Site icon Vistara News

ವಿಸ್ತಾರ ಸಂಪಾದಕೀಯ: ರಾಜ್ಯದಲ್ಲಿ ಕೊಲೆಗಳ‌ ಸರಮಾಲೆ; ಪೊಲೀಸ್ ಇಲಾಖೆ ಯಾಕಿಷ್ಟು‌ ದುರ್ಬಲವಾಗಿದೆ?

Karnataka Police

Series Of Murders In Karnataka; Why Is State Police So Weak?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National crime records bureau- NCRB) ಇತ್ತೀಚೆಗಿನ ಅಪರಾಧಗಳ ಅಂಕಿ ಅಂಶವನ್ನು ಪ್ರಕಟಿಸಿದ್ದು, ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳ (crimes) ಸಂಖ್ಯೆ ಮಿತಿ ಮೀರಿ ಹೆಚ್ಚಿರುವುದು ಕಂಡುಬಂದಿದೆ. ರಾಜ್ಯದಲ್ಲಿ ಕಳೆದ ಜನವರಿಯಿಂದ ಏಪ್ರಿಲ್‌ವರೆಗೆ ಏರಿಕೆ ಪ್ರಮಾಣದಲ್ಲಿ ಕೊಲೆ (murder), ಅತ್ಯಾಚಾರ (physical abuse), ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು (Pocso) ನಡೆದಿವೆ. 2024ರ ಜನವರಿಯಿಂದ ಏಪ್ರಿಲ್ 30ರವರೆಗೆ ಅಂದರೆ 4 ತಿಂಗಳಲ್ಲಿ ಸುಮಾರು 430 ಕೊಲೆಗಳು (Murder), 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2327 ಮಹಿಳೆಯರ ಮೇಲೆ ದೌರ್ಜನ್ಯ, 1262 ಮಕ್ಕಳ ಮೇಲೆ ದೌರ್ಜನ್ಯ, 7421 ಸೈಬರ್ ಕ್ರೈಂ, 450 ರಾಬರಿಗಳು ಸಂಭವಿಸಿವೆ. ಲೈಂಗಿಕ ದೌರ್ಜನ್ಯ ಹಾಗೂ ಸೈಬರ್ ವಂಚನೆ (cyber crime) ಗಗನಕ್ಕೆ ಏರಿವೆ. ಹಲ್ಲೆ, ಮಾರಣಾಂತಿಕ ಹಲ್ಲೆ ಕೇಸ್‌ಗಳು ಅಧಿಕವಾಗುತ್ತಾ ಸಾಗುತ್ತಿವೆ. ಇದು ಆತಂಕಕ್ಕೆ ಕಾರಣವಾಗಿದೆ.

ಎಂದಿನಂತೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಈ ಅಸ್ತ್ರವನ್ನು ಹಿಡಿದುಕೊಂಡು ಸರ್ಕಾರದ ಮೇಲೆ ದಾಳಿಗೆ ಇಳಿದಿವೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡೊಂಬೊಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ. ರಾಜ್ಯ ಗೃಹ ಇಲಾಖೆ ಎನ್ನುವುದು ಕೆಲಸ ಮಾಡುತ್ತಿದೆಯಾ?” ಎಂದು ವಿಪಕ್ಷ ನಾಯಕರು ಟೀಕಿಸಿದ್ದಾರೆ. ಜನಸಾಮಾನ್ಯರ ಮನದಲ್ಲಿರುವ ಪ್ರಶ್ನೆಯನ್ನೇ ಅವರು ಕೇಳಿದ್ದಾರೆ ಎನ್ನಬೇಕು. ಈ ಪ್ರಶ್ನೆಯನ್ನು ಕೇಳಿ ಅರ್ಧದಲ್ಲೇ ಕೈಬಿಡಬಾರದು. ಇದನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತ ಪ್ರಯತ್ನಿಸಬೇಕು. ಗೃಹ ಸಚಿವರು, ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಬೇಕು.

ಆದರೆ ಗೃಹ ಸಚಿವರು ಇದನ್ನು ಒಂದು ವಿಷಯವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. “ಒಂದೊಂದು ಘಟನೆಗೂ ಒಂದೊಂದು ಕಾರಣ ಅಂತ ಇರುತ್ತದೆ. ಅವರ (ಪ್ರತಿಪಕ್ಷದ) ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತೆ ಹೇಳಿದರೆ ಯಾವ ಸರ್ಕಾರದಲ್ಲಿ ಸುರಕ್ಷತೆ ಇತ್ತು ಅನ್ನೋದು ತಿಳಿಯುತ್ತೆ” ಎಂದಿದ್ದಾರೆ. “ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಇವರನ್ನು ಹೇಳ್ಕೊಂಡು, ಕೇಳ್ಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡೋಕೆ ಆಗೊಲ್ಲ. ಏನು ಕ್ರಮ ಬೇಕಾದ್ರೂ ತಗೊಳ್ತೇವೆ” ಎಂದಿದ್ದಾರೆ. ಇದು ಒಬ್ಬರು ಇನ್ನೊಬ್ಬರ ಮೇಲೆ ದೂರು ಹಾಕಿ ಮುಗಿಸಬೇಕಾದ ಸಂಗತಿಯಲ್ಲ. ಯಾರೂ ಇಂಥ ವಿಚಾರಗಳಲ್ಲಿ ಸುಮ್ಮಸುಮ್ಮನೆ ಆರೋಪ ಮಾಡುವುದಿಲ್ಲ. ಮೇಲಾಗಿ, ಇದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒದಗಿಸಿದ ಅಂಕಿಸಂಖ್ಯೆಗಳನ್ನು ಆಧರಿಸಿದೆ. ಹೀಗಾಗಿ ಆಳುವವರು ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ.

ಈ ಅಪರಾಧಗಳ ನಡುವೆ ಎದ್ದು ಕಾಣಿಸುತ್ತಿರುವುದು, ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹೆಚ್ಚಳ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ, ಕೊಡಗಿನ ಮೀನಾ ಕೊಲೆ ಪ್ರಕರಣಗಳು ಇದಕ್ಕೆ ಇತ್ತೀಚಿನ ನಿದರ್ಶನಗಳಾಗಿವೆ. ಇನ್ನೂ ಹತ್ತು ಹಲವನ್ನು ಉದಾಹರಿಸಬಹುದು. ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದವನು ಅಂಜಲಿ ಕೊಲೆ ಮಾಡಿದವನು, ತಾನು ನೇಹಾ ಕೊಲೆ ಮಾದರಿಯಲ್ಲಿ ಕೊಲ್ಲುತ್ತೇನೆ ಎಂದು ಮೊದಲೇ ಹೇಳಿಯೇ ಇದನ್ನು ಮಾಡುತ್ತಾನೆ. ಇದನ್ನು ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುವುದಿಲ್ಲ. ಅಂದರೆ ಇಲ್ಲಿ ಪೊಲೀಸರು ಎಷ್ಟು ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಅಂದಾಜು ಸಿಗುತ್ತದೆ. ಬಡವರು ಅನ್ಯಾಯಕ್ಕೊಳಗಾದರೆ ಕೇಳುವವರೇ ಇಲ್ಲವೇ? ಇಲ್ಲಿ ಪ್ರಜ್ವಲ್‌ ರೇವಣ್ಣನಂಥ ಪ್ರಭಾವಿ ಅಪರಾಧಿಗಳನ್ನು ರಾಜಕೀಯ ಕಾರಣಗಳಿಗಾಗಿ ಬೆನ್ನು ಹತ್ತಲಾಗುತ್ತದೆ; ಆದರೆ ಶ್ರೀಸಾಮಾನ್ಯರಿಗೆ ಇಲ್ಲಿ ಯಾವ ರಕ್ಷಣೆಯೂ ಇಲ್ಲವೇ? ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನೂರಾರು ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿದೆ. ನೂರಾರು ಕುಟುಂಬಗಳನ್ನು ಛಿದ್ರಗೊಳಿಸುವಂತಹ ಇಂಥ ಅಪರಾಧಿಗಳ ಮೇಲೆ ಯಾವ ಕ್ರಮವೂ ಇಲ್ಲ! ಬದಲಾಗಿ ಅವರನ್ನು ರಕ್ಷಿಸಲಾಗುತ್ತಿದೆ.

ಇವೆಲ್ಲವೂ ಅಪಾಯಕಾರಿ ಬೆಳವಣಿಗೆ. “ಹೆಣ್ಣು ನಡುರಾತ್ರಿಯಲ್ಲಿ ಒಬ್ಬಳೇ ಓಡಾಡುವಂತಾದರೆ ದೇಶ ಸ್ವತಂತ್ರವಾದುದಕ್ಕೆ ಸಾರ್ಥಕ” ಎಂದು ಗಾಂಧೀಜಿ ಹೇಳಿದ್ದರಂತೆ. ನಡುರಾತ್ರಿಯಲ್ಲಿ ಬೇಡ, ನಡುಹಗಲಿನಲ್ಲಾದರೂ ಸುರಕ್ಷಿತವಾಗಿ ಓಡಾಡುವಂತಾದರೆ ಸಾಕು! ಕಾಲೇಜಿಗೆ ಹೋಗುವುದು, ಮನೆಯಲ್ಲಿರುವುದು ಮುಂತಾದ ಸರಳ ಕ್ರಿಯೆಗಳ ಸಂದರ್ಭದಲ್ಲಿ ಕೂಡ ಪಾತಕಿಗಳು ದಾಳಿ ನಡೆಸುತ್ತಾರೆ ಎಂದರೆ ಏನು ಹೇಳೋಣ? ಬೆಂಗಳೂರಿನ ಬೀದಿಗಳಲ್ಲಿ ರೌಡಿ ಶೀಟರ್‌ಗಳು ಯಾರ ಭಯವಿಲ್ಲದೆ ಗ್ಯಾಂಗ್‌ ಕಟ್ಟಿಕೊಂಡು ಹೊಡೆದಾಡುವುದು, ಸರ ಎಗರಿಸುವುದು, ಹಲ್ಲೆ, ಬೈಕ್‌ ವ್ಹೀಲಿಂಗ್‌ ನಡೆಸುತ್ತಿದ್ದಾರೆ. ಗೃಹ ಇಲಾಖೆ ದುರ್ಬಲವಾದಾಗ, ಪುಂಡರಿಗೆ ರಾಜಕಾರಣಿಗಳೇ ಕುಮ್ಮಕ್ಕು ನೀಡಿದಾಗ ಇಂಥ ಪ್ರವೃತ್ತಿ ಹೆಚ್ಚುತ್ತದೆ. ಇದಕ್ಕೆ ಈಗಲೇ ಕಡಿವಾಣ ಹಾಕದೆ ಹೋದರೆ ಮುಂದಿನ ದಿನಗಳ ದುರ್ಭರವಾಗಲಿವೆ.

ಇದನ್ನೂ ಓದಿ: Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Exit mobile version