Site icon Vistara News

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

CAA

Vistara Editorial: CAA Implementation Is Tough Decision Of Modi Government

ಭಾರಿ ಆಕ್ಷೇಪದ ಮಧ್ಯೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಮೊದಲ ಕಂತಿನಲ್ಲಿ 14 ಜನರಿಗೆ ಭಾರತೀಯ ನಾಗರಿಕತ್ವವನ್ನು ನೀಡಲಾಗಿದೆ. ಎಲ್ಲರಿಗೂ ಪೌರತ್ವ ಪ್ರಮಾಣಪತ್ರವನ್ನು ಬುಧವಾರ ವಿತರಿಸಲಾಯಿತು. ಈ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು, 14 ಜನರು ಆನ್​ಲೈನ್​ ಮೂಲಕ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಭಾರತೀಯ ಪೌರತ್ವ ನೀಡಿದ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಜಿಲ್ಲಾ ಮಟ್ಟದ ಸಮಿತಿಗಳು ಗೊತ್ತುಪಡಿಸಿದ ಅಧಿಕಾರಿಗಳ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆಯ ನಂತರ ಅರ್ಜಿಗಳನ್ನು ಅಖೈರು ಮಾಡಲಾಗಿದೆ.

ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಈ ವರ್ಷ ಜಾರಿ ಮಾಡಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರು 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ಬಂದಿದ್ದಲ್ಲಿ ಅವರಿಗೆ ಭಾರತದ ನಾಗರಿಕತ್ವ ನೀಡಲು ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿಗೆ ತಂದಿದೆ. 2019ರಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಕಾಯ್ದೆಯಡಿ ಬರುತ್ತಾರೆ. 2019ರಲ್ಲಿ ಜಾರಿಯಾದರೂ ಇದರ ನಿಯಮಗಳನ್ನು ರೂಪಿಸಲು ಸರ್ಕಾರ 4 ವರ್ಷ ಸಮಯಾವಕಾಶ ತೆಗೆದುಕೊಂಡಿತು. 2024ರ ಮಾರ್ಚ್ 11ರಂದು ಅಧಿಕೃತ ನಿಯಮಾವಳಿಗಳನ್ನು ರೂಪಿಸಿ ಆದೇಶ ಹೊರಡಿಸಿತು. ನಿಗದಿಪಡಿಸಿದ ಪೋರ್ಟಲ್​ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಇವುಗಳನ್ನು ಜಿಲ್ಲಾ ಮಟ್ಟದ ಸಮಿತಿ (ಡಿಎಲ್​ಸಿ), ರಾಜ್ಯ ಮಟ್ಟದ ಸಶಕ್ತ ಸಮಿತಿಯಿಂದ (ಇಸಿ) ಪರಿಶೀಲನೆ ಮಾಡಿದ ಬಳಿಕ ಪೌರತ್ವ ನೀಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ.

ಇದೊಂದು ಐತಿಹಾಸಿಕ ಘಟ್ಟ. ಇತಿಹಾಸದ ಸಂಕಷ್ಟಗಳಲ್ಲಿ ನೊಂದವರು ಒಂದು ನೆಲೆಯನ್ನು ಪಡೆಯಲು ಇಂದು ಸಾಧ್ಯವಾಗಿದೆ. ಯಥಾಪ್ರಕಾರ, ಕೇಂದ್ರ ಸರ್ಕಾರದ ಎದುರಾಳಿಗಳು ಈ ಕ್ರಮವನ್ನು ಹಳಿಯುತ್ತಿದ್ದಾರೆ. ಇದು ಸಂಸತ್​ನಲ್ಲಿ ಅಂಗೀಕಾರಗೊಂಡಾಗ ದೆಹಲಿಯಯಲ್ಲಿ ಮತ್ತು ಅಸ್ಸಾಂನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇದೀಗ ಸರ್ಕಾರ ಎಲ್ಲ ಸಿದ್ಧತೆಗಳ ಬಳಿಕ ಜಾರಿಗೆ ತಂದಿದೆ. ಪಶ್ಚಿಮ ಬಂಗಾಳ, ಕೇರಳದಂಥ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದೂ ಉಂಟು. ಆದರೆ ಕಾಲಕ್ರಮೇಣ ಇದರ ಕುರಿತು ಇದ್ದ ಪ್ರತಿಭಟನೆಯ ಅಂಶ ಕಡಿಮೆಯಾಗಿದೆ. ಆದರೆ ಇದರ ಬಗೆಗೆ ಕೆಲವು ವಲಯದಲ್ಲಿ ಇನ್ನೂ ತಪ್ಪು ಕಲ್ಪನೆ ಉಳಿದಂತಿದೆ. ಇದು ನಿವಾರಣೆ ಆಗುವುದು ಮತ್ತು ಎಲ್ಲರೂ ಇದರ ಜಾರಿಗೆ ಸಹಕರಿಸುವುದು ಮುಖ್ಯ.

ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್​​ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತರಲಾಗಿದೆ ಎಂಬ ಭಯವನ್ನು ಗೃಹ ಸಚಿವರು ಆಗಾಗ ಹೇಳಿಕೆಗಳ ಮೂಲಕ ನಿವಾರಿಸುತ್ತ ಬಂದಿದ್ದಾರೆ. ಸಿಎಎ ಬಗ್ಗೆ ಅಪಪ್ರಚಾರಗಳ ಮೂಲಕ ಈಗಲೂ ಮುಸ್ಲಿಮರನ್ನು ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಮಾತ್ರ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಇರುವುದಲ್ಲ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಕೈಬಿಟ್ಟ ಕಾರಣ ವಿರೋಧ ಪಕ್ಷಗಳಿಂದ ಮತ್ತು ಮುಸ್ಲಿಂ ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇದರಲ್ಲಿ ಹುರುಳಿಲ್ಲ. ಮುಸ್ಲಿಮರಿಗೂ ಈ ಕಾಯಿದೆಗೂ ಯಾವುದೇ ಸಂಬಂಧವಿಲ್ಲ.

ಹಿಂದೂ, ಸಿಖ್, ಬೌದ್ಧರಿಗೆ ಭಾರತ ಹೊರತುಪಡಿಸಿ ಪೌರತ್ವ ಪಡೆಯಲು ಬೇರೆ ದೇಶಗಳೇ ಇಲ್ಲ. ಇತಿಹಾಸವನ್ನು ನೋಡಿದರೆ, ಭಾರತ, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆ ನಡೆದಿರುವುದು ತಿಳಿಯುತ್ತದೆ. ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಸಮುದಾಯಗಳಲ್ಲಿ ಅನೇಕರ ಟ್ರಾವೆಲ್‌ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ ಅಥವಾ ಅಪೂರ್ಣ ದಾಖಲೆಗಳಿವೆ ಅಥವಾ ಅವರ ಬಳಿ ದಾಖಲೆಗಳೇ ಇಲ್ಲ. ಮೋದಿ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಈ ರೀತಿಯ ವಲಸಿಗರಿಗೆ ಪಾಸ್‌ಪೋರ್ಟ್‌ ಅಧಿನಿಯಮ (ಭಾರತ ಪ್ರವೇಶಕ್ಕೆ) 1920ರ ಹಾಗೂ ವಿದೇಶಿ ಅಧಿನಿಯಮ 1946ರ ಪ್ರತಿಕೂಲ ದಂಡನಾರ್ಹ ಅಂಶಗಳಿಂದಲೂ ವಿನಾಯಿತಿ ನೀಡಿದೆ. ಇದಷ್ಟೇ ಅಲ್ಲದೇ 2016ರಲ್ಲಿ ಮೋದಿ ಸರ್ಕಾರ ಈ ನಿರಾಶ್ರಿತರಿಗೆ ದೀರ್ಘ‌ಕಾಲಿಕ ವೀಸಾ ಪಡೆಯಲೂ ಅರ್ಹರನ್ನಾಗಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಒಟ್ಟಲ್ಲಿ, ಧಾರ್ಮಿಕ ಹಿಂಸೆಗೆ ತುತ್ತಾಗಿರುವವರಿಗೆ ನಾಗರಿಕತೆ ದೊರಕುವಂತೆ ಮಾಡಲು ಸಶಕ್ತಗೊಳಿಸುತ್ತದೆ.

ಸಂವಿಧಾನದ ಅನುಚ್ಛೇದ 25, ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಾದ ಧರ್ಮವನ್ನು ಮುಕ್ತವಾಗಿ ಅನುಸರಿಸಲು, ಆಚರಿಸಲು ಸಮಾನ ಹಕ್ಕನ್ನು ನೀಡುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ರೀತಿಯಲ್ಲೂ ಈ ಅಂಶಗಳನ್ನು ಉಲ್ಲಂಘಿಸಿಲ್ಲ. ಸಿಎಎಯಿಂದಾಗಿ ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ, ಭಾರತೀಯ ಜಾತ್ಯತೀತ ಮೌಲ್ಯಗಳ ಮತ್ತು ಸಂಪ್ರದಾಯಗಳ ಹನನವಾಗುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಸಿಎಎ ಎನ್ನುವುದು ಅನ್ಯಾಯವನ್ನು ಎದುರಿಸುತ್ತಿರುವ ಸಾವಿರಾರು ನಿರ್ವಸಿತ ಕುಟುಂಬಗಳನ್ನು ಸಬಲೀಕರಣಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಇದು ಸಮರ್ಪಕವಾಗಿ ಅನುಷ್ಠಾನಕ್ಕೂ ಬರುತ್ತಿದೆ ಎಂದು ಸಂತೋಷಪಡೋಣ.

ಇದನ್ನೂ ಓದಿ: CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Exit mobile version