಬ್ಬಂದಿ ಪೈಕಿ 17 ಮಂದಿ ಭಾರತೀಯರು. ಹೀಗಾಗಿ ಇಲ್ಲಿನ ಯಾವುದೇ ಬೆಳವಣಿಗೆಗಳು ಭಾರತಕ್ಕೂ ಆತಂಕಕಾರಿಯಾಗಿವೆ.

11 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್‌ನ ದೂತಾವಾಸ ಕಚೇರಿ ಮೇಲೆ ದಾಳಿ ನಡೆಸಿದ ಇಸ್ರೇಲ್ ಕ್ರಮವನ್ನು ಖಂಡಿಸಿ ಇರಾನ್ ಯುದ್ಧ ಪ್ರಾರಂಭಿಸಲು ಮುಂದಾಗಿದೆ. ಈಗಾಗಲೇ ಇರಾನ್‌ ಪ್ರೇರಿತ ಹೆಜ್ಬೊಲ್ಲಾ ಉಗ್ರರು ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ಶುರು ಮಾಡಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ 13 ಮಂದಿ ಮೃತಪಟ್ಟಿದ್ದರು. ಅದರಲ್ಲಿ ಇರಾನ್ ಸೈನ್ಯದ ಹಲವು ಅಧಿಕಾರಿಗಳೂ ಇದ್ದರು. ಇಸ್ರೇಲ್‌ನ ಕ್ರಮಕ್ಕೆ ಪ್ರತೀಕಾರವಾಗಿ ಶೀಘ್ರದಲ್ಲೇ ಇಸ್ರೇಲ್‌ನ ಮೇಲೆ ಇರಾನ್‌ ದಾಳಿ ನಡೆಸಲಿದೆ ಎನ್ನಲಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವನ್ನು ತಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಚೀನಾ, ಟರ್ಕಿ, ಸೌದಿ ಅರೇಬಿಯಾ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಇರಾನ್‌ಗೆ ಇಸ್ರೇಲ್ ಮೇಲೆ ದಾಳಿ ನಡೆಸದಂತೆ ಪ್ರಯತ್ನಿಸಲು ಹೇಳಿದ್ದಾರೆ. ಆದರೆ ಇದು ಫಲ ನೀಡುವುದು ಕಷ್ಟ.

ಭಾರತದ ರಾಜನೀತಿಯು ಇಸ್ರೇಲ್‌ ಹಾಗೂ ಅಮೆರಿಕದ ಕಡೆಗೆ ಹೆಚ್ಚು ವಾಲಿಕೊಂಡಿದೆ. ಹಾಗಂತ ಇರಾನ್‌ ಕೂಡ ಭಾರತದ ವೈರಿ ದೇಶ ಏನಲ್ಲ. ಹಾಗಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಇಸ್ರೇಲ್‌-ಇರಾನ್‌ ಯುದ್ಧ ತಡೆಯಲು ಭಾರತ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಬಹುದು. ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಒಂದೊಮ್ಮೆ ಇಸ್ರೇಲ್‌-ಇರಾನ್‌ ನಡುವೆ ಯುದ್ಧ ಸ್ಫೋಟಗೊಂಡರೆ ಇದರ ಮೊದಲ ಪರಿಣಾಮ ಬೀರುವುದು ತೈಲ ದರದ ಮೇಲೆ. ವಿಶ್ವದಲ್ಲಿ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ತೈಲ ಪೂರೈಕೆ ಜಾಲ ಏರುಪೇರಾಗುತ್ತದೆ. ಅದರಲ್ಲೂ ಇರಾನ್‌ ತೈಲ ಪೂರೈಸುವ ಪ್ರಮುಖ ರಾಷ್ಟ್ರ ಆಗಿರುವುದರಿಂದ, ಯುದ್ಧ ಸಂಭವಿಸಿದರೆ ತೈಲ ದರ ಏರಿಕೆ ಆಗುವ ಅಪಾಯವಿದೆ. ಇದು ಇತರ ಎಲ್ಲ ಕಡೆಗಳಿಗೂ ವ್ಯಾಪಿಸಿ, ಎಲ್ಲ ರಂಗಗಳಲ್ಲಿಯೂ ಹಣದುಬ್ಬರ ಆಗುವಂತೆ ಮಾಡುತ್ತದೆ. ಮಧ್ಯಾಪ್ರಾಚ್ಯದಲ್ಲಿ ಸಾಕಷ್ಟು ಭಾರತೀಯರು ಬದುಕು ಕಂಡುಕೊಂಡಿದ್ದಾರೆ. ಇವರ ಬದುಕಿಗೂ ಸಂಕಷ್ಟ ಒದಗುವ ಸಾಧ್ಯತೆ ಇದೆ.

ಇದನ್ನೂ ಓದಿ: United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

ರಷ್ಯಾ ಹಾಗೂ ಉಕ್ರೇನ್‌ ಯುದ್ಧ ಆರಂಭದ ಸಮಯದಲ್ಲಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಈ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, “ಈ ಕಾಲ ಯುದ್ಧದ ಕಾಲವಲ್ಲ” ಎಂದು ಹೇಳಿದ್ದರು. ಅಂದರೆ ಆಧುನೀಕರಣ, ಜಾಗತೀಕರಣದ ಈ ಕಾಲದಲ್ಲಿ ಎಲ್ಲ ದೇಶಗಳೂ ಒಂದರ ಜೊತೆಗೊಂದು ಹೆಣೆದುಕೊಂಡಿವೆ. ಉಕ್ರೇನ್‌ನಲ್ಲಿ ಅಥವಾ ಇಸ್ರೇಲ್‌ನಲ್ಲಿ ಆಗುವ ಸಣ್ಣ ಚಲನೆಯೂ ಇಡೀ ಜಗತ್ತಿನಲ್ಲಿ ಬದಲಾವಣೆಯನ್ನು ಉಂಟುಮಾಡಬಹುದಾದಂಥದು. ಇರಾನ್‌ ದಶಕಗಳ ಹಿಂದೆ ಇರಾಕ್‌ ಜೊತೆಗೆ ನಡೆಸಿದ ಯುದ್ಧದ ಸಂದರ್ಭ ಕೂಡ ಜಾಗತಿಕವಾಗಿ ತೈಲಬೆಲೆ ಉಲ್ಬಣ, ಹಣದುಬ್ಬರ ಉಲ್ಬಣ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಿತ್ತು. ರಷ್ಯಾ- ಉಕ್ರೇನ್‌ ಯುದ್ಧದಿಂದಾಗಿಯೂ ಹಲವು ವಾಣಿಜ್ಯ ವಹಿವಾಟುಗಳಿಗೆ ಧಕ್ಕೆಯಾಗಿದೆ. ಹೀಗೆ, ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಯುದ್ಧವು ಎಲ್ಲ ಕಡೆಗೂ ಕರಾಳ ಛಾಯೆಯನ್ನು ಸೃಷ್ಟಿಸುತ್ತದೆ. ಹೀಗಾಗಿ, ಎಲ್ಲ ದೇಶಗಳೂ ವಿವೇಕವನ್ನು ಬಳಸಿ ಈ ಯುದ್ಧವನ್ನು ತಪ್ಪಿಸಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕೂಡ ಮುಂದಾಗಬೇಕು.

Kangana Ranaut

Exit mobile version