Site icon Vistara News

ವಿಸ್ತಾರ ಸಂಪಾದಕೀಯ: ಭಯೋತ್ಪಾದಕನಿಗೆ ಶ್ರದ್ಧಾಂಜಲಿ; ಕೆನಡಾ ಸಂಸತ್ ನ ಮೂರ್ಖತನ

Canada

Vistara Editorial: A Tribute to a Terrorist; Stupidity of the Parliament of Canada

ಕೆನಡಾದಲ್ಲಿದ್ದ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಖಲಿಸ್ತಾನಿ ಪರ ಹೋರಾಟಗಾರ (Khalistani Terrorist) ಹರ್ದೀಪ್‌ ಸಿಂಗ್‌ ನಿಜ್ಜಾರ್‌ (Nijjar Killing Case)ನ ಹತ್ಯೆಗೈದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಒಂದು ನಿಮಿಷ ಮೌನ ಆಚರಿಸಿ ಆತನಿಗೆ ಗೌರವ ಸಲ್ಲಿಸಿದೆ. ಕಳೆದ ವರ್ಷ ಜೂನ್‌ 18ರಂದು ಕೆನಡಾದ ಸುರ‍್ರೆ ನಗರದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಎದ್ದು ನಿಂತು, ಮೌನ ಆಚರಿಸಿತು. ಇದೊಂದು ವಿಚಿತ್ರ ಬೆಳವಣಿಗೆ. ಹಾಗೆಯೇ ಕೆನಡಾದ ಉದ್ಧಟತನಕ್ಕೆ ಇದು ಸಾಕ್ಷಿ ಕೂಡ. ಭಯೋತ್ಪಾದನೆ ಎಂದರೇನು ಎಂದು ಗೊತ್ತಿಲ್ಲದ, ಖಲಿಸ್ತಾನಿ ಉಗ್ರವಾದದ ರುಚಿ ಕಂಡಿಲ್ಲದ ಕೆನಡಾದಂಥ ದೇಶದ ಮೂರ್ಖ ಆಡಳಿತಗಾರರು ಮಾತ್ರ ಮಾಡಬಹುದಾದ ಸಂಗತಿ ಇದು.

ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆಯನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ನನ್ನು ಕೆನಡಾದ ಸುರ‍್ರೆ ನಗರದಲ್ಲಿ ಕೊಲೆ ಮಾಡಲಾಗಿತ್ತು. ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನ ಹತ್ಯೆ ನಡೆದಿತ್ತು. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿದೆ. ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿತ್ತು. ಇಂಥ ಉಗ್ರನ ಹತ್ಯೆಯಾದರೆ ಕೆನಡಾಕ್ಕೆ ಯಾಕೆ ಹೊಟ್ಟೆನೋವು?

ಖಲಿಸ್ತಾನಿ ಉಗ್ರರಿಗೆ ಕೆನಡಾ ಹುಲುಸಾದ ನೆಲ. ಇಲ್ಲಿರುವ ಭಾರಿ ಪ್ರಮಾಣದ ಸಿಕ್ಖ್‌ ವಲಸಿಗರಲ್ಲಿ ಹಲವು ಪ್ರತ್ಯೇಕತಾವಾದಿಗಳು ಇದರ ಪೋಷಕರು. ಈ ಶ್ರೀಮಂತರ ಹಣಕ್ಕೆ ಆಸೆಪಡುತ್ತಿರುವ ಕೆನಡಾದ ಆಡಳಿತಗಾರರು ಈ ಖಲಿಸ್ತಾನಿ ಚಳವಳಿಯ ಪೋಷಕರೂ ಆಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ನಿಜ್ಜಾರ್‌ ಹತ್ಯೆಗೂ ಮೊದಲು ಖಲಿಸ್ತಾನಿ ಉಗ್ರ, ಬಂಧಿತ ಅಮೃತ್‌ಪಾಲ್‌ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್‌ ಸಿಂಗ್‌ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಅಮೃತ್‌ಪಾಲ್‌ ಸಿಂಗ್‌ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವುದು, ಭಾರತೀಯ ರಾಯಭಾರಿಗಳನ್ನು ಬೆದರಿಸುವುದು ಇವರ ಮುಖ್ಯ ಉದ್ಯೋಗ.

ಭಾರತದಲ್ಲಿ ದಶಕಗಳ ಹಿಂದೆ ಉಲ್ಬಣಗೊಂಡು ಇದೀಗ ಉಪಶಮನಗೊಂಡಿರುವ ಹುಣ್ಣನ್ನು ಕೆರೆದು ಮತ್ತೆ ಉಲ್ಬಣಗೊಳಿಸುವ ಕೆಲಸವನ್ನು ಕೆನಡಾ ಮಾಡುತ್ತಿದೆ. ಒಂದು ಕಾಲದಲ್ಲಿ ಅಮೃತಸರದ ಸ್ವರ್ಣಮಂದಿರವನ್ನು ಅಪವಿತ್ರಗೊಳಿಸಿದ, ಖಲಿಸ್ತಾನ್‌ ಚಳವಳಿಯ ಹೆಸರಲ್ಲಿ ಪಂಜಾಬ್‌ನ ಯುವಜನತೆಯ ಮನಸ್ಸುಗಳನ್ನು ಕೆಡಿಸಿ ಸರ್ವನಾಶ ಮಾಡಿದ ಭಿಂದ್ರಾನ್‌ವಾಲೆಯ ಸಂತಾನಗಳು ಇಂದಿಗೂ ಕೆನಡಾದ ನೆಲದಲ್ಲಿ ಆಶ್ರಯ ಪಡೆದಿವೆ. ಇಂಥ ಡಜನ್‌ಗೂ ಹೆಚ್ಚು ಉಗ್ರರ ಹೆಸರನ್ನು ಭಾರತ ಸರ್ಕಾರ ಕೆನಡಾಗೆ ನೀಡಿದ್ದು, ಅವರನ್ನು ತಮಗೊಪ್ಪಿಸುವಂತೆ ಹೇಳಿದೆ. ಆದರೆ ಅವರು ಕೆನಡಾದ ಪ್ರಜೆಗಳೆಂದೂ, ಅವರ ಪ್ರತಿಭಟನೆಯ ಸ್ವಾತಂತ್ರ್ಯಕ್ಕೆ ತಾನು ಧಕ್ಕೆ ತರುವುದಿಲ್ಲವೆಂದೂ ಕೆನಡಾ ಗಳುಹುತ್ತಲೇ ಇದೆ. ʼಭಾರತ ತನ್ನ ಸಾರ್ವಭೌಮತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆʼ ಎಂದು ಪ್ರಲಾಪಿಸುತ್ತಿರುವ ಈ ದೇಶದ ಭಂಡ ನಾಯಕತ್ವದ ವೈಫಲ್ಯದಿಂದಾಗಿ, ಕಳೆದ ವರ್ಷ ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯವೂ ಹಳಸಿತ್ತು. ಪರಸ್ಪರರ ಹೈಕಮಿಶನರ್‌ಗಳನ್ನು ಹೊರಗೆ ಕಳಿಸುವವರೆಗೆ ಅದು ಹೋಗಿತ್ತು. ಇಲ್ಲೂ ಕೆನಡಾದ್ದೇ ಉಪದ್ವ್ಯಾಪ.

ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಮತ್ತು ಇತರ ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕಾದ್ದು ಏನೆಂದರೆ, ಖಲಿಸ್ತಾನಿ ಹಿಂಸಾವಾದಿಗಳನ್ನು ಮುಂದಿಟ್ಟುಕೊಂಡು ಹೊರಟರೆ ಆ ದೇಶವೇ ಹಿಂಸೆಯ ಫಲವನ್ನು ಉಣ್ಣಬೇಕಾದೀತು. ಭಯೋತ್ಪಾದಕ ಹರ್‌ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಈಗಾಗಲೇ ಪ್ರತಿಪಾದಿಸಿದೆ. ಭಯೋತ್ಪಾದಕನಿಗೆ ಗೌರವ ಸಲ್ಲಿಸುವ ಮೂಲಕ ಕೆನಡಾ ಯಾವ ಸಂದೇಶ ನೀಡಹೊರಟಿದೆ? ಆ ದೇಶವೇ ಹೇಳಬೇಕು. ಉಭಯ ದೇಶಗಳ ನಡುವೆ ಶಾಂತಿ- ಸೌಹಾರ್ದ ಸ್ಥಾಪಿಸಬಯಸುವವರು ಮಾಡುವ ಕೆಲಸವಂತೂ ಇದಲ್ಲ.

ಇದನ್ನೂ ಓದಿ: Hardeep Singh Nijjar: ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜಾರ್‌ ಹತ್ಯೆಯಾಗಿ ಒಂದು ವರ್ಷ; ಮೌನ ಆಚರಿಸಿ ಗೌರವ ಸಲ್ಲಿಸಿದ ಕೆನಡಾ ಸಂಸತ್ತು

Exit mobile version