Site icon Vistara News

ವಿಸ್ತಾರ ಸಂಪಾದಕೀಯ: ರಾಜಕಾರಣಿಗಳಿಗೆ ಮಾತಿನ ಮೇಲೆ ನಿಯಂತ್ರಣ ಇರಲಿ

political fight

ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ವಾದ-ವಾಗ್ವಾದ, ಟೀಕೆ, ವ್ಯಂಗ್ಯ, ಆರೋಪಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಕೆಲವು ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ವಿವಾದಾತ್ಮಕ- ಅಸಭ್ಯ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಣದೀಪ್‌ ಸುರ್ಜೇವಾಲಾ (Randeep Surjewala) ಅವರು ಹೇಮಾಮಾಲಿನಿ (Hema Malini) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಹೇಮಾಮಾಲಿನಿಯನ್ನು ನೆಕ್ಕಲು ಬಿಜೆಪಿಯವರು ಟಿಕೆಟ್‌ ಕೊಡುತ್ತಾರೆ” ಎಂಬುದಾಗಿ ರಣದೀಪ್‌ ಸುರ್ಜೇವಾಲಾ ನೀಡಿದ ಹೇಳಿಕೆಯನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದೆ. ಕಾರ್ಯಕ್ರಮವೊಂದರಲ್ಲಿ ರಣದೀಪ್‌ ಸುರ್ಜೇವಾಲಾ ಅವರು ಮಾತನಾಡಿದ್ದು, “ಶಾಸಕ, ಸಂಸದರನ್ನು ನಮ್ಮ ಪರ ಧ್ವನಿ ಎತ್ತಲು ಆಯ್ಕೆ ಮಾಡಲಾಗುತ್ತದೆ. ಆದರೆ, ಹೇಮಾಮಾಲಿನಿಯವರನ್ನು ನೆಕ್ಕಲು ಬಿಜೆಪಿಯವರು ಸಂಸದೆಯನ್ನಾಗಿ ಮಾಡುತ್ತಿದ್ದಾರೆಯೇ” ಎಂಬುದಾಗಿ ಹೇಳಿದ್ದಾರೆ ಎಂದು ಬಿಜೆಪಿಯು ವಿಡಿಯೊ ಹಂಚಿಕೊಂಡಿದೆ. “ಇದು ಎಲ್ಲ ಹೆಣ್ಣು ಮಕ್ಕಳನ್ನು ಅವಮಾನಿಸುವ ಕಮೆಂಟ್”‌ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಟೀಕಿಸಿದ್ದು, “ಮತ್ತೊಬ್ಬ ಕಾಂಗ್ರೆಸ್‌ ನಾಯಕ, ಬಿಜೆಪಿ ನಾಯಕಿಯ ರೇಟ್‌ ಕೇಳಿದ್ದರು” ಎಂದೂ ಆರೋಪಿಸಿದ್ದಾರೆ.

ಇವೆಲ್ಲರೂ ರಾಜಕೀಯ ನಾಯಕರ ಬಗ್ಗೆಯೇ ಅಸಹ್ಯ ತರಿಸುವ ವೈಖರಿಯ ಮಾತುಗಳಾಗಿವೆ. ಛತ್ತೀಸ್‌ಗಢದಲ್ಲಿ ಚರಣ್‌ ದಾಸ್‌ ಮಹಂತ್‌ ಎಂಬ ಕಾಂಗ್ರೆಸ್‌ ನಾಯಕ ಇನ್ನೂ ಮುಂದೆ ಹೋಗಿ, “ಮೋದಿಯವರ ತಲೆಯನ್ನು ಲಾಠಿಯಿಂದ ಚೆನ್ನಾಗಿ ಬಾರಿಸುವಂಥ ವ್ಯಕ್ತಿಗಳು ನಮಗೆ ಬೇಕಾಗಿದ್ದಾರೆ” ಎಂದು ಹೇಳಿದ್ದಾನೆ. ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ ಮೋಹನ ರೆಡ್ಡಿ ಅವರನ್ನು “ರಾಕ್ಷಸ” ಮತ್ತು “ಮೃಗ” ಎಂದು ಕರೆದದ್ದಕ್ಕಾಗಿ ಚುನಾವಣಾ ಆಯೋಗ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ನೋಟೀಸ್ ನೀಡಿದೆ.‌2022ರಲ್ಲಿ ಮಧ್ಯಪ್ರದೇಶದ ಇನ್ನೊಬ್ಬ ಕಾಂಗ್ರೆಸ್‌ ನಾಯಕ “ಸಂವಿಧಾನವನ್ನು ಉಳಿಸಲು ಮೋದಿಯನ್ನು ಸಾಯಿಸಬೇಕಿದೆ” ಎಂದು ಹೇಳಿದ್ದು, ಕಾನೂನು ಕ್ರಮ ಎದುರಿಸುತ್ತಿದ್ದಾನೆ. ಇವು ನೇರವಾಗಿ ದ್ವೇಷ ಭಾಷಣಗಳು; ಮೊದಲು ಹೇಳಿದ ಮಾತುಗಳು ಸಾರ್ವಜನಿಕ ಸಭ್ಯತೆಯನ್ನು ಮರೆತ ಮಾತುಗಳು. ಎರಡೂ ಅಪಾಯಕಾರಿ; ಪ್ರಚೋದನಕಾರಿ ಹಾಗೂ ಕಠಿಣ ಕಾನೂನು ಕ್ರಮಕ್ಕೆ ಅರ್ಹವಾಗಿವೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಜೋರಾಗುವುದು ಸಹಜ. ಆದರೆ ಅದು ಮಿತಿಯನ್ನು ಮೀರಿ ಅಶ್ಲೀಲವಾಗಿ ಬೈದಾಡಿಕೊಳ್ಳುತ್ತಿರುವುದು, ಎದುರಿನವರ ಮೇಲೆ ದ್ವೇಷ ಸೃಷ್ಟಿಸುವಂತಿರುವುದು ವಿಷಾದಕರ. ವಾಗ್ದಾಳಿಗಳು ಸಭ್ಯತೆಯ ಎಲ್ಲೆ ಮೀರದಂತಿರಬೇಕು, ಆರೋಗ್ಯಕರವಾಗಿರಬೇಕು. ವಾಚಾಮಗೋಚರವಾಗಿ ಬೈದಾಡಿಕೊಳ್ಳುವುದು ರಾಜಕೀಯ ಪಕ್ಷಗಳ ಮುಖಂಡರಿಗೆ ಖಂಡಿತ ಶೋಭೆ ತರದು. ಎಲ್ಲೆ ಮೀರಿದಾಗ ಇವು ಕೋರ್ಟ್‌ ಅಂಗಳವನ್ನೂ ಪ್ರವೇಶಿಸಬಹುದು. ಆಗ ನ್ಯಾಯಾಂಗದಿಂದ ಪಾಠ ಹೇಳಿಸಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಕೂಡ ಒಂದು ಪ್ರಕರಣದಲ್ಲಿ, ದ್ವೇಷ ಭಾಷಣ ಮಾಡುವವರು ಯಾರೇ ಆಗಿದ್ದರೂ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳುವಂತೆ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಪೊಲೀಸರಿಗೆ ಆದೇಶಿಸಿತ್ತು. ರಾಜಕಾರಣಿಗಳು ಹಾಗೂ ಉನ್ನತ ಸ್ಥಾನದಲ್ಲಿರುವವರು ಅನ್ಯರ ಬಗ್ಗೆ ಮಾನಹಾನಿಕರವಾದ ಮಾತುಗಳನ್ನು ಆಡಬಾರದು ಎಂದು ನಿರ್ದೇಶಿಸಿತ್ತು. ಇದು ಕೋರ್ಟ್‌ ಹೇಳದೆಯೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕಾದ ಮಾತು.

2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ಸರದಾರʼ ಎಂದು ಕರೆದಿದ್ದರು. 2017ರಲ್ಲಿ ಮಣಿಶಂಕರ ಅಯ್ಯರ್ಅವರು ಮೋದಿಯವರನ್ನು ʼನೀಚʼ ಎಂದು ಕರೆದಿದ್ದರು. ಗುಜರಾತ್‌ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿವೆ. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳುವ ಜನನಾಯಕರು ಇಂಥ ಬೈಗುಳಗಳನ್ನು ತಮ್ಮ ಎದುರಾಳಿಗೆ ಬಳಸಲಾರರು. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ. ಅವಹೇಳನ, ದ್ವೇಷ, ರೋಷಾವೇಷವಿಲ್ಲದೆಯೂ ರಾಜಕೀಯ ಪಕ್ಷಗಳು ಪರಸ್ಪರ ಪರಿಣಾಮಕಾರಿಯಾಗಿ ಆರೋಪ ಪ್ರತ್ಯಾರೋಪ ಮಾಡಲು ಸಾಧ್ಯವಿದೆ. ಎದುರಾಳಿಯನ್ನು ಎದುರಿಸುವುದರಲ್ಲೂ ಇಂಥ ಘನತೆ ಇರಬೇಕು. ಚುನಾವಣೆ ಸಂದರ್ಭದಲ್ಲಿ ಸರ್ಕಾರದ ಪ್ರಗತಿ, ಭ್ರಷ್ಟಾಚಾರ, ಸಾಧನೆ, ವೈಫಲ್ಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ಆಗಬೇಕು. ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಿದೆಯೇ ಇಲ್ಲವೇ ಎಂದು ಪ್ರತಿಪಕ್ಷ ವಿಮರ್ಶಿಸಬೇಕು. ತಾನು ಮಾಡಿರುವ ಕೆಲಸಗಳಿಗೆ ಆಡಳಿತ ಪಕ್ಷ ಕನ್ನಡಿ ಹಿಡಿಯಬೇಕು, ಪ್ರತಿಪಕ್ಷದ ವೈಫಲ್ಯಗಳನ್ನು ಸಾಣೆಗೆ ಹಿಡಿಯಬೇಕು. ಎದುರಾಳಿಯನ್ನು ವೈಯಕ್ತಿಕವಾಗಿ ದೂರುವ, ಅವಹೇಳನ ಮಾಡುವ, ಪಾಠ ಕಲಿಸಲು ಕರೆ ಕೊಡುವ ಅಗತ್ಯವೇ ಇಲ್ಲ. ಆಗ ಮಾತ್ರ ರಾಜಕೀಯ ವಾಗ್ವಾದಗಳು ಅರ್ಥಪೂರ್ಣವಾಗುತ್ತವೆ.

Exit mobile version