ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಶುಕ್ರವಾರ ನಡೆಸಿದ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಸೆ. 28ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water regulation Committee) ಆದೇಶವನ್ನೇ ಪ್ರಾಧಿಕಾರವೂ ಎತ್ತಿ ಹಿಡಿದಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ನಡೆದಿತ್ತು. ಶುಕ್ರವಾರ ಕರ್ನಾಟಕ ಬಂದ್ ನಡೆದಿದೆ. ಎರಡೂ ಬಂದ್ಗಳೂ ಬಹುತೇಕ ಯಶಸ್ವಿಯಾಗಿವೆ. ಎರಡಕ್ಕೂ ಜನ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಆಕ್ರೋಶವಿದೆ. ಆದರೆ ರಾಜ್ಯದ ಆಕ್ರೋಶಕ್ಕೆ ಪ್ರಾಧಿಕಾರಗಳು, ಕೋರ್ಟ್ಗಳು ಯಾವಾ ಸ್ಪಂದಿಸುತ್ತವೆಯೋ ಗೊತ್ತಿಲ್ಲ. ತಮಿಳುನಾಡಿನಲ್ಲಿ ಕುಳಿತಿರುವ ಕಟುಕರಿಗೆ ಕರ್ನಾಟಕದ ಬವಣೆ ಅರ್ಥವಾಗುತ್ತಿಲ್ಲ(Vistara Editorial).
ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ, ಬರ ಪರಿಸ್ಥಿತಿ ತೀವ್ರವಾಗಿದೆ ಎಂಬ ರಾಜ್ಯದ ಯಾವ ವಾದವನ್ನೂ ಲೆಕ್ಕಿಸದೆ ಕಾವೇರಿ ಪ್ರಾಧಿಕಾರ ತನ್ನದೇ ಹಠಮಾರಿ ನಿಲುವನ್ನು ಮುಂದುವರಿಸಿದೆ. ಈ ಕಾರಣದಿಂದಾಗಿಯೇ ತಮಿಳುನಾಡಿಗೆ ನೀರು ಬಿಡಬೇಕು ಎಂಬ CWRCಯ ಆದೇಶವನ್ನು ಮತ್ತೆ ಎತ್ತಿ ಹಿಡಿದಿದೆ. CWRC ಕಳೆದ ಸೆ. 26ರಂದು ನಡೆಸಿದ ಸಭೆಯಲ್ಲಿ ತಮಿಳುನಾಡಿಗೆ ಸೆ. 28ರಿಂದ ಅ.15ರವರೆಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡಬೇಕು ಎಂದು ಆದೇಶಿಸಿತ್ತು. ಇದೀಗ ಕರ್ನಾಟಕವು ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವೊಂದೇ ಬಾಕಿ ಉಳಿದಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ನ್ಯಾಯಮೂರ್ತಿಗಳೊಂದಿಗೆ ಮುಂದಿನ ಹೆಜ್ಜೆಯ ಬಗ್ಗೆ ಸಮಾಲೋಚಿಸಿದ್ದಾರೆ. ಕಾವೇರಿ ಪ್ರಾಧಿಕಾರದ ಸಭೆಗೂ ಮುನ್ನವೇ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಬಹುದು ಎಂದು ವಿರೋಧ ಪಕ್ಷಗಳು ಸಲಹೆ ನೀಡಿದ್ದವು. ಆದರೆ, ಸರ್ಕಾರ ಪ್ರಾಧಿಕಾರದ ಆದೇಶಕ್ಕಾಗಿ ಕಾಯುತ್ತಿತ್ತು. ಈಗ ಕಾವೇರಿ ನದಿ ಪ್ರಾಧಿಕಾರದ ಆದೇಶವೂ ಕರ್ನಾಟಕಕ್ಕೆ ಹಿನ್ನಡೆಯಾಗಿರುವುದರಿಂದ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದಾಗಿದೆ.
ಕಾವೇರಿ ಪ್ರಾಧಿಕಾರದ ಶುಕ್ರವಾರದ ಸಭೆಯಲ್ಲೂ ತಮಿಳುನಾಡು ತನ್ನ ಮೊಂಡುವಾದವನ್ನೇ ನಡೆಸಿತು. ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶವೇ ಸರಿಯಿಲ್ಲ. ನಮಗೆ ಕೊಡಬೇಕಾಗಿರುವುದು 3000 ಕ್ಯೂಸೆಕ್ ನೀರಲ್ಲ. 12500 ಕ್ಯೂಸೆಕ್ ನೀಡಬೇಕು ಎಂದೇ ವಾದಿಸಿತು. ಕರ್ನಾಟಕವು ರಾಜ್ಯದ ಪರಿಸ್ಥಿತಿ ಜಲಾಶಯದಲ್ಲಿರುವ ನೀರಿನ ಮಟ್ಟವನ್ನು ವಿವರಿಸಿದರೂ ವಾದಕ್ಕೆ ಬೆಲೆ ಸಿಗಲಿಲ್ಲ. ಬಹುಶಃ ಬಿಟ್ಟರೆ ಇಡೀ ಕಾವೇರಿ ನೀರೆಲ್ಲಾ ತನಗೇ ಬೇಕು ಎಂದು ವಾದಿಸುವುದಕ್ಕೂ ತಮಿಳುನಾಡು ಹೇಸುವುದಿಲ್ಲ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ತಮಿಳುನಾಡಿನ ಪರ ನಿಲ್ಲುತ್ತಿರುವುದು ಇದು ಮೂರನೇ ಬಾರಿ. ಮೊದಲು ಆಗಸ್ಟ್ 26ರಂದು 5000 ಕ್ಯೂಸೆಕ್, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶ ಮಾಡಿದ್ದ ಸಮಿತಿ ಇದೀಗ ಮೂರನೇ ಸಲ ಆದೇಶ ನೀಡಿದೆ. ಹಿಂದಿನ ಎರಡೂ ಸಂದರ್ಭದಲ್ಲೂ ಅದು ಕರ್ನಾಟಕದ ವಾದಗಳಿಗೆ ಮನ್ನಣೆ ನೀಡಿಲ್ಲ. ಸುಪ್ರೀಂ ಕೋರ್ಟ್, ಪ್ರಾಧಿಕಾರ ಹೇಳಿದ್ದು ಸರಿ ಇರುತ್ತದೆ ಎಂದಿತ್ತು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತವೇ ನಮ್ಮ ಫೇವರಿಟ್ ತಂಡ, ಕ್ರಿಕೆಟ್ ವಿಶ್ವಕಪ್ ಗೆಲ್ಲಲಿ
ಹಾಗಿದ್ದರೆ ಈ ಸಮಸ್ಯೆ ಪರಿಹಾರಕ್ಕೆ ದಾರಿ ಏನು? ಎರಡೂ ರಾಜ್ಯಗಳಿಗೆ ಸೇರದ ಸ್ವತಂತ್ರ ಸಮಿತಿಯೊಂದನ್ನು ರಚಿಸಿ ರಾಜ್ಯಗಳ ನೀರಿನ ಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಲು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಬೇಕಾಗಿದೆ. ಇದೇ ಮಾತನ್ನು ನೀರಾವರಿ ವಿಚಾರದಲ್ಲಿ ಸಾಕಷ್ಟು ಅಧ್ಯಯನ ಹಾಗೂ ಅನುಭವವನ್ನು ಹೊಂದಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರೂ ಇತ್ತೀಚೆಗೆ ಹೇಳಿದ್ದರು. ಎರಡೂ ರಾಜ್ಯಗಳಿಗೆ ಸೇರದ ಮೂರನೆಯ ತಜ್ಞರಿಂದ ವಸ್ತುನಿಷ್ಠತೆ ನಿರೀಕ್ಷಿಸಬಹುದು. ಸಂಕಷ್ಟ ಸೂತ್ರವಿಲ್ಲ ಎಂಬ ಮಾತನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟು ಲೋಕಾರ್ಪಣೆಗೊಂಡು 90 ವರ್ಷಗಳಾದವು. ಇಂದಿಗೂ ಇದರ ನೀರನ್ನು ಹಂಚಿಕೊಳ್ಳುವ ಉಭಯ ರಾಜ್ಯಗಳ ನಡುವೆ ಸಂಕಷ್ಟ ಸೂತ್ರವೊಂದು ಇಲ್ಲದಿರುವುದು ವಿಚಿತ್ರ. ಎಷ್ಟು ನೀರು ಇದ್ದಾಗ ಎಷ್ಟು ಪ್ರಮಾಣದಲ್ಲಿ ಬಿಡಬೇಕು ಎಂಬ ಸೂತ್ರವೊಂದು ಮೊದಲಾಗಿ ರೂಪುಗೊಳ್ಳಬೇಕಿದೆ.
ಕರ್ನಾಟಕದಲ್ಲಿರುವ ಬರದ ಪರಿಸ್ಥಿತಿಯನ್ನು ಪ್ರಾಥಮಿಕವಾಗಿ ಪರಿಗಣಿಸಬೇಕು. ತಮಿಳುನಾಡು ಕೃಷಿಗೆ ನೀರನ್ನು ಅಪೇಕ್ಷಿಸುತ್ತಿದೆ. ಆದರೆ ಕರ್ನಾಟಕದ ಚಿಂತೆ ಕುಡಿಯುವ ನೀರಿನದಾಗಿದೆ. ಈಗಾಗಲೇ ಮಂಡ್ಯ ಸೀಮೆಯ ರೈತರು ಎರಡನೇ ಬೆಳೆಗೆ ನೀರು ದೊರೆಯಬಹುದು ಎಂಬ ಆಸೆಯನ್ನು ಬಿಟ್ಟಿದ್ದಾರೆ. ಕೋರ್ಟ್ ಮತ್ತು ಪ್ರಾಧಿಕಾರ ಇದೇ ಆದೇಶವನ್ನು ಮುಂದುವರಿಸಿದರೆ ಮಂಡ್ಯ, ಮೈಸೂರು, ಬೆಂಗಳೂರು ಮೂರು ನಗರಗಳ ಜನತೆ ಕುಡಿಯುವ ನೀರಿನ ಹಂಬಲವನ್ನೇ ಬಿಡಬೇಕಾಗಿ ಬರುತ್ತದೋ ಏನೋ. ತಮಿಳುನಾಡಿಗೆ ನೈಋತ್ಯ ಮಾನ್ಸೂನ್ನ ಭಾಗ್ಯವಿದೆ. ಆದರೆ ಬೆಂಗಳೂರು, ಮೈಸೂರಿಗೆ ಅದಿಲ್ಲ. ತಮಿಳುನಾಡಿನ ಕೃಷಿಗೆ ಬೇಕಾದಷ್ಟು ಮಳೆಯಾಗಿದೆ. ಕುಡಿಯುವ ನೀರಿಗೂ ಸಂಕಷ್ಟವಿಲ್ಲ. ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುವ ನೀರಿನ ಮೇಲೆ ತಮಿಳುನಾಡು ನಿಗಾ ಇಡುವುದಿಲ್ಲ. ಇದನ್ನೆಲ್ಲ ಗಟ್ಟಿ ದನಿಯಲ್ಲಿ ಕರ್ನಾಟಕ ಹೇಳಬೇಕಿದೆ. ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈಗಲಾದರೂ ಸೆಟೆದು ನಿಲ್ಲುವುದು, ಜೋರಾಗಿ ʼಏನೇ ಬರಲಿ, ನೀರು ಬಿಡುವುದಿಲ್ಲʼ ಎಂದು ಹೇಳಿ ದಕ್ಕಿಸಿಕೊಳ್ಳುವುದು ಕರ್ನಾಟಕಕ್ಕೆ ಸಾಧ್ಯವಾಗಬೇಕು. ಎರಡೆರಡು ಬಂದ್ಗಳು ವ್ಯರ್ಥವಾಗಬಾರದು. ಜನತೆಯ ಆಕ್ರೋಶ ಈ ಎರಡು ಬಂದ್ಗಳಲ್ಲಿ ಇದುವರೆಗೆ ಶಾಂತವಾಗಿಯೇ ವ್ಯಕ್ತವಾಗಿದೆ. ಪರಿಸ್ಥಿತಿ ಕೈಮೀರಿದರೆ ಅದು ಯಾವ ಸ್ವರೂಪ ಪಡೆಯುತ್ತದೋ, ಹೇಳುವವರ್ಯಾರು? ಅದಕ್ಕೂ ಮುನ್ನ ಕರ್ನಾಟಕಕ್ಕೆ ನ್ಯಾಯ ಸಿಗಲಿ.