ಕೊನೆಗೂ ಬಿಜೆಪಿಯಿಂದ ವಿರೋಧ ಪಕ್ಷದ (Opposition Leader) ನಾಯಕನ ಆಯ್ಕೆ ಅಂತಿಮವಾಗಿದೆ. ಮಾಜಿ ಡಿಸಿಎಂ ಆರ್. ಅಶೋಕ್ (R Ashok) ಅವರನ್ನು ವಿಪಕ್ಷ ನಾಯಕ ಎಂದು ಬಿಜೆಪಿ ಹೈಕಮಾಂಡ್ (BJP high command) ಘೋಷಣೆ ಮಾಡಿದೆ. ಕೇಂದ್ರದಿಂದ ಆಗಮಿಸಿದ್ದ ಬಿಜೆಪಿ ವೀಕ್ಷಕರಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹಾಗೂ ದುಷ್ಯಂತ್ ಕುಮಾರ್ ಗೌತಮ್ (Dushyant Kumar Gautam) ಅವರು ಶಾಸಕರ ಅಭಿಪ್ರಾಯವನ್ನು ಪಡೆದು ಒಮ್ಮತದ ತೀರ್ಮಾನ ಎಂದು ಪ್ರತಿಪಕ್ಷ ನಾಯಕರನ್ನಾಗಿ ಆರ್. ಅಶೋಕ್ ಹೆಸರನ್ನು ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ವಿಜಯೇಂದ್ರ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಯ ಎರಡೂ ಪ್ರಮುಖ ಹುದ್ದೆಗಳು ತುಂಬಿದಂತಾಗಿದೆ. ಪ್ರತಿಪಕ್ಷ ನಾಯಕನಿಲ್ಲದೇ ವಿಧಾನಸಭೆಯ ಮೊದಲ ಅಧಿವೇಶನವೂ ನಡೆದುಹೋಗಿತ್ತು. ಒಮ್ಮೆ ಎಚ್‌ಡಿ ಕುಮಾರಸ್ವಾಮಿ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡಲು ಬಿಜೆಪಿ ಬೆಂಬಲಿಸಲಿದೆ ಎಂದು ಮಾತೂ ಕೇಳಿಬಂದಿತ್ತು. ಎಲ್ಲದಕ್ಕೂ ತೆರೆ ಎಳೆಯುವಂತೆ ಇದೀಗ ಅಶೋಕ್ ಅವರ ಹೆಸರು ಘೋಷಣೆಯಾಗಿದೆ.
ಅಶೋಕ್ ಆಯ್ಕೆಯ ಬಗ್ಗೆ ಉತ್ತರ ಕರ್ನಾಟಕದ ನಾಯಕರಾದ ಬಸವರಾಜ ಪಾಟೀಲ್ ಯತ್ನಾಳ್ ಅವರಿಗೆ ಅಸಮಾಧಾನ ಇದ್ದಂತಿದೆ. ಆದರೆ ಇದು ಪಕ್ಷವನ್ನು ದೊಡ್ಡದಾಗಿ ಬಾಧಿಸಲಾರದು. ಯಾಕೆಂದರೆ ಅಶೋಕ್ ಅವರು ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ, ಅವರು ಬಿಎಸ್ ಯಡಿಯೂರಪ್ಪ ಅವರ ಬಣದವರೂ ಹೌದು. ಇದೀಗ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರೇ ಸೂಚಿಸಿದ ಇಬ್ಬರು ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವುದರಿಂದ ಅವರ ಪಾರುಪತ್ಯ ಮುಂದುವರಿದಂತೆಯೂ ಆಗಿದೆ. ಯಡಿಯೂರಪ್ಪನವರು ಈಗಲೂ ರಾಜ್ಯ ಬಿಜೆಪಿಯ ಸುಪ್ರೀಮ್ ಲೀಡರ್ ಆಗಿ ಮುಂದುವರಿದಿರುವುದರಿಂದ, ಅಶೋಕ್ ಆಡಳಿತಕ್ಕೆ ಬಾಧಕವಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದ ಮತಗಳನ್ನು ಮರಳಿ ಪಡೆಯುವಲ್ಲಿ ಯಡಿಯೂರಪ್ಪ ಅವರು ಬಿಜೆಪಿಗೆ ಈಗ ನಿರ್ಣಾಯಕರಾಗಿದ್ದಾರೆ. ಆದ್ದರಿಂದಲೇ ಅವರ ಮಾತಿಗೆ ಪಕ್ಷದಲ್ಲಿ ಇದೀಗ ಹೆಚ್ಚಿನ ಮನ್ನಣೆ ನಡೆಯುತ್ತಿದೆ. ಬಹುಶಃ ಇದು ಪಕ್ಷದ ಹೈಕಮಾಂಡ್‌ನ ಜಾಣ ನಡೆಯೂ ಹೌದು; ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪಿನ ತಿದ್ದುಪಡಿಯೂ ಹೌದು.
ಇದು ಚುನಾವಣಾ ಲೆಕ್ಕಾಚಾರದ ಮಾತಾಗಿದ್ದರೆ, ಅಶೋಕ್ ವ್ಯಕ್ತಿಗತವಾಗಿಯೂ ಪಕ್ಷವನ್ನು ಮುನ್ನಡೆಸಬಲ್ಲ ನಾಯಕತ್ವ ಗುಣ ಹೊಂದಿದವರು. ವಿದ್ಯಾರ್ಥಿ ನಾಯಕನಾಗಿಯೇ ಗಮನ ಸೆಳೆದು ತುರ್ತು ಪರಿಸ್ಥಿತಿಯ (Emergency) ವೇಳೆ ಜೈಲು ವಾಸ ಅನುಭವಿಸಿ ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೇರಿ ರಾಜ್ಯದ ಉಪಮುಖ್ಯಮಂತ್ರಿಯಾಗುವವರೆಗೆ 53 ವರ್ಷಗಳ ಹೋರಾಟ ಮತ್ತು ಜನಸೇವೆಯ ಅನುಭವ ಹೊಂದಿದ್ದಾರೆ. ಅವರ ನಾಯಕತ್ವ ಮತ್ತು ದೂರದೃಷ್ಟಿತ್ವದ ಮೇಲೆ ನಂಬಿಕೆ ಇಟ್ಟು ಅವರನ್ನು ಪಕ್ಷ ಈ ಮಹತ್ವದ ಹುದ್ದೆಗೇರಿಸಿದೆ. ಶಾಸಕನಾಗಿ 26 ವರ್ಷಗಳ ಅನುಭವ ಹೊಂದಿರುವ ಅಶೋಕ್ ಅವರು ಎಲ್ಲರೊಂದಿಗೆ ಚೆನ್ನಾಗಿ ಬೆರೆಯಬಲ್ಲ ಶಕ್ತಿಯನ್ನು ಹೊಂದಿರುವ ರಾಜಕಾರಣಿ. ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರದ ಹಾಲಿ ಶಾಸಕರಾಗಿರುವ ಆರ್. ಅಶೋಕ್ ಅವರು ಏಳು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ವಿಧಾನಸಭೆ ಕಾರ್ಯಕಲಾಪಗಳ ಒಳಹೊರಗುಗಳನ್ನು ಅವರು ಚೆನ್ನಾಗಿ ಬಲ್ಲವರು. ಹೀಗಾಗಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಅವರಿಗಿಂತ ಒಳ್ಳೆಯ ಆಯ್ಕೆ ಬೇರೊಬ್ಬರಿಲ್ಲ ಎನ್ನಬಹುದು.
ಪ್ರತಿಪಕ್ಷ ನಾಯಕನ ಸ್ಥಾನವೂ ಮುಖ್ಯಮಂತ್ರಿ ಸ್ಥಾನದಷ್ಟೇ ಮುಖ್ಯವಾದುದು. ಮುಖ್ಯಮಂತ್ರಿಗೆ ಇರುವ ಸೌಲಭ್ಯಗಳೂ ಅವರಿಗಿವೆ ಎಂಬುದೊಂದೇ ಇದಕ್ಕೆ ಕಾರಣವಲ್ಲ; ಇಡೀ ಆಡಳಿತ ಪಕ್ಷದ ಕಾರ್ಯವೈಖರಿಯ ಮೇಲೆ ನಿಗಾ ಇಡುವುದು, ಅದು ತಪ್ಪಿದಾಗ ಅದನ್ನು ಟೀಕಿಸಿ ಎಚ್ಚರಿಸುವುದು, ಸದನದ ಒಳಗೂ ಹೊರಗೂ ಅದರ ಹಗರಣಗಳನ್ನು ಬಯಲಿಗೆ ಎಳೆಯುವುದು, ಅದಕ್ಕೆ ತನ್ನ ಪಕ್ಷದ ಶಾಸಕರನ್ನು ಸಜ್ಜುಗೊಳಿಸುವುದು ಇವೆಲ್ಲ ಪ್ರತಿಪಕ್ಷ ನಾಯಕನಿಗೆ ಮುಖ್ಯ. ಅದಕ್ಕಾಗಿ ಸಂಘಟನಾ ಚಾತುರ್ಯ, ನಾಯಕತ್ವ ಗುಣದೊಂದಿಗೆ ಕಲಾಪಗಳಲ್ಲಿ ಮಾತನಾಡುವ ವಾಕ್‌ವೈಖರಿ ಹಾಗೂ ಮುತ್ಸದ್ಧಿತನವೂ ಬೇಕಾಗುತ್ತದೆ. ಪ್ರತಿಪಕ್ಷ ನಾಯಕನ ಸ್ಥಾನ ಎಂಬುದೊಂದು ಬಹುಮುಖ್ಯ ಸಾಂವಿಧಾನಿಕ ಸ್ಥಾನ. ಅದೇ ಇಲ್ಲದಿದ್ದರೆ ವಿಪಕ್ಷವನ್ನು ಮುನ್ನಡೆಸುವವರೇ ಇಲ್ಲದಂತಾಗಿ, ಆಡಳಿತ ಪಕ್ಷಕ್ಕೆ ಮೂಗುದಾರವೂ ಇಲ್ಲದಂತಾಗುತ್ತದೆ. ರಾಜಧಾನಿಯ ಹಾಗೂ ಬಲಿಷ್ಠ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಅಶೋಕ್, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಒಂದು ಘನತೆ ಹಾಗೂ ಚುರುಕುತನ ತರಬಲ್ಲರು. ಚುನಾವಣಾ ಸೋಲಿನ ಬಳಿಕ ಬಿಜೆಪಿ ಮಂಕಾಗಿದೆ, ಸೋಲಿನಿಂದ ಚೇತರಿಸಿಕೊಂಡಿಲ್ಲ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿತ್ತು. ಇದೀಗ ಇಬ್ಬರು ಯುವ ನಾಯಕರನ್ನೇ ಪಕ್ಷ ಮುನ್ನೆಲೆ ತಂದು ಕೂರಿಸಿದೆ; ಹೀಗಾಗಿ ಪ್ರತಿಪಕ್ಷ ಹೆಚ್ಚು ಆಕ್ರಮಣಕಾರಿಯಾಗಿ ಕೆಲಸ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವರ್ಗಾವಣೆ ದಂಧೆ ಆರೋಪ, ಪಾರದರ್ಶಕ ತನಿಖೆ ಅಗತ್ಯ